ನ್ಯೂಯಾರ್ಕ್: ಯುಎಸ್ ಓಪನ್ ಪಂದ್ಯಾವಳಿಯ ವನಿತಾ ಸಿಂಗಲ್ಸ್‌ನಲ್ಲಿ ಸ್ಟಾರ್ ಆಟಗಾರರ ನಿರ್ಗಮನ ಮುಂದುವರಿದಿದೆ. ಕಳೆದೆರಡು ಬಾರಿಯ ಚಾಂಪಿಯನ್ಸ್ ಪತನಗೊಂಡ ಬೆನ್ನಲ್ಲೇ 2021ರ ರನ್ನರ್-ಅಪ್ ಮತ್ತು ಸೆಮಿಫೈನಲಿಸ್ಟ್ ಆಟಗಾರ್ತಿಯರ ಹೋರಾಟ ಕೊನೆಗೊಂಡಿದೆ. ಆದರೆ ಆತಿಥೇಯ ನಾಡಿನ ಸೆರೆನಾ ವಿಲಿಯಮ್ಸ್, ಪುರುಷರ ವಿಭಾಗದ ಹಾಲಿ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೇವ್ ಓಟ ಮುಂದುವರಿಸಿ ತೃತೀಯ ಸುತ್ತು ಮುಟ್ಟಿದ್ದಾರೆ.
ಸೆರೆನಾ ವಿಲಿಯಮ್ಸ್ ದ್ವಿತೀಯ ಶ್ರೇಯಾಂಕದ ಅನೆಟ್ ಕೊಂಟಾವೀಟ್ ಅವರ ದಿಟ್ಟ ಸವಾಲನ್ನು ಮೆಟ್ಟಿನಿಂತು 7-6 (7-4), 2-6, 6-2 ಅಂತರದಿಂದ ಗೆದ್ದು ಬಂದರು. ಆಸ್ಟ್ರೇಲಿಯದ ಅಜ್ಲಾ ಟೊಮ್‌ಜಾನೋವಿಕ್ ಇವರ ಮುಂದಿನ ಎದುರಾಳಿ.
ಕಳೆದ ವರ್ಷದ ರನ್ನರ್-ಅಪ್, ಕೆನಡಾದ ಲೇಲಾ ಫೆರ್ನಾಂಡಿಸ್ ಈ ಬಾರಿ ದ್ವಿತೀಯ ಸುತ್ತಿನಲ್ಲೇ ಎಡವಿದರು. ಅವರನ್ನು ರಷ್ಯಾದ ಲಿಡ್ಮಿಲಾ ಸಮೊÕನೋವಾ 6-3, 7-6 (7-3) ಅಂತರದಿಂದ ಹಿಮ್ಮೆಟ್ಟಿಸಿದರು. ಇದಕ್ಕೂ ಒಂದು ದಿನ ಮೊದಲು ಹಾಲಿ ಚಾಂಪಿಯನ್ ಎಮ್ಮಾ ರಾಡುಕಾನು ಅವರನ್ನು ಫ್ರಾನ್ಸ್‌ನ ಎಲೈಜ್ ಕಾರ್ನೆಟ್ ದ್ವಿತೀಯ ಸುತ್ತಿನಲ್ಲೇ ಮನೆಗೆ ಕಳುಹಿಸಿದ್ದರು. ಹಾಗೆಯೇ ಎರಡು ಬಾರಿಯ ಚಾಂಪಿಯನ್ ನವೋಮಿ ಒಸಾಕಾ ಆಟ ಮೊದಲ ಸುತ್ತಿನಲ್ಲೇ ಮುಗಿದಿತ್ತು. ಇವರನ್ನು ಸೋಲಿಸಿದವರು ಆಯಿಥೇನ ನಾಡಿನ ಡೇನಿಯಲ್ ಕಾಲಿನ್ಸ್.
ಗ್ರೀಕ್‌ನ ಮರಿಯಾ ಸಕ್ಕರಿ ಚೀನದ 75ರಷ್ಟು ಕೆಳ ರ್‍ಯಾಂಕಿಂಗ್ ಆಟಗಾರ್ತಿ ವಾಂಗ್ ಕ್ಸಿಯು ವಿರುದ್ಧ ಎಡವಿದರು. ಅಂತರ 6-3, 5-7, 5-7.
ಆಲ್ ಅಮೆರಿಕನ್ ಶೋ’ ಒಂದರಲ್ಲಿ ಕೊಕೊ ಗಾಫ್ ಮತ್ತು ಮ್ಯಾಡಿಸನ್ ಕೀಸ್ ತೃತೀಯ ಸುತ್ತಿನಲ್ಲಿ ಮುಖಾಮುಖೀ ಆಗುತ್ತಿದ್ದಾರೆ. ಇವರಿಬ್ಬರು ಕ್ರಮವಾಗಿ ಎಲಾನಾ ಗ್ಯಾಬ್ರಿಯೇಲಾ ರುಸ್ ಮತ್ತು ಕ್ಯಾಮಿಲಿ ಜಾರ್ಜಿ ವಿರುದ್ಧ ಗೆಲುವು ಸಾಧಿಸಿದರು.
ಟ್ಯುನಿಶಿಯಾದ ಓನ್ಸ್ ಜೆಬ್ಯೂರ್, 1985ರ ಚಾಂಪಿಯನ್ ಹಾನಾ ಮಂಡ್ಲಿಕೋವಾ ಅವರ ಪುತ್ರಿ ಎಲಿಜಬೆತ್ ಮಾಂಡ್ಲಿಕ್ ಅವರನ್ನು 7-5, 6-2 ಅಂತರದಿಂದ ಸೋಲಿಸಿದರು.
ಪುರುಷರ ಸಿಂಗಲ್ಸ್ :
ಪುರುಷರ ಸಿಂಗಲ್ಸ್‌ನಲ್ಲಿ ಏರುಪೇರಿನ ಫಲಿತಾಂಶವೇನೂ ಕಂಡುಬರಲಿಲ್ಲ. ಹಾಲಿ ಚಾಂಪಿಯನ್ ಡ್ಯಾನಿಲ್ ಮೆಡ್ವಡೇವ್ ಫ್ರಾನ್ಸ್‌ನ ಆರ್ಥರ್ ರಿಂಡೆರ್ಕ್‌ನೆಕ್ ಅವರನ್ನು 6-2, 7-5, 6-3ರಿಂದ ಹಿಮ್ಮೆಟ್ಟಿಸಿದರು.
ವಿಂಬಲ್ಡನ್ ರನ್ನರ್-ಅಪ್ ನಿಕ್ ಕಿರ್ಗಿಯೋಸ್ 7-6 (3), 6-4, 4-6, 6-4 ಅಂತರದಿಂದ ಫ್ರಾನ್ಸ್‌ನ ಬೆಂಜಮಿನ್ ಬೊಂಝಿ ವಿರುದ್ಧ ಗೆದ್ದು ಬಂದರು. ಬ್ರಿಟನ್‌ನ ಆ್ಯಂಡಿ ಮರ್ರೆ ಅಮೆರಿಕದ ಎಮಿಲಿಯೊ ನಾವ ಅವರನ್ನು 5-7, 6-3, 6-1, 6-0 ಅಂತರದಿಂದ ಮಣಿಸಿದರು.