ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ 215 ಜಿಲ್ಲೆಗಳಲ್ಲಿ ಈ ವರೆಗೆ ಯಾವುದೇ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಜತೆಗೆ, ಸೋಂಕಿನ ಗುಣಮುಖ ಪ್ರಮಾಣ ಶೇ.29.36ಕ್ಕೇರಿಕೆಯಾಗಿದ್ದು, 16,540 ರೋಗಿಗಳು ಚೇತರಿಕೆಯಾಗಿ ಮನೆಗೆ ತೆರಳಿದ್ದಾರೆ ಎಂದೂ ತಿಳಿಸಿದೆ. ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂದು ಸರಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿದರೆ, ಹೊಸ ಪ್ರಕರಣಗಳನ್ನು ತಡೆಯಲು ಸಾಧ್ಯ. ಅಲ್ಲದೆ ಇನ್ನು ಮುಂದೆ ಜನರೆಲ್ಲರೂ ವೈರಸ್‌ನೊಂದಿಗೇ ಜೀವಿಸಲು ಕಲಿಯಬೇಕು ಎಂದೂ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ.
ಇದೇ ವೇಳೆ, 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 3,390 ಹೊಸ ಪ್ರಕರಣ ಪತ್ತೆಯಾಗಿದ್ದು, 103 ಮಂದಿ ಸಾವಿಗೀಡಾಗಿದ್ದಾರೆ. ಒಂದೇ ದಿನದಲ್ಲಿ 1,273 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದೂ ಅಗರ್ವಾಲ್ ಹೇಳಿದ್ದಾರೆ.
ದೇಶದ 42 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಮತ್ತು 29 ಜಿಲ್ಲೆಗಳಲ್ಲಿ ಕಳೆದ 21 ದಿನಗಳಿಂದ ಹೊಸದಾಗಿ ಯಾರಿಗೂ ಸೋಂಕು ದೃಡಪಟ್ಟಿಲ್ಲ. ಅಂತೆಯೇ, 36 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಮತ್ತು 46 ಜಿಲ್ಲೆಗಳಲ್ಲಿ ಏಳು ದಿನಗಳಿಂದ ಹೊಸ ಪ್ರಕರಣ ಪತ್ತೆಯಾಗಿಲ್ಲ ಎಂದಿದ್ದಾರೆ ಅಗರ್ವಾಲ್ ಜತೆಗೆ, ಪ್ಲಾಸ್ಮಾ ಚಿಕಿತ್ಸೆಯ ಪರಿಣಾಮಕಾರಿತ್ವ ಮತ್ತು ಸುರಕ್ಷತೆ ಕುರಿತು ಅರಿಯಲು ಐಸಿಎಂಆರ್ ಕರ್ನಾಟಕದ ಒಂದು ಆಸ್ಪತ್ರೆ ಸೇರಿದಂತೆ ಒಟ್ಟಾರೆ 21 ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲಿದೆ ಎಂದೂ ಹೇಳಿದ್ದಾರೆ.
ಕರ್ನಾಟಕದ ಸಚಿವರ ಜತೆ ಚರ್ಚೆ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ಕರ್ನಾಟತ, ತಮಿಳುನಾಡು ಮತ್ತು ತೆಲಂಗಾಣದ ಆರೋಗ್ಯ ಸಚಿವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ಈ ನಡುವೆ, ದೇಶದಲ್ಲಿ 821 ಕೊರೊನಾ ಕೇಂದ್ರಿತ ಆಸ್ಪತ್ರೆಗಳಿದ್ದು, 1.5 ಲಕ್ಷ ಐಸೊಲೇಶನ್ ಬೆಡ್ ಗಳು ಹಾಗೂ ಐಸಿಯು ಸೌಲಭ್ಯಗಳು ಇವೆ ಎಂದು ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ. ಶುಕ್ರವಾರದವರೆಗೆ 14.40 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದ್ದು, ಪ್ರತಿದಿನ 95 ಸಾವಿರ ಕೊರೊನಾ ಪರೀಕ್ಷೆ ಗಳನ್ನು ನಡೆಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
5 ಜಿಲ್ಲೆಗಳಲ್ಲಿ ಐಸಿಎಂಆರ್ ಅಧ್ಯಯನ
ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಹಬ್ಬಿರುವ 75 ಜಿಲ್ಲೆಗಳಲ್ಲಿ ಅಧ್ಯಯನ ಕೈಗೊಂಡು, ರೋಗಲಕ್ಷಣ ಕಂಡುಬರದೇ ಇದ್ದರೂ ಸೋಂಕಿಗೆ ಒಳಗಾದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಐಸಿಎಂಆರ್ ನಿರ್ಧರಿಸಿದೆ.
ಹೇಗೆ ಅಧ್ಯಯನ?: ಕೆಂಪು, ಕಿತ್ತಳೆ ಮತ್ತು ಹಸುರು ವಲಯವಿರುವ ಜಿಲ್ಲೆಗಳಲ್ಲಿನ ಕೆಲವು ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ರೋಗದ ಅಲ್ಪಪ್ರಮಾಣದ ಲಕ್ಷಣವಿರುವವರೂ ಅಥವಾ ಯಾವುದೇ ಲಕ್ಷಣ ಇರದವರನ್ನೂ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಅನಂತರ ಅವರ ದೇಹದಲ್ಲಿ ಕೊರೊನಾ ಸೋಂಕಿನ ವಿರುದ್ಧದ ಪ್ರತಿಕಾಯಗಳು ಸೃಷ್ಟಿಯಾಗಿವೆಯೇ ಎಂದು ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಅವರ ದೇಹದಲ್ಲಿ ಪ್ರತಿಕಾಯಗಳು ಕಂಡುಬಂದರೆ, ಅವರಿಗೆ ಕೊರೊನಾ ಸೋಂಕು ತಗಲಿತ್ತು ಹಾಗೂ ಅದರ ವಿರುದ್ಧ ಹೋರಾಡಿ ಗೆಲ್ಲುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಅರ್ಥ. ಅವರಲ್ಲಿ ಯಾವುದೇ ರೋಗಲಕ್ಷಣ ಕಂಡುಬರದ ಕಾರಣ, ಅವರಿಗೆ ಸೋಂಕು ತಗಲಿರುವ ವಿಚಾರವೇ ಗೊತ್ತಿರುವುದಿಲ್ಲ. ಆದರೆ, ದೇಹದಲ್ಲಿರುವ ಪ್ರತಿಕಾಯಗಳು ಸೋಂಕಿನ ವಿರುದ್ಧ ಹೋರಾಟ ನಡೆಸಿರುತ್ತವೆ.