Advertisement

ಭಾರತದ ಆತಿಥ್ಯದಲ್ಲಿ 2023ರ ವಿಶ್ವಕಪ್‌

11:57 PM Jul 16, 2019 | sudhir |

ಮುಂಬಯಿ: ಇಂಗ್ಲೆಂಡಿನ ಆತಿಥ್ಯದಲ್ಲಿ ಈ ಬಾರಿಯ ವಿಶ್ವಕಪ್‌ ಕ್ರಿಕೆಟ್‌ ಕೂಟ ಅತ್ಯಂತ ಯಶಸ್ವಿಯಾಗಿ ಮುಗಿದಿದೆ. ಈ ಬಾರಿ ಆತಿಥ್ಯ ವಹಿಸಿದ ಇಂಗ್ಲೆಂಡ್‌ ಪ್ರಶಸ್ತಿ ಗೆಲ್ಲುವ ಮೂಲಕ ಮೊದಲ ಸಲ ಚಾಂಪಿಯನ್‌ ಆಗಿದೆ. ಈ ಹಿಂದಿನ ಎರಡು ವಿಶ್ವಕಪ್‌ ಕೂಟದ ಆತಿಥ್ಯ ವಹಿಸಿದ ರಾಷ್ಟ್ರಗಳೇ ಪ್ರಶಸ್ತಿ ಜಯಿಸಿದ್ದವು. 2011ರಲ್ಲಿ ಭಾರತ ಮತ್ತು 2015ರಲ್ಲಿ ಆಸ್ಟ್ರೇಲಿಯ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದವು.

Advertisement

ಇನ್ನು ಮುಂದಿನ ವಿಶ್ವಕಪ್‌ ಸಂಭ್ರಮಕ್ಕಾಗಿ ನಾಲ್ಕು ವರ್ಷ ಕಾಯಬೇಕಾಗಿದೆ. 2023ರ ವಿಶ್ವಕಪ್‌ನ ಆತಿಥ್ಯವನ್ನು ಭಾರತ ವಹಿಸಲಿದೆ. ಭಾರತ ತನ್ನ ಸ್ವಂತ ಬಲದಲ್ಲಿ ವಿಶ್ವಕಪ್‌ ಕೂಟವೊಂದರ ಆತಿಥ್ಯ ವಹಿಸಲಿರುವುದು ಇದೇ ಮೊದಲ ಸಲವಾಗಿದೆ. ಈ ಹಿಂದೆ ಮೂರು ಬಾರಿ ಭಾರತವು ನೆರೆ ರಾಷ್ಟ್ರಗಳ ಜತೆಗೂಡಿ ವಿಶ್ವಕಪ್‌ ಆಯೋಜಿಸಿತ್ತು.

ಲಂಡನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಸಭೆಯಲ್ಲಿ ವಿಶ್ವಕಪ್‌ ಆತಿಥ್ಯ ರಾಷ್ಟ್ರ ಯಾವುದೆಂದು ನಿರ್ಧರಿಸಲಾಯಿತು. ಭಾರತವು 1987ರಲ್ಲಿ ಪಾಕಿಸ್ಥಾನ ಜತೆ, 1996ರಲ್ಲಿ ಪಾಕಿಸ್ಥಾನ ಮತ್ತು ಶ್ರೀಲಂಕಾ ಹಾಗೂ 2011ರಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಜತೆಗೂಡಿ ವಿಶ್ವಕಪ್‌ ಕೂಟವನ್ನು ಆಯೋಜಿಸಿತ್ತು.

1987ರ ವಿಶ್ವಕಪ್‌ ಮೊದಲ ಬಾರಿ ಇಂಗ್ಲೆಂಡಿನ ಹೊರಗಡೆ ನಡೆದಿತ್ತು. ಈ ಕೂಟವನ್ನು ಭಾರತ ಮತ್ತು ಪಾಕಿಸ್ಥಾನ ಜಂಟಿಯಾಗಿ ಆಯೋಜಿಸಿದ್ದವು. ಪಾಕಿಸ್ಥಾನವು 2011ರ ವಿಶ್ವಕಪ್‌ನ ಸಹ ಆತಿಥ್ಯವನ್ನು ಆರಂಭದಲ್ಲಿ ವಹಿಸಿತ್ತು. ಆದರೆ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನವನ್ನು ಕೈಬಿಡಲಾಗಿತ್ತು. 2011ರ ವಿಶ್ವಕಪ್‌ ಫೈನಲ್‌ ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು.

ಫೆ. 9ರಿಂದ ಮಾ. 26
2023ರ ಐಸಿಸಿ ವಿಶ್ವಕಪ್‌ ಕೂಟವು ಭಾರತದಲ್ಲಿ ಫೆ. 9ರಿಂದ ಮಾ. 26ರ ವರೆಗೆ ನಡೆಯಲಿದೆ. ಈ ಕೂಟದಲ್ಲಿ ಅಗ್ರ 10 ತಂಡಗಳು ಭಾಗವಹಿಸಲಿವೆ. ಅಗ್ರ ಏಳು ತಂಡಗಳ ಸಹಿತ ಭಾರತ ನೇರವಾಗಿ ಅರ್ಹತೆ ಗಳಿಸಲಿದೆ. ಇನ್ನುಳಿದ ಎರಡು ತಂಡಗಳು ವಿಶ್ವಕಪ್‌ ಅರ್ಹತಾ ಕೂಟದ ಮೂಲಕ ಅರ್ಹತೆ ಗಳಿಸಬೇಕಾಗಿದೆ.

Advertisement

ಇಂಗ್ಲೆಂಡ್‌ 5 ಬಾರಿ ಆತಿಥ್ಯ
ಕ್ರಿಕೆಟ್‌ ವಿಶ್ವಕಪ್‌ ಕೂಟದ ಆತಿಥ್ಯವನ್ನು ಇಂಗ್ಲೆಂಡ್‌ ಗರಿಷ್ಠ ಐದು ಬಾರಿ ವಹಿಸಿದೆ. 1975, 1979 ಮತ್ತು 1983ರಲ್ಲಿ ತಾನಾಗಿಯೇ ಆತಿಥ್ಯ ವಹಿಸಿದ್ದರೆ 1999 ಮತ್ತು 2019ರಲ್ಲಿ ಅಯರ್‌ಲ್ಯಾಂಡ್‌, ನೆದರ್ಲೆಂಡ್‌, ಸ್ಕಾಟ್ಲೆಂಡ್‌ ಮತ್ತು ವೇಲ್ಸ್‌ ಜತೆಗೂಡಿ ಆತಿಥ್ಯ ವಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next