ಚಿಕ್ಕಬಳ್ಳಾಪುರ: ಜಿಲ್ಲೆಯ ಜನರ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷವಾಗಿ ಕೃಷಿ ಹಾಗೂ ಉದ್ದಿಮೆಗಳ ಅಭಿವೃದ್ಧಿಗೆ ಒತ್ತು ಕೊಡುವ ದಿಸೆಯಲ್ಲಿ ನಬಾರ್ಡ್ ವತಿಯಿಂದ ಜಿಲ್ಲೆಗೆ 2020-21ನೇ ಸಾಲಿಗೆ ಒಟ್ಟು 2,137 ಕೋಟಿ ರೂ. ಸಾಲ ಯೋಜನೆ ರೂಪಿಸಿದೆ ಎಂದು ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್ ತಿಳಿಸಿದರು.
ನಗರದ ಜಿಪಂ ಮಿನಿ ಸಭಾಂಗಣದಲ್ಲಿ 2020-21ನೇ ಸಾಲಿನ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉದ್ದಿಮೆದಾರರಿಗೆ ಸೂಕ್ತ ಸಾಲ ಮಂಜೂರು ಮಾಡುವ ಮೂಲಕ ಜಿಲ್ಲೆಯ ಜನರನ್ನು ಸ್ವಾವಲಂಬಿಗಳಾಗಿ ರೂಪಿಸುವ ಮಹತ್ವಕಾಂಕ್ಷೆಯನ್ನು ಸಾಲ ಯೋಜನೆ ಹೊಂದಿದೆ ಎಂದರು.
ಸಾಲ ಸೌಲಭ್ಯ: ಜಿಲ್ಲೆಯಲ್ಲಿ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಅದೇ ರೀತಿ ಸಣ್ಣ, ಅತಿ ಸಣ್ಣ ಉದ್ದಿಮೆದಾರರಿಗೆ ಸೂಕ್ತ ಸಾಲ ಸೌಲಭ್ಯಗಳನ್ನು ನೀಡಿ ಸಣ್ಣ ವ್ಯಾಪಾರಿಗಳಿಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ನಬಾರ್ಡ್ ಜಿಲ್ಲೆಗೆ ಬರೋಬ್ಬರಿ 2,137 ಕೋಟಿ ರೂ. ಸಾಲ ಯೋಜನೆ ರೂಪಿಸಿದೆ. ಈ ಪೈಕಿ ಕೃಷಿಗೆ 850 ಕೋಟಿ ಹಾಗೂ ಉದ್ದಿಮೆದಾರರಿಗೆ ಒಟ್ಟು 1000 ಕೋಟಿ ರೂ. ಸಾಲ ನೀಡಲು ಉದ್ದೇಶಿಸಲಾಗಿದೆ ಎಂದರು.
ಇತರೆ ವಲಯಗಳಲ್ಲಿ ಒಟ್ಟು 500 ಕೋಟಿಗೂ ಮೀರಿ ಹೆಚ್ಚಿನ ಸಾಲ ನೀಡಲಾಗುವುದು. ಬ್ಯಾಂಕರ್‌ಗಳು ಯಾವುದೇ ಕಾರಣಕ್ಕೂ ಸಾಲ ವಿತರಣೆಯಲ್ಲಿ ವಿಳಂಬ ಮಾಡದೇ ಸಕಾಲದಲ್ಲಿ ಫಲಾನುಭವಿಗಳಿಗೆ ಸಾಲ ನೀಡಬೇಕೆಂದರು. ಫಲಾನುಭವಿಗಳು ಕೂಡ ಸಾಲವನ್ನುಸದುದ್ದೇಶಕ್ಕೆ ಬಳಸಿಕೊಂಡು ಸಕಾಲದಲ್ಲಿ ಮರು ಪಾವತಿ ಮಾಡಬೇಕೆಂದರು. ಅರ್ಹರಿಗೆ ಸಾಲ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಉದ್ದೇಶಿತ ಗುರಿ ಸಾಧನೆ ಮಾಡಬೇಕು. ವಿಶೇಷವಾಗಿ ಉದ್ಯೋಗ ಸೃಷ್ಟಿ ಜೊತೆಗೆ ಆರ್ಥಿಕ ಸ್ವಾವಲಂಬನೆಗೆ ಸಾಲ ಯೋಜನೆ ಸದ್ಬಳಕೆ ಆಗಬೇಕೆಂದು ಸಭೆಯಲ್ಲಿ ಉಪಸ್ಥಿತರಿದ್ದ ಬ್ಯಾಂಕರ್‌ಗಳಿಗೆ ಸೂಚಿಸಿದರು. ಸಭೆಯಲ್ಲಿ ಆರ್‌ಬಿಐ ಎಜಿಎಂ ಶಂಕರ್, ನಬಾರ್ಡ್‌ನ ಶ್ರೀನಿವಾಸ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ (ಲೀಡ್ ಬ್ಯಾಂಕ್) ವ್ಯವಸ್ಥಾಪಕ ಬಸವರಾಜ್ ಸೇರಿದಂತೆ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಸ್ಥಳೀಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.