ಕಲಬುರಗಿ: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳಿಗೆ ಅನುಮತಿ ನೀಡದಿರುವ ನಿಟ್ಟಿನಲ್ಲಿ ನೀತಿ ಸಂಹಿತೆಗೆ ಕಠಿಣ ನಿಯಮ ಹೇರಿರುವಾಗ ಇಲ್ಲಿನ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ)ಯಲ್ಲಿ 21 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಇ ಟೆಂಡರ್ ಕರೆಯಲಾಗಿದೆ.
ನೀತಿ ಸಂಹಿತೆ ಜಾರಿಯಲ್ಲಿರುವಾಗ ಟೆಂಡರ್ ಕರೆದಿದ್ದಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ನಿರ್ದೇಶನ ಮೇರೆಗೆ ಇಲ್ಲಿನ ಕಲಬುರಗಿ ದಕ್ಷಿಣ ಮತಕ್ಷೇತ್ರದ ಚುನಾವಣಾಧಿಕಾರಿ ಅಜೀಜ್ ದೇಸಾಯಿ ಅವರು ಜೆಸ್ಕಾಂನ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ 11ಕ್ಕೆ ನೋಟಿಸ್ ಜಾರಿ ಮಾಡಲಾಗಿದ್ದು, 24 ಗಂಟೆಯೊಳಗೆ ಉತ್ತರಿಸಲು ಗಡುವು ನೀಡಲಾಗಿದೆ.
ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಮೀಟರ್ ಅಳವಡಿಕೆ ಸೇರಿದಂತೆ ನಾಲ್ಕು ಕಾಮಗಾರಿಗಳಿಗೆ ನೀತಿ ಸಂಹಿತೆ ಜಾರಿಯಾದ ನಂತರದ ಏ.3 ಹಾಗೂ 4ರಂದು ಇ-ಟೆಂಡರ್ ಕರೆಯಲಾಗಿದ್ದು, ಮೇ 4ರಂದು ಟೆಂಡರ್‌ಗೆ ಕೊನೆ ದಿನ ಎಂಬುದಾಗಿ ನಿಗದಿಪಡಿಸಲಾಗಿದೆ. ಒಟ್ಟಾರೆ ಇದು ಸಂಪೂರ್ಣ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಮೀಟರಿಂಗ್ ವರ್ಕ್ಸ್ ಅಂಡರ್ ಇಂಟಿಗ್ರೇಟೆಡ್ ಪವರ್ ಡೆವಲೆಪಮೆಂಟ್ ಸ್ಕೀಂ 13 ಕೋಟಿ ರೂ. ಕಾಮಗಾರಿಗೆ ಟೆಂಡರ್ 2018, ಏ.4ರಂದು, ಇಂಪ್ಲಿಮೆಂಟಶನ್ ಆಫ್ ಸ್ಮಾರ್ಟ್ ಮೀಟರ್ಸ್ (ಜಿಎಸ್‌ಎಂ/ ಜಿಪಿಆರ್‌ಎಸ್) 3.90 ಕೋಟಿ ರೂ. ಮೊತ್ತದ ಕೆಲಸಕ್ಕೆ 2018, ಏ.4ರಂದು, ಮ್ಯಾನುಫ್ಯಾಕ್ಚರ್ ಆ್ಯಂಡ್ ಸಪ್ಲಾಯಿ ಆಫ್ ಜಿಐ ವೈಯರ್ 75 ಲಕ್ಷ ರೂ. ಮೊತ್ತದ ಕಾಮಗಾರಿಗೆ 2018, ಏ.3ರಂದು ಹಾಗೂ ಮ್ಯಾನುಫಾಕ್ಚರ್ ಆ್ಯಂಡ್ ಸಪ್ಲಾಯಿ ಆಫ್ ಟ್ರಾನ್ಸಫಾರ್ಮರ್ ಆಯಿಲ್ ಕೆಲಸಕ್ಕೆಂದು 2018, ಮಾ.27ರಂದು ಸಂಜೆ 6ಕ್ಕೆ ಟೆಂಡರ್ ಕರೆಯಲಾಗಿದೆ.
ತುರ್ತು ಅವಶ್ಯಕ ಕಾಮಗಾರಿಗಳಿದ್ದಲ್ಲಿ ಅದು ಚುನಾವಣಾ ಆಯೋಗದ ಅನುಮತಿ ಮೇರೆಗೆ ಕಾಮಗಾರಿಗೆ ಟೆಂಡರ್ ಕರೆಯಬಹುದಾಗಿದೆ. ಆದರೆ ಇಲ್ಲಿ ಜೆಸ್ಕಾಂ ಕಳೆದ ಮಾ.16ರಂದು ಕಾಮಗಾರಿ ಸಂಬಂಧವಾಗಿ ಪತ್ರಿಕೆಯಲ್ಲಿ ಪ್ರಕಟಣೆ ನೀಡಲಾಗಿದೆ ಎಂಬುದನ್ನು ತೋರಿಸಿ ಚುನಾವಣಾ ಆಯೋಗದ ಅನುಮತಿ ಇಲ್ಲದೇ ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೂ ಟೆಂಡರ್ ಕರೆದಿದೆ.
ಜೆಸ್ಕಾಂನಲ್ಲಿ ಕರೆಯಲಾಗಿರುವ ಟೆಂಡರ್‌ಗೆ ಸಂಬಂಧವಾಗಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಮೂಲಕ ಜೆಸ್ಕಾಂಗೆ ನೋಟಿಸ್ ನೀಡಲಾಗಿದೆ. ಬುಧವಾರ ನೀಡುವ ಉತ್ತರದ ಮೇಲೆ ಮುಂದಿನ ಹೆಜ್ಜೆ ಇಡಲಾಗುವುದು.
ಆರ್. ವೆಂಕಟೇಶಕುಮಾರ
ಚುನಾವಣಾಧಿಕಾರಿ, ಕಲಬುರಗಿ
ಹಣಮಂತರಾವ ಭೈರಾಮಡಗಿ