ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿರುವ ಸುಮಾರು 213 ಅಭ್ಯರ್ಥಿಗಳ ವಿರುದ್ಧ ಕೊಲೆ, ಅಪಹರಣ ಹಾಗೂ ಮಹಿಳೆಯರಿಗೆ ಕಿರುಕುಳ ಸೇರಿದಂತೆ ಗಂಭೀರವಾದ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಅಂಕಿಅಂಶದ ವರದಿ ತಿಳಿಸಿದೆ.
ನ್ಯಾಷನಲ್ ಎಲೆಕ್ಷನ್ ವಾಚ್ ಅಂಡ್ ಅಸೋಸಿಯೇಷನ್ ಫಾರ್ ಡೆಮೋಕ್ರಟಿಕ್ ರಿಫಾರ್ಮ್ಸ್ ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿರುವ 1279 ಅಭ್ಯರ್ಥಿಗಳಲ್ಲಿ 1266 ಅಭ್ಯರ್ಥಿಗಳ ಅಫಿಡವಿತ್ ಅನ್ನು ಪರಿಶೀಲಿಸಿ ವಿಶ್ಲೇಷಣಾ ವರದಿಯನ್ನು ಬಿಡುಗಡೆ ಮಾಡಿದೆ.
ಇದರಲ್ಲಿ 13 ಅಭ್ಯರ್ಥಿಗಳ ಅಫಿಡವಿತ್ ಅನ್ನು ಕೂಲಂಕಷವಾಗಿ ಹಾಗೂ ಸಮರ್ಪಕವಾಗಿ ಪರಿಶೀಲನೆ ನಡೆಸದೇ ಇದ್ದ ಹಿನ್ನೆಲೆಯಲ್ಲಿ ಅದರ ವಿಶ್ಲೇಷಣಾ ವಿವರ ಇಲ್ಲ ಎಂದು ಎಡಿಆರ್ ವಿವರಿಸಿದೆ. ವರದಿಯ ಪ್ರಕಾರ, 1266 ಅಭ್ಯರ್ಥಿಗಳ ಪೈಕಿ ಶೇ.12ರಷ್ಟು ಮಂದಿ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. ಶೇ,12ರಷ್ಟು ನ್ಯಾಯಾಲಯದಲ್ಲಿ ದೋಷಿಯಾಗಿದ್ದಾರೆ. 10 ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆ ಮೊಕದ್ದಮೆ ಎದುರಿಸುತ್ತಿರುವುದಾಗಿ ಘೋಷಿಸಿಕೊಂಡಿರುವುದಾಗಿ ತಿಳಿಸಿದೆ.
25 ಅಭ್ಯರ್ಥಿಗಳು ಕೊಲೆ ಯತ್ನ ಮೊಕದ್ದಮೆ ಎದುರಿಸುತ್ತಿದ್ದಾರೆ, 4 ಅಭ್ಯರ್ಥಿಗಳು ಕಿಡ್ನಾಪ್ ಮೊಕದ್ದಮೆ, 16 ಅಭ್ಯರ್ಥಿಗಳು ಮಹಿಳಾ ಸಂಬಂಧಿ ಮೊಕದ್ದಮೆ, 12 ಅಭ್ಯರ್ಥಿಗಳು ಪ್ರಚೋದನಾಕಾರಿ ಭಾಷಣ ಮಾಡಿದ ಮೊಕದ್ದಮೆ ಎದುರಿಸುತ್ತಿರುವುದಾಗಿ ಅಫಿಡವಿತ್ ನಲ್ಲಿ ಘೋಷಿಸಿಕೊಂಡಿದ್ದಾರೆ.
ಏಪ್ರಿಲ್ 11ರಂದು 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಇದರಲ್ಲಿ 37 ಲೋಕಸಭಾ ಕ್ಷೇತ್ರ ರೆಡ್ ಅಲರ್ಟ್ ಎಂದು ಪರಿಗಣಿಸಲಾಗಿದೆ. ರೆಡ್ ಅಲರ್ಟ್ ಅಂದರೆ ಒಂದು ಕ್ಷೇತ್ರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂದು ವರದಿ ವಿವರಿಸಿದೆ.
ಇದರಲ್ಲಿ 83 ಅಭ್ಯರ್ಥಿಗಳಲ್ಲಿ 30 ಬಿಜೆಪಿಗರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ, 35 ಕಾಂಗ್ರೆಸ್ ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ, 32 ಅಭ್ಯರ್ಥಿಗಳಲ್ಲಿ 8 ಮಂದಿ ಬಿಎಸ್ಪಿ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇದ್ದಿರುವುದಾಗಿ ತಿಳಿಸಿದೆ.
ವೈಎಸ್ ಆರ್ ಸಿಪಿಯ 13 ಅಭ್ಯರ್ಥಿಗಳು, ಟಿಡಿಪಿಯ 4 ಹಾಗೂ ಟಿಆರ್ ಎಸ್ ನ 5 ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.