ಕಾಲದ ಹೆಜ್ಜೆಯೇ ಹಾಗೆ. ಒಂದಷ್ಟು ಯಶಸ್ಸಿನ ಗುರುತು, ಇನ್ನೊಂದಿಷ್ಟು ನೋವಿನ ಕುರುಹು.. ಇವುಗಳನ್ನು ಜತೆಜತೆಗೆ ಇರಿಸಿಕೊಂಡೇ ಕಾಲ ಹೆಜ್ಜೆ ಹಾಕುತ್ತದೆ. ಅವುಗಳನ್ನು ಸಮಾನವಾಗಿ ಸ್ವೀಕರಿಸಿಕೊಂಡು ಜತೆಜತೆಗೆ ಹೆಜ್ಜೆ ಹಾಕಿದಾಗಲಷ್ಟೇ ಬದುಕಿಗೊಂದು ಅರ್ಥ. 2023 ಬಿಟ್ಟುಹೋದ ಒಂದಷ್ಟು ಹೆಜ್ಜೆಗಳು ಇಲ್ಲಿವೆ…
ಈ ವರ್ಷ ಸುದ್ದಿಯಾದ ವ್ಯಕ್ತಿಗಳು:
ಎನ್. ಆರ್. ನಾರಾಯಣಮೂರ್ತಿ
ಭಾರತದ ಅಭಿವೃದ್ಧಿಗಾಗಿ ಯುವಕರು ವಾರಕ್ಕೆ 70 ಗಂಟೆಗಳು ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದು ಪರ ಮತ್ತು ವಿರೋಧದ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಉದ್ಯೋಗಿಗಳು ವಾರಕ್ಕೆ 70 ಗಂಟೆಗಳು ಕೆಲಸ ಮಾಡಿದರೆ, ಅವರು ಅತಿಯಾದ ಮಾನಸಿಕ ಒತ್ತಡಕ್ಕೆ ಸಿಲುಕಲಿದ್ದು, ಹೃದಯದ ಸಮಸ್ಯೆಗೆ ಕಾರಣವಾಗಬಹುದು ಎಂದು ಕೆಲವು ವೈದ್ಯರು ಅಭಿಪ್ರಾಯಪಟ್ಟಿದ್ದರು. ಇನ್ನೊಂದೆಡೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಯುವಜನಾಂಗ ವಾರಕ್ಕೆ 70 ಗಂಟೆಗಳ ಕೆಲಸ ಮಾಡುವ ಅಗತ್ಯವಿದೆ ಎಂದು ಕೆಲವರು ಪ್ರತಿಪಾದಿಸಿದ್ದರು. ಇನ್ಫೋಸಿಸ್‌ನಲ್ಲಿ ಸಕ್ರಿಯವಾಗಿದ್ದ ಸಂದರ್ಭದಲ್ಲಿ ತಾವು ವಾರಕ್ಕೆ 70 ರಿಂದ 90 ಗಂಟೆಗಳವರೆಗೆ ಕೆಲಸ ಮಾಡುತ್ತಿದ್ದೆ ಎಂದು ನಾರಾಯಣಮೂರ್ತಿ ವಿವರಿಸಿದ್ದರು.
ಬೆಂಜಮಿನ್ ನೆತನ್ಯಾಹು
ಇಸ್ರೇಲ್-ಹಮಾಸ್ ಯುದ್ಧದ ಕಾರಣದಿಂದ ಈ ವರ್ಷ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸುದ್ದಿಯಲ್ಲಿದ್ದರು. ಯಾವುದೇ ಸುಳಿವು ಬಿಟ್ಟುಕೊಡದೇ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರು 2023ರ ಅ.7ರಂದು ಇಸ್ರೇಲ್ ಮೇಲೆ ನೂರಾರು ರಾಕೆಟ್‌ಗಳಿಂದ ದಾಳಿ ನಡೆಸಿದರು. 3,000ಕ್ಕೂ ಹೆಚ್ಚು ಉಗ್ರರು ಇಸ್ರೇಲಿಗರ ಮೇಲೆ ದಾಳಿ ಆರಂಭಿಸಿದರು. ಇದರಿಂದ ಮೊದಲ ದಿನವೇ 71 ವಿದೇಶಿಯರು ಸೇರಿದಂತೆ 1,139 ಮಂದಿ ಅಸುನೀಗಿದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಗಾಜಾ ಪಟ್ಟಿ ಮೇಲೆ ಬಾಂಬ್‌ಗಳ ಮಳೆಸುರಿಸಿತು. “ಹಮಾಸ್ ಸರ್ವನಾಶವೇ ನಮ್ಮ ಗುರಿ’ ಎಂದು ಬೆಂಜಮಿನ್ ನೆತನ್ಯಾಹು ಹಠಕ್ಕೆ ಬಿದ್ದಿದ್ದಾರೆ. ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆ ವಿರುದ್ಧ ಮಧ್ಯಪ್ರಾಚ್ಯ ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಆದರೆ ಅಮೆರಿಕ ಮಾತ್ರ ಇಸ್ರೇಲ್ ಅನ್ನು ಬೆಂಬಲಿಸಿದೆ. ಇಸ್ರೇಲ್-ಹಮಾಸ್ ಯುದ್ಧ ಮುಂದುವರಿದಿದೆ.
ಎಸ್.ಸೋಮನಾಥ್
ಚಂದ್ರಯಾನ-3 ಮತ್ತು ಆದಿತ್ಯ ಎಲ್-1 ಯೋಜನೆ ಯಶಸ್ಸಿನಿಂದ ಇಸ್ರೋ ಹಾಗೂ ಅದರ ಅಧ್ಯಕ್ಷ ಎಸ್.ಸೋಮನಾಥ್ ಪ್ರಶಂಸೆಗೆ ಪಾತ್ರರಾಗಿದ್ದರು. ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿ, ಶಿಶಿರನ ವೈಜ್ಞಾನಿಕ ಅಧ್ಯಯನ ನಡೆಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಇನ್ನೊಂದೆಡೆ, ಸೂರ್ಯ ಅಧ್ಯಯನಕ್ಕಾಗಿ ಇಸ್ರೋ ಕಳುಹಿಸಿರುವ ಆದಿತ್ಯ ಎಲ್-1 ಉಪಗ್ರಹವು ಯಶಸ್ವಿಯಾಗಿ ತನ್ನ ಕಾರ್ಯವನ್ನು ಮುನ್ನಡೆಸುತ್ತಿದೆ. ಮಾನವಸಹಿತ ಗಗನ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಇಸ್ರೋ ಹೊಂದಿದೆ ಎಂದು ಸೋಮನಾಥ್ ತಮ್ಮ ಅನೇಕ ಉಪನ್ಯಾಸಗಳಲ್ಲಿ ಹೇಳಿದ್ದಾರೆ. ಕಪ್ಪು ಕುಳಿ ಅಧ್ಯಯಕ್ಕೆ ಕೂಡ ಜಗತ್ತಿನ ಎರಡನೇ ಪೋಲಾರಿಮೀಟರ್ ಉಪಗ್ರಹದ ಉಡ್ಡಯನಕ್ಕೆ ಇಸ್ರೋ ಸಿದ್ಧವಾಗಿದೆ.
ಬೃಜ್ ಭೂಷಣ್
ಮಹಿಳಾ ಕುಸ್ತಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷರಾಗಿದ್ದ ಬೃಜ್ ಭೂಷಣ್ ಶರಣ್ ಸಿಂಗ್ ಸುದ್ದಿಯಲ್ಲಿದ್ದರು. ಬೃಜ್ ಭೂಷಣ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳಾ ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇವರಿಗೆ ಪುರುಷ ಕುಸ್ತಿಪಟುಗಳು ಕೂಡ ಸಾಥ್ ನೀಡಿದರು. ಇವರ ಪ್ರತಿಭಟನೆಗೆ ರೈತ ಸಂಘಟನೆಗಳು, ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು ಬೆಂಬಲ ಸೂಚಿಸಿದವು. ಅಂತಿಮವಾಗಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯ ಅನಂತರ ದಿಲ್ಲಿ ಪೊಲೀಸರು ಬೃಜ್ ಭೂಷಣ್ ವಿರುದ್ಧ ಎರಡು ಎಫ್ಐಆರ್‌ಗಳನ್ನು ದಾಖಲಿಸಿದರು. ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅವರ ವಿರುದ್ಧ ತನಿಖೆ ನಡೆಯುತ್ತಿದೆ.
ಎಲಾನ್ ಮಸ್ಕ್
ತಮ್ಮ ನಿರ್ಧಾರಗಳಿಂದ ಟ್ವಿಟರ್ ಮಾಲಕ ಎಲಾನ್ ಮಸ್ಕ್ ಈ ವರ್ಷ ಸುದ್ದಿಯಲ್ಲಿದ್ದರು. ಜಗತ್ತಿನ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾಗಿರುವ ಮಸ್ಕ್, ಪ್ರತಿಷ್ಠಿತ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪೆನಿಗಳ ಮಾಲಕರು ಕೂಡ ಹೌದು. ಟ್ವಿಟರ್ ಹೆಸರನ್ನು “ಎಕ್ಸ್’ ಎಂದು ಮರುನಾಮಕರಣ ಮಾಡಿದರು. “ಎಕ್ಸ್’ ಹೆಸರಿಗೂ ಎಲಾನ್ ಮಸ್ಕ್ಗೂ ಹಳೆಯ ಬಾಂಧವ್ಯ. ಈ ಹಿಂದೆ ಅವರು ಎಕ್ಸ್.ಕಾಮ್ ಎಂಬ ಸಂಸ್ಥೆಯನ್ನು ಹೊಂದಿದ್ದರು. ಅಲ್ಲದೇ ಬಾಹ್ಯಾಕಾಶ ಸಂಸ್ಥೆಗೂ “ಸ್ಪೇಸ್ ಎಕ್ಸ್’ ಎಂದೇ ಹೆಸರಿಟ್ಟಿದ್ದಾರೆ. ಮೆಟಾ ಮಾಲಕ ಮಾರ್ಕ್ ಜುಗರ್‌ಬರ್ಗ್ ಮತ್ತು ಎಲಾನ್ ಮಸ್ಕ್ ನಡುವೆ ಆಗಾಗ್ಗೆ ನಡೆದ ವಾಕ್ ಸಮರವು ಈ ವರ್ಷ ಸುದ್ದಿಯಾಯಿತು. ಇನ್ನೊಂದೆಡೆ, ಟ್ವಿಟರ್‌ನಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿದ ಮಸ್ಕ್, ಕಂಪೆನಿಯ ಪ್ರಮುಖ ಹುದ್ದೆಗಳಲ್ಲಿದ್ದವರನ್ನು ಮನೆಗೆ ಕಳುಹಿಸಿ, ಹೊಸಬರನ್ನು ತಂದು ಕೂರಿಸಿದರು.
ಸದ್ದು ಮಾಡಿದ ಮಹಿಳಾ ಮಣಿಗಳು:
ರಶ್ಮಿಕಾ ಮಂದಣ್ಣ
ಕನ್ನಡದ ಖ್ಯಾತ ಚಿತ್ರ ತಾರೆಯರಲ್ಲಿ ಒಬ್ಬರಾಗಿದ್ದ ನಟಿ ರಶ್ಮಿಕಾ ಮಂದಣ್ಣ ತಮ್ಮ ಚೊಚ್ಚಲ ಚಿತ್ರ ಕಿರಿಕ್ ಪಾರ್ಟಿಯಲ್ಲಿ ನ್ಯಾಶನಲ್ ಕ್ರಶ್ ಎಂಬ ಬಿರುದು ಪಡೆದು ಫೇಮಸ್ ಆಗಿದ್ದರು. ಆ ಬಳಿಕ ಟಾಲಿವುಡ್‌ನಿಂದ ಬಾಲಿವುಡ್‌ವರೆಗೆ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಖ್ಯಾತಿ ಗಳಿಸಿದ್ದರು. ಆದರೆ 2023ರಲ್ಲಿ ರಶ್ಮಿಕಾ ವೈರಲ್ ಆಗಿದ್ದೇ ಬೇರೆ ಕಾರಣಕ್ಕೆ. ಅದೇ ಡೀಪ್‌ಫೇಕ್! ರಶ್ಮಿಕಾ ಅವರ ಮುಖವನ್ನು ಯಾವುದೋ ವೀಡಿಯೋಗೆ ಹೊಂದಿಸಿ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಇದರಿಂದ ಮನನೊಂದಿದ್ದ ನಟಿ ಡೀಪ್‌ಫೇಕ್ ಬಗ್ಗೆ ಜಾಲತಾಣದಲ್ಲೇ ಗುಡುಗಿದ್ದರಲ್ಲದೇ, ರಶ್ಮಿಕಾಗೆ ಭಾರತೀಯ ಸಿನೆರಂಗದ ಬಹುತೇಕ ತಾರೆಗಳಿಂದ ಬೆಂಬಲ ವ್ಯಕ್ತವಾಗಿತ್ತು. ಖುದ್ದು ಪ್ರಧಾನಿ ಮೋದಿ ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಒಟ್ಟಾರೆ ರಶ್ಮಿಕಾ ಅವರಿಂದಾಗಿ ಡೀಪ್‌ಫೇಕ್ ಕಡಿವಾಣಕ್ಕೂ ಸರಕಾರ ಮುಂದಾಯಿತಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ರಶ್ಮಿಕಾ ಅವರ ಗಟ್ಟಿದನಿಗೆ ಪ್ರಶಂಸೆ ವ್ಯಕ್ತವಾಗಿತ್ತು.
ಮಹುವಾ ಮೋಯಿತ್ರಾ
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿ ವಿರುದ್ಧ ಆರೋಪಗಳನ್ನು ಮಾಡುವುದಕ್ಕೆ ತಮ್ಮ ಸಂಸದೀಯ ಖಾತೆಯ ಪಾಸ್ ವರ್ಡ್ ಅನ್ನೇ ಬೇರೊಬ್ಬ ಉದ್ಯಮಿಗೆ ನೀಡಿದ್ದ ಆರೋಪದ ಮೇರೆಗೆ ದೇಶಾ ದ್ಯಂತ ಸಂಚಲನ ಸೃಷ್ಟಿಸಿದ ಮಹಿಳೆ ಟಿಎಂಸಿಯ ಮಾಜಿ ಸಂಸದೆ ಮಹುವಾ ಮೊಯಿತ್ರಾ. ಉದ್ಯಮಿ ದರ್ಶನ್ ಹೀರಾನಂದಿನಿ ಅವರಿಂದ 2 ಕೋಟಿ ರೂ. ಗಳ ವರೆಗೆ ಲಂಚ ಪಡೆದು, ಸಂಸತ್‌ನಲ್ಲಿ ಮೋದಿ ಅವರನ್ನು ಪ್ರಶ್ನಿಸಲು ಪಾಸ್ ವರ್ಡ್ ಶೇರ್ ಮಾಡಿದ್ದಾರೆ. ಈ ಮೂಲಕ ಸಂಸದೀಯ ನಿಯಮಗಳನ್ನು ಉಲ್ಲಂ ಸಿದ್ದಾರೆ ಎಂದು ಆರೋಪಿಸಲಾಗಿತ್ತು. ಮೊದಲಿಗೆ ಈ ವಿಚಾರವನ್ನು ಒಪ್ಪದ ಮೊಯಿತ್ರಾ ಇದು ಆಧಾರ ರಹಿತ ಆರೋಪ ಎಂದಿದ್ದರು. ಈ ಘಟನೆ ರಾಷ್ಟ್ರೀಯ ಮಟ್ಟದ ಚರ್ಚೆಯನ್ನೂ ಹುಟ್ಟುಹಾಕಿತ್ತು. ಬಳಿಕ ಲಂಚ ಪಡೆದಿರುವ ಆರೋಪವನ್ನು ತಿರಸ್ಕರಿಸಿ, ಪಾಸ್‌ವರ್ಡ್ ಶೇರ್ ಮಾಡಿದ್ದನ್ನು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸಂಸತ್ತಿನಿಂದ ಅಮಾನತು ಮಾಡಲಾಗಿದೆ.
ಸಾಕ್ಷಿ ಮಲ್ಲಿಕ್ / ವಿನೇಶ್ ಫೊಗಾಟ್
ಭಾರತೀಯ ಕುಸ್ತಿ ಸಂಸ್ಥೆ ಮಾಜಿ ಅಧ್ಯಕ್ಷ ಬೃಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಆರೋಪದ ವಿಚಾರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಇಬ್ಬರು ವಿಶ್ವ ವಿಖ್ಯಾತ ಕುಸ್ತಿ ಪಟುಗಳು ಸಾಕ್ಷಿ ಮಲ್ಲಿಕ್ ಹಾಗೂ ವಿನೇಶ್ ಫೊಗಾಟ್. ಬೃಜ್‌ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಿಸುವುದರ ಜತೆಗೆ ಆತನಿಗೆ ಶಿಕ್ಷೆ ವಿಧಿಸಬೇಕೆಂದು ಹಾಗೂ ಭಾರತೀಯ ಕುಸ್ತಿ ಒಕ್ಕೂಟ ಡಬ್ಲುಎಫ್ಐ ನಲ್ಲಿ ಬ್ರಜಭೂಷಣ್ ಆಪ್ತರು ಸ್ಪರ್ಧಿಸುವುದನ್ನು ನಿರ್ಬಂಧಿಸಬೇಕು ಎಂದು ವರ್ಷದ ಆರಂಭದಿಂದಲೂ ಪಟ್ಟು ಹಿಡಿದ ಈ ಮಹಿಳೆಯರಿಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿತ್ತು. ಆದಾಗ್ಯೂ ಡಬ್ಲುಎಫ್ಐನಲ್ಲಿ ಬೃಜ್‌ಭೂಷಣ್ ಅವರ ಆಪ್ತ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ವಿನೇಶ್ ಮತ್ತು ಸಾಕ್ಷಿ ಹೋರಾಟ ತೀವ್ರಗೊಳಿಸಿದ್ದರು. ವಿನೇಶ್ ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಅನ್ನು ಹಿಂದಿರುಗಿಸುವುದಾಗಿ ಘೋಷಿಸಿದರು. ಸಾಕ್ಷಿ ಮಲ್ಲಿಕ್ ಇತ್ತೀಚೆಗಷ್ಟೇ ಮಾಧ್ಯಮಗಳ ಮುಂದೆ ತಮ್ಮ ನ್ಪೋರ್ಟ್ಸ್ ಶೂ ಕಳಚಿಟ್ಟು ವಿದಾಯವನ್ನೇ ಘೋಷಿಸಿದರು.
ಆರಾಧ್ಯಾ ಬಚ್ಚನ್
ಜಾಲತಾಣಗಳಲ್ಲಿ ಇತ್ತೀಚೆಗೆ ಭಾರೀ ಕಾಣಿಸಿಕೊಂಡಿದ್ದು, ಮಾಧ್ಯಮಗಳು ಬೆಂಬಿಡದಂತೆ ಸುದ್ದಿ ಮಾಡಿದ್ದು ಮಾಜಿ ಮಿಸ್ ಇಂಡಿಯಾ ಐಶ್ವರ್ಯಾ ರೈ ಅವರ ಪುತ್ರಿ ಆರಾಧ್ಯಾ ಬಚ್ಚನ್‌ರನ್ನು. ಅಮ್ಮನೊಂದಿಗೆ ಆಗಾಗ ಮಾತ್ರ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಆರಾಧ್ಯಾ 2023ರ ವರ್ಷಾಂತ್ಯದಲ್ಲಿ ಸಂಪೂರ್ಣ ಮಾಧ್ಯಮಗಳ ದೃಷ್ಟಿಯನ್ನ ತಮ್ಮತ್ತ ಸೆಳೆದಿದ್ದರು. ಧೀರೂ ಬಾಯಿ ಅಂಬಾನಿ ಇಂಟರ್ ನಾಶನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಆಕೆ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ನಾಟಕವೊಂದರಲ್ಲಿ ಅಭಿನಯಿಸಿದ್ದರು. ತಾಯಿ ಐಶ್ವರ್ಯಾ, ತಂದೆ ಅಭಿಷೇಕ್ ಬಚ್ಚನ್, ತಾತಾ ಅಮಿತಾಭ್ ಕೂಡ ನಾಟಕ ವೀಕ್ಷಣೆಗೆ ತೆರಳಿದ್ದರು. ಸ್ನಿಗ್ಧ ರೂಪದ ಸುಂದರಿ ಆರಾಧ್ಯಾ ತನ್ನ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿ ಬಚ್ಚನ್ ಕುಟುಂಬದಲ್ಲಿ ಮತ್ತೂಂದು ಕಲಾ ಪೀಳಿಗೆ ತಲೆ ಎತ್ತುತ್ತಿದೆ ಎನ್ನುವ ಸುಳಿವು ನೀಡುವ ಮೂಲಕ ಜಾಲತಾಣದ ಪೂರ ಆಕೆಯ ಅಭಿನಯದ ವೀಡಿಯೋಗಳು ವೈರಲ್ ಆಗಿದ್ದವು.
ದಿಯಾ ಕುಮಾರಿ
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿಯ ಪ್ರಮುಖ ನಾಯಕಿಯಾಗಿ ಗುರುತಿಸಿ ಕೊಂಡವರು ದಿಯಾ ಕುಮಾರಿ. ರಾಜಸ್ಥಾನದ ರಜಪೂತ ರಾಜಮನೆತನದವರಾದ ಈಕೆ ಅದಾಗಲೇ 2 ಬಾರಿ ಶಾಸಕರಾದರೂ ಮುನ್ನೆಲೆಗೆ ಬಂದಿದ್ದು ಮಾತ್ರ ಪಂಚರಾಜ್ಯ ಚುನಾವಣೆ ಸಂದರ್ಭದಲ್ಲೇ. ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗಳಲ್ಲಿ ಬಹುವಾಗಿ ಕಾಣಿಸಿಕೊಂಡ ದಿಯಾ ಕುಮಾರಿ ಇದಕ್ಕಿದ್ದಂತೆ ರಾಜಸ್ಥಾನದ ಸಿಎಂ ರೇಸ್‌ವರೆಗೂ ಜಿಗಿದಿದ್ದರು. ರಾಜ್ಯದಲ್ಲಿ ಪ್ರಬಲ ವರ್ಗವಾಗಿರುವ ರಜಪೂತರ ನಾಯಕಿ ಎಂದೇ ಹೆಸರಾದ ಈಕೆ, ಚುನಾವಣೆಯಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನಕ್ಕೇರಿದರು. ಈ ಮೂಲಕ ದೇಶಾದ್ಯಂತ ದಿಯಾ ಕುಮಾರಿಯ ವರ್ಚಸ್ಸು ವೃದ್ಧಿಸಿತು.
ವರ್ಷದ ವಿವಾದಗಳು
1
ಡೀಪ್ ಫೇಕ್
ಕೃತಕ ಬುದ್ಧಿಮತ್ತೆ(ಎಐ) ಬಳಸಿ ವೀಡಿಯೋ ಅಥವಾ ಫೋಟೋ ಮಾಫ್ì ಮಾಡುವ ಡೀಪ್ ಫೇಕ್ ತಂತ್ರ ಜ್ಞಾನ ಮಾನವನ ಖಾಸಗಿ ಬದುಕಿಗೆ ಸವಾಲಾಗಿ ಪರಿಣಮಿ ಸಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೋದಲ್ಲಿ ಬೇರೆ ಯುವ ತಿಯ ದೇಹಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ಮಾರ್ಫ್ ಮಾಡಲಾಗಿತ್ತು. ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್, ಆಲಿಯಾ ಭಟ್, ಕಾಜೋಲ್ ಡೀಫ್‌ಫೇಕ್ ವೀಡಿಯೋಗಳು ಹರಿದಾಡಿತು. ಅಲ್ಲದೇ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ, ಉದ್ಯಮಿ ರತನ್ ಟಾಟಾ, ನಟ ಅನಿಲ್ ಕಪೂರ್ ಅವರ ಡೀಫ್ಫೇಕ್ ವೀಡಿಯೋಗಳು ಸದ್ದು ಮಾಡಿತು. ಇದರ ವಿರುದ್ಧ ಕೇಂದ್ರ ಸರಕಾರ ಸಾಮಾಜಿಕ ಜಾಲತಾಣಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆಗೊಳಿಸಿದೆ.
2 ಧನ್‌ಕರ್ ಮಿಮಿಕ್ರಿ
ಸಂಸತ್ ಭದ್ರತಾ ಲೋಪ ಕುರಿತು ಕಲಾಪದಲ್ಲಿ ಚರ್ಚೆ ಯಾಗಬೇಕು ಎಂದು ಆಗ್ರಹಿಸಿ ವಿಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಗದ್ದಲ ಮಾಡಿದರು. ಕಲಾಪಕ್ಕೆ ಅಡ್ಡಿಪಡಿ ಸಿದ ಆರೋಪದಲ್ಲಿ ಸಭಾಪತಿ ಜಗದೀಪ್ ಧನ್‌ಕರ್ ಅವರು ವಿಪಕ್ಷಗಳ ಕೆಲವು ಸಂಸದರನ್ನು ಅಮಾನತುಗೊಳಿಸಿದರು. ಅಮಾನತನು ಖಂಡಿಸಿ, ಕಾಂಗ್ರೆಸ್, ಟಿಎಂಸಿ ಸೇರಿದಂತೆ ವಿಪಕ್ಷಗಳು ಸಂಸತ್ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರ ಹಾವಭಾವಗಳನ್ನು ಹಾಗೂ ಅವರ ಧ್ವನಿಯನ್ನು ಮಿಮಿಕ್ರಿ ಮಾಡಿ ವ್ಯಂಗ್ಯ ಮಾಡಿದರು. ಇದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ ದರು. ಈ ಘಟನೆಯನ್ನು ಬಿಜೆಪಿ ಸೇರಿ ಹಲವು ಪಕ್ಷಗಳು ತೀವ್ರವಾಗಿ ಖಂಡಿಸಿದವು. ಅಲ್ಲದೇ ಉಪರಾಷ್ಟ್ರಪತಿಗಳ ಕ್ಷಮೆಯಾಚಿಸುವಂತೆ ಕಲ್ಯಾಣ ಬ್ಯಾನರ್ಜಿ ಅವರನ್ನು ಆಗ್ರಹಿಸಿದವು.
3 ಜ್ಞಾನ ವಾಪಿ
ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥನ ದೇಗುಲದ ಆವರಣದಲ್ಲಿರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ವ್ಯಾಜ್ಯವು ನ್ಯಾಯಾಲಯದ ಮೆಟ್ಟಿಲೇರಿದೆ. ಹಿಂದೂ ದೇಗುಲದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ. ಹೀಗಾಗಿ ದೇಗುಲದ ವೈಜ್ಞಾನಿಕ ಸಮೀಕ್ಷೆಗೆ ಕೋರಿ ಹಿಂದೂ ಸಮುದಾಯದ ಕೆಲವರು ವಾರಾಣಸಿ ಕೋರ್ಟ್‌ಗೆ ಮನವಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚಿಸಿತು. ಇದನ್ನು ಪ್ರಶ್ನಿಸಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಾರಾಣಸಿ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು. ಭಾರತೀಯ ಪುರಾತತ್ವ ಇಲಾಖೆಯು ವೈಜ್ಞಾನಿಕ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದು, ಇದರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.
4 ಮಥುರಾ ಹೋರಾಟ
ಅಯೋಧ್ಯೆ ರಾಮಜನ್ಮಭೂಮಿ ವಿವಾದ ಬಗೆ ಹರಿದು, ಅಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿರುವ ಬೆನ್ನಲ್ಲೇ ಶ್ರೀಕೃಷ್ಣ ಜನ್ಮತಾಳಿದ ಮಥುರಾ ನಗರ ಈಗ ಸುದ್ದಿಯಲ್ಲಿದೆ. ಶ್ರೀಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ಮಸೀದಿ ವಿವಾದವು ಈಗ ಪುನಃ ಮುನ್ನೆಲೆಗೆ ಬಂದಿದೆ. 1670ರಲ್ಲಿ ಶ್ರೀಕೃಷ್ಣನ ದೇಗುಲದ ಮೇಲೆ ಔರಂಗಜೇಬ್ ಮಸೀದಿ ಕಟ್ಟಿಸಿದ್ದಾನೆ ಎಂಬುದನ್ನು ಇತಿಹಾಸ ಹೇಳುತ್ತದೆ. ಮಥುರಾ ಶ್ರೀಕೃಷ್ಣನ ಜನ್ಮಸ್ಥಳವಾಗಿದೆ. ಇಲ್ಲಿ ಹಲವಾರು ವರ್ಷಗಳಿಂದ ಶ್ರೀಕೃಷ್ಣನ ದೇಗುಲವಿತ್ತು. ಇದರ ಮೇಲೆ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ. ಹಾಗಾಗಿ ಮಸೀದಿಯ ಸರ್ವೇಗೆ ಕೋರಿ ಹಿಂದೂ ಸಮು ದಾಯದ ಕೆಲವರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೇ ಮಸೀದಿಯ ಸರ್ವೇ ನಡೆಸಲು ಸಮಿತಿಯೊಂದನ್ನು ರಚಿಸುವಂತೆ ಕೋರಿದ್ದಾರೆ. ಅರ್ಜಿ ಯನ್ನು ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್ ಸಮಿತಿ ರಚನೆಗೆ ಆದೇಶಿಸಿದೆ.
5 ಸನಾತನ ಧರ್ಮದ ವಿರುದ್ಧ ಹೇಳಿಕೆ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆ ಭಾರಿ ವಿವಾದವಾಗಿತ್ತು. “ಸನಾತನ ಧರ್ಮವು ಡೆಂಗ್ಯೂ ಮತ್ತು ಮಲೇರಿಯಾ ರೋಗವಿದ್ದಂತೆ. ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು’ ಎಂದು ಉದಯನಿಧಿ ಸ್ಟಾಲಿನ್ ಕಾರ್ಯ ವೊಂದರಲ್ಲಿ ನೀಡಿದ ಹೇಳಿಕೆ ಭಾರೀ ಟೀಕೆಗೆ ಗುರಿಯಾಯಿತು. ಇದನ್ನು ಖಂಡಿಸಿ ದೇಶಾದ್ಯಂತ ಹಿಂದೂಪರ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದವು. ಉದಯನಿಧಿ ಸ್ಟಾಲಿನ್ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಯಿತು. ಅಲ್ಲದೇ ಇದು ಸನಾತನ ಧರ್ಮದ ಕುರಿತು ಎಲ್ಲೆಡೆ ಚರ್ಚೆಗೆ ಕಾರಣವಾಯಿತು.
ಹೆಚ್ಚು ಬಳಕೆಯಾದ ಪದಗಳು
ಗ್ಯಾರಂಟಿ
ಪ್ರಸಕ್ತ ವರ್ಷ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ “ಗ್ಯಾರಂಟಿ’ ಎಂಬ ಪದವು ಹೆಚ್ಚು ಚಲಾವಣೆಗೆ ಬಂತು. ಅನಂತರದಲ್ಲಿ ಎಲ್ಲರ ಬಾಯಲ್ಲೂ ಈ ಪದ ಸಲೀಸಾಗಿ ಕುಣಿದಾಡತೊಡಗಿತು. ಕಾಂಗ್ರೆಸ್ ನಾಯಕರು ತಮ್ಮ ಆಶ್ವಾಸನೆಗಳನ್ನು ಜನರಿಗೆ ತಲುಪಿಸಲು ಪದೇ ಪದೆ ಈ ಪದವನ್ನು ಬಳಸಿದರೆ, ಇತರ ರಾಜಕೀಯ ಪಕ್ಷಗಳು ಕಾಂಗ್ರೆಸ್ ಅನ್ನು ತೆಗಳಲು ಗ್ಯಾರಂಟಿ ಪದವನ್ನು ಬಳಸಿದವು. ಅಷ್ಟೇ ಅಲ್ಲ, ಅನಂತರ ನಡೆದ ಪಂಚರಾಜ್ಯ ಚುನಾವಣೆಯಲ್ಲೂ ಈ ಪದ ಅತೀ ಹೆಚ್ಚು ಬಳಕೆ ಯಾಯಿತು. ಪ್ರಧಾನಿ ಮೋದಿಯವರು ತಮ್ಮ ಭಾಷಣಗಳಲ್ಲಿ “ಮೋದಿ ಕೀ ಗ್ಯಾರಂಟಿ’ ಎಂದು ಹೇಳುತ್ತಾ ತಮ್ಮ ಪಕ್ಷ ನೀಡಿದ ಆಶ್ವಾಸನೆಗಳನ್ನು ಪೂರೈಸುವ ಭರವಸೆ ನೀಡಿದರು.
ಯುದ್ಧ
ಉಕ್ರೇನ್-ರಷ್ಯಾ ಸಂಘರ್ಷದಿಂದ ಜಗತ್ತಿನ ಮನೆ-ಮನಗಳಲ್ಲಿ 2022ರಲ್ಲೇ ಅಚ್ಚೊತ್ತಿದ ಯುದ್ಧ’ ಪದವು 2023ರಲ್ಲಿಯೂ ಅತೀ ಹೆಚ್ಚು ಬಾರಿ ಬಳಕೆಯಾ ಯಿತು. ಇದಕ್ಕೆ ಕಾರಣ, ರಷ್ಯಾ-ಉಕ್ರೇನ್ ಯುದ್ಧದ ಜತೆಗೆ ಸೇರ್ಪಡೆಯಾದ ಮತ್ತೂಂದು ಯುದ್ಧ. ಅದುವೇ ಇಸ್ರೇಲ್-ಹಮಾಸ್ ವಾರ್. ವರ್ಷದ ಮೊದಲಾರ್ಧದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಕಾಳಗದ ವರದಿಗಳು ಬರುತ್ತಿದ್ದರೆ, ದ್ವಿತೀಯಾರ್ಧ ಪೂರ್ತಿ ಇಸ್ರೇಲ್ ಮತ್ತು ಗಾಜಾದಲ್ಲಿ ನಡೆದ ಸಮರದ್ದೇ ಸುದ್ದಿ. ಹಿರಿಯರಿಂದ ಹಿಡಿದು ಪುಟ್ಟ ಮಕ್ಕಳವರೆಗೆ ಎಲ್ಲ ವಯೋಮಾನದವರ ಬಾಯಲ್ಲೂ “ಯುದ್ಧ’ ಸದ್ದು ಮಾಡಿತು.
ಉಚಿತ ಬಸ್
ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯು “ಫ್ರೀ ಬಸ್’ ಎಂದೇ ಜನಜನಿತವಾಯಿತು. ಮಹಿಳೆಯರಿಗೆ ಸರಕಾರಿ ಸಾರಿಗೆಯಲ್ಲಿ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವ ಈ ಯೋಜನೆ ಚುನಾವಣೆಗೆ ಮುನ್ನವೂ, ಅನಂತರವೂ ಭಾರೀ ಸುದ್ದಿಯಾಯಿತು. ಯೋಜನೆ ಜಾರಿಯಾದ ಬಳಿಕವಂತೂ, ಕೆಲವರು ಈ ಸೌಲಭ್ಯವನ್ನು ಶ್ಲಾ ಸಲು, ಮತ್ತೆ ಕೆಲವರು ದೂಷಿಸಲು ಫ್ರೀ ಬಸ್ ಪದವನ್ನು ಭರ್ಜರಿಯಾಗಿ ಬಳಸಿದರು.
ಖಲಿಸ್ಥಾನಿ 2023ರಲ್ಲಿ ಭಾರತವನ್ನು ಅತಿಯಾಗಿ ಕಾಡಿದ ಪದವಿದು. ಹಿಂದೆಂದಿಗಿಂತಲೂ ಈ ವರ್ಷ ಖಲಿಸ್ಥಾನಿ ಉಗ್ರರ ಉಪಟಳ ಹೆಚ್ಚೇ ಇತ್ತು ಎನ್ನಬಹುದು. ಕೆನಡಾ, ಅಮೆರಿಕ, ಯುಕೆ ಸೇರಿದಂತೆ ವಿದೇಶಗಳಲ್ಲಿರುವ ಹಲವು ದೇವಾಲಯಗಳ ಗೋಡೆಗಳನ್ನು ವಿರೂಪಗೊಳಿಸುವುದರಿಂದ ಹಿಡಿದು ತ್ರಿವರ್ಣ ಧ್ವಜಕ್ಕೆ ಬೆಂಕಿ ಹಚ್ಚಿದ, ಭಾರತದ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಿದಂಥ ಅನೇಕ ಪ್ರಕರಣಗಳು ನಡೆದವು. ಕೆನಡಾದಲ್ಲಿ ಖಲಿಸ್ಥಾನಿ ಉಗ್ರ ಹರ್ಜೀತ್ ಸಿಂಗ್ ನಿಜ್ಜರ್ ಹತ್ಯೆ, ಭಾರತದಲ್ಲಿ ಖಲಿಸ್ಥಾನಿ ಪ್ರತ್ಯೇಕತಾವಾದಿ ನಾಯಕ ಅಮೃತ್ ಪಾಲ್ ಸಿಂಗ್ ಬಂಧನ, ಸಿಕ್ಖ್$Õಫಾರ್ ಜಸ್ಟಿಸ್ ಸಂಘಟನೆಯ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ನಿಂದ ಬಂದ ಸತತ ಬೆದರಿಕೆಗಳು ಈ ವರ್ಷವಿಡೀ “ಖಲಿಸ್ಥಾನಿ’ ಪದವನ್ನು ಜೀವಂತವಾಗಿರಿಸಿತು./