Advertisement

ಜಿಲ್ಲೆಯಲ್ಲಿ 22 ಚೆಕ್‌ಪೋಸ್ಟ್‌ ಆರಂಭ

10:19 AM Mar 16, 2019 | Team Udayavani |

ಚಿಕ್ಕಮಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ನೀತಿ ಸಂಹಿತೆಯನ್ನು ಗಂಭೀರವಾಗಿ ಪರಿಗಣಿಸುವುದರ ಜೊತೆಗೆ ಉಲ್ಲಂಘನೆಯಾಗದಂತೆ ನಿಗಾವಹಿಸಲು ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌ ಸೂಚಿಸಿದರು. 

Advertisement

ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಸಂಬಂಧ ನೇಮಕವಾಗಿರುವ ಸೆಕ್ಟರ್‌ ಅಧಿಕಾರಿಗಳು ಪ್ಲೆಯಿಂಗ್‌ ಸ್ಕ್ವಾಡ್‌ ಹಾಗೂ ಚೆಕ್‌ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಮ್ಮ ಕರ್ತವ್ಯದ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸುವುದರ ಜೊತೆಗೆ ಶಾಂತಿಯುತವಾಗಿ ಹಾಗೂ ಸುಗಮವಾಗಿ ಚುನಾವಣೆ ನಡೆಸಲು ಕ್ರಮ ವಹಿಸುವಂತೆ ತಿಳಿಸಿದರು.

ಜಿಲ್ಲಾದ್ಯಂತ ವಿಧಾನ ಸಭಾಕ್ಷೇತ್ರವಾರು ಒಟ್ಟು 22 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌. ಕೆ.ಬಾರ್ಡರ್‌ (ದಕ್ಷಿಣ ಕನ್ನಡ ಜಿಲ್ಲೆ ಗಡಿ) ಬೇಗಾರು (ಉಡುಪಿ ಜಿಲ್ಲೆ ಗಡಿ) ಗಡಿಕಲ್ಲು, ಕೊರಳಕೊಪ್ಪ (ಶಿವಮೊಗ್ಗ ಜಿಲ್ಲೆ ಗಡಿ). ಮೂಡಿಗೆರೆ ಕ್ಷೇತ್ರದ -ಕುದುರೆಮುಖ, ಕೊಟ್ಟಿಗೆಹಾರ (ದಕ್ಷಿಣ ಕನ್ನಡ ಜಿಲ್ಲೆ ಗಡಿ) ಕಿರುಗುಂದ, ಕಸ್ಕೆಬೈಲು, ಬಸ್ಕಲ್‌, ಮಾಗಡಿ, ಕೈಮರ (ಹಾಸನ ಜಿಲ್ಲೆ ಗಡಿಗಳು). ಚಿಕ್ಕಮಗಳೂರು ಕ್ಷೇತ್ರದ ಕೆ.ಬಿ ಹಾಳ್‌, ದೇವನೂರು (ಹಾಸನ ಜಿಲ್ಲೆ ಗಡಿಗಳು), ತರೀಕೆರೆ
ಕ್ಷೇತ್ರದ ಎಂ.ಸಿ.ಹಳ್ಳಿ ಎಂ.ಎನ್‌ಕ್ಯಾಂಪ್‌, ಲಕ್ಕವಳ್ಳಿ (ಶಿವಮೊಗ್ಗ ಜಿಲ್ಲೆ ಗಡಿಗಳು) ನಾಗಭುವನಹಳ್ಳಿ (ದಾವಣಗೆರೆ ಜಿಲ್ಲೆ ಗಡಿ) ಭಕ್ತನಕಟ್ಟೆ (ಚಿತ್ರದುರ್ಗ ಜಿಲ್ಲೆ ಗಡಿ). ಕಡೂರು ಕ್ಷೇತ್ರದ ಬಸವನಹಳ್ಳಿ ದಿಬ್ಬ (ಹಾಸನ ಜಿಲ್ಲೆ ಗಡಿ) ಪಂಚನಹಳ್ಳಿ (ಹಾಸನ ಮತ್ತುಚಿತ್ರದುರ್ಗ ಜಿಲ್ಲಾ ಗಡಿ)ಅಹಮದ್‌ ನಗರ, ದೇವರಹಳ್ಳಿ, ಮರವಂಜಿ, ಚೌಳಹಿರಿಯೂರು (ಚಿತ್ರದುರ್ಗ ಜಿಲ್ಲಾ ಗಡಿಗಳು) ಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಅಲ್ಲದೆ ಪ್ರತಿ ವಿಧಾನ ಸಭಾಕ್ಷೇತ್ರವಾರು 6 ರಂತೆ 30 ಫ್ಲೆಯಿಂಗ್‌ ಸ್ಕ್ವಾಡ್‌ಗಳನ್ನು ನೇಮಿಸಲಾಗಿದ್ದು, ಇಲ್ಲಿ ಒಬ್ಬರು ಅಬಕಾರಿ, ಒಬ್ಬರು ಪೊಲೀಸ್‌ ಇಲಾಖೆಯಿಂದ ಇರುವರಲ್ಲದೆ ಒಬ್ಬ ಹಿರಿಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದರು.
 
ಪ್ರಚಾರಕ್ಕೆ ಬಳಸುವ ಬ್ಯಾನರ್‌, ಪ್ಲೆಕ್ಸ್‌ ಬಂಟಿಂಗ್ಸ್‌, ಕರಪತ್ರ, ಕಾರ್ಯಕ್ರಮ ವೇದಿಕೆ ಹಾಗೂ ವೇದಿಕೆ ಅಲಂಕಾರ ಪ್ರತಿಯೊಂದಕ್ಕೂ ಅನುಮತಿ ಪಡೆಯಬೇಕು. ಅನುಮತಿ ಪಡೆಯದ ಸಂದರ್ಭದಲ್ಲಿ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು. ಚುನಾವಣಾ ಕಾರ್ಯ ನಿರ್ವಹಿಸುವ ಸೆಕ್ಟರ್‌ ಅಧಿಕಾರಿಗಳು ಹಾಗೂ ಫ್ಲೆಯಿಂಗ್‌ ಸ್ಕ್ವಾಡ್‌ಗಳು ವಾಹನಗಳ ಮೇಲೆ ಚುನಾವಣಾ ತುರ್ತು ಎಂಬ ಸ್ಟಿಕ್ಕರ್‌ ಹಾಕುವಂತೆ ತಿಳಿಸಿದರು.

ಗುರುತಿನ ಚೀಟಿ ಹಾಗೂ ಆದೇಶ ಪ್ರತಿಯನ್ನು ತಮ್ಮ ಬಳಿ ಇರಿಸಿಕೊಳ್ಳಬೇಕು. ವಾಹನಗಳನ್ನು ತಪಾಸಣೆ ಮಾಡುವಾಗ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ತಪಾಸಣೆ ಮಾಡಬೇಕು ಎಂದ ಅವರು, 50 ಸಾವಿರ ಕ್ಕಿಂತ ಹೆಚ್ಚು ಹಣಕೊಂಡೊಯ್ಯುವಂತಿಲ್ಲ. ಇದಕ್ಕೆ ದಾಖಲೆ ಇರಬೇಕು. ದಾಖಲೆ ಇಲ್ಲದಿದ್ದರೆ ಮುಟ್ಟುಗೋಲು ಹಾಕಿಕೊಳ್ಳಬೇಕು. ಹೀಗೆ ಮುಟ್ಟುಗೋಲು ಹಾಕಿಕೊಂಡ ಹಣವನ್ನು ಖಜಾನೆಯಲ್ಲಿ ಇಟ್ಟು ರಸೀದಿ ಪಡೆಯಬೇಕಲ್ಲದೆ 10 ಲಕ್ಷಕ್ಕಿಂತ ಹೆಚ್ಚು ಹಣ ಸಿಕ್ಕರೆ ಅದನ್ನು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರಬೇಕು ಎಂದು ಹೇಳಿದರು. ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಾಗೂ ಎಂ.ಸಿ.ಸಿ ನೋಡೆಲ್‌ ಅಧಿಕಾರಿ ಸೋಮಸುಂದರ್‌ ಹಾಜರಿದ್ದರು.

Advertisement

ನೋಟಿಸ್‌ ನೀಡಲು ಸೂಚನೆ: ಸಭೆಗೆ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರು. ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಅಪರ ಜಿಲ್ಲಾಧಿಕಾರಿ ಡಾ|ಕುಮಾರ್‌ ಸೂಚಿಸಿದರು. ಅಲ್ಲದೆ ಗೈರು ಹಾಜರಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next