Advertisement
ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ. ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿ ತಲೆಮರೆಸಿಕೊಂಡಿರುವ ಐಎಂಎ ಮಾಲೀಕ ಮೊಹಮದ್ ಮನ್ಸೂರ್ ಖಾನ್ ವಿರುದ್ಧ ಪಿಎಂಎಲ್‌ಎ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿದೆ. ಜತೆಗೆ, ಮನ್ಸೂರ್ ವಿರುದ್ಧ ದೇಶಭ್ರಷ್ಟ ಅರ್ಥಿಕ ಅಪರಾಧ ಸಂಬಂಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಇ.ಡಿ ತಿಳಿಸಿದೆ.
Related Articles
Advertisement
ನೋಟು ಅಮಾನ್ಯದ ವೇಳೆಯೂ ಗೋಲ್‌ಮಾಲ್!: ಆರೋಪಿ ಮನ್ಸೂರ್ ಖಾನ್, 2016ರಲ್ಲಿ ನೋಟು ಅಮಾನ್ಯಗೊಂಡ ಸಂಧರ್ಭದಲ್ಲಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ 44 ಕೋಟಿ ರೂ. ಠೇವಣಿ ಇರಿಸಿದ್ದಾನೆ. ಐಎಂಎ ಕಂಪನಿಯಿಂದ ಆದಾಯ ತೆರಿಗೆ ಇಲಾಖೆಗೆ 22 ಕೋಟಿ ರೂ. ತೆರಿಗೆ ಪಾವತಿಸಿದ್ದು, ಅದೇ ಸಂಧರ್ಭದಲ್ಲಿ ಬ್ಯಾಂಕ್‌ವೊಂದರಲ್ಲಿ 11 ಕೋಟಿ ರೂ. ಠೇವಣಿ ಇಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೂಂದೆಡೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿರುವ ಐಎಂಎ ಪ್ರತಿನಿಧಿಗಳು, ಆ ಖಾತೆಗಳಲ್ಲಿ ಇರಿಸಿದ್ದ 11 ಕೋಟಿ ರೂ.ಗಳನ್ನೂ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ.
ಆರೋಪಿ ಮನ್ಸೂರ್ ಖಾನ್ ವಂಚನೆ ಮಾಡುವ ಉದ್ದೇಶದಿಂದಲೇ ಕಂಪನಿ ತೆರೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣದ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸುತ್ತಿದ್ದು, ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶಭ್ರಷ್ಟ ಆರ್ಥಿಕ ಅಪರಾಧಿ ಸ್ಥಾನ!: ಆರೋಪಿ ಮನ್ಸೂರ್ ವಿರುದ್ಧ ಈಗಾಗಲೇ ಇ.ಡಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದು, ಕೇಂದ್ರ ಸರ್ಕಾರ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಿದೆ. ಒಂದು ವೇಳೆ ಮನ್ಸೂರ್ ವಿರುದ್ಧ ದೇಶಭ್ರಷ್ಟ ಆರ್ಥಿಕ ಅಪರಾಧ ಕೇಸ್ ದಾಖಲಾದರೆ, ಮನ್ಸೂರ್ ಖಾನ್, ರಾಜ್ಯದಲ್ಲಿಯೇ ಈ ಆರೋಪ ಹೊತ್ತ ಎರಡನೇ ವ್ಯಕ್ತಿಯಾಗಲಿದ್ದಾನೆ. ಇದೇ ವರ್ಷ ಜನವರಿಯಲ್ಲಿ ಉದ್ಯಮಿ ವಿಜಯ್ ಮಲ್ಯರನ್ನು ಪಿಎಂಎಲ್‌ಎ ವಿಶೇಷ ನ್ಯಾಯಾಲಯ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದೆ.
ಜಿಮ್‌ನಲ್ಲಿ 2.8 ಕೋಟಿ ಮೌಲ್ಯದ ವಸ್ತು ಜಪ್ತಿ: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪುಲಕೇಶಿನಗರದ ಪಾಟರಿ ರಸ್ತೆಯಲ್ಲಿ ಐಎಂಎಗೆ ಸೇರಿದ ಜಿಮ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿ 2.80 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಐಎಎಂ ಕಂಪನಿಗೆ ಸೇರಿದ ಜಿಮ್ ಎಂಬ ಮಾಹಿತಿ ತನಿಖೆ ವೇಳೆ ಬಯಲಾದ ಹಿನ್ನೆಲೆಯಲ್ಲಿ, ಅಡಪ್ಟ್ ಫಿಟ್ನೆಸ್ ಹೆಸರಿನ ಜಿಮ್‌ನಲ್ಲಿ ಶೋಧ ನಡೆಸಲಾಯಿತು. ಅಲ್ಲದೆ, ಮೊಹಮದ್ ಮನ್ಸೂರ್ ಖಾನ್‌ಗೆ ಸೇರಿದ ಇನೋವಾ ಕಾರು ಕೂಡ ಜಪ್ತಿ ಮಾಡಲಾಗಿದ್ದು, ಅದನ್ನು ಮನ್ಸೂರ್ ತನ್ನ ಸಹಚರನಿಗೆ ನೀಡಿದ್ದ. ಮತ್ತೂಂದೆಡೆ ಐಎಂಎಗೆ ಸೇರಿದ 92 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.