ಜಾಗತಿಕವಾಗಿ ಮತ್ತೆ ಕೋವಿಡ್ ಸೋಂಕಿನ ಭೀತಿಯ ಜತೆಗೆ ಒಮಿಕ್ರಾನ್ ಆತಂಕದಲ್ಲಿ 2021ನೇ ಇಸವಿಯನ್ನು ಕಳೆದು 2022ಕ್ಕೆ ಕಾಲಿರಿಸುವಂತಾಗಿದೆ. ಈ ವರ್ಷದಲ್ಲಿ ಗಣರಾಜ್ಯೋತ್ಸವದಂದು ನಡೆದ ರೈತರ ಪ್ರತಿಭಟನೆಯ ಹಿಂಸಾಚಾರ, ಕೃಷಿ ಕಾಯ್ದೆ ವಾಪಸ್ ಪಡೆಯುವಿಕೆ ಸೇರಿದಂತೆ ನಡೆದ ಪ್ರಮುಖ ಘಟನಾವಳಿಗಳ ಕಿರು ಹಿನ್ನೋಟ ಇಲ್ಲಿದೆ…
ಗಣರಾಜ್ಯೋತವ- ರೈತರ ಪ್ರತಿಭಟನೆ, ಹಿಂಸಾಚಾರ:
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು 2021ರ ಫೆಬ್ರುವರಿ 26ರಂದು ಐತಿಹಾಸಿಕ ಕೆಂಪುಕೋಟೆಯತ್ತ ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ರೈತರು ನಿಗದಿಪಡಿಸಿದ್ದ ಸಂಚಾರ ಮಾರ್ಗವನ್ನು ಬದಲಿಸಿ, ನೂರಾರು ರೈತರು ಕೆಂಪುಕೋಟೆಯತ್ತ ನುಗ್ಗಿದ್ದರು. ಪ್ರತಿಭಟನಾನಿರತ ರೈತರು ಬ್ಯಾರಿಕೇಡ್ ಗಳನ್ನು ಮುರಿದು, ಪೊಲೀಸರ ಜತೆ ಕಾದಾಟಕ್ಕೆ ಇಳಿದಿದ್ದರು. ಉದ್ರಿಕ್ತ ರೈತರು ಪೊಲೀಸರ ಮೇಲೆ ದಾಳಿ ನಡೆಸಿದ್ದರು. ನಂತರ ಕೆಂಪುಕೋಟೆಯ ಮೇಲೆ ಬಾವುಟ ಹಾರಿಸಿದ್ದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು.
ಗ್ರೇಟಾ ಥನ್ ಬರ್ಗ್ ಟೂಲ್ ಕಿಟ್ ಪ್ರಕರಣ; ದಿಶಾ ರವಿ ಬಂಧನ
ರೈತರ ಪ್ರತಿಭಟನೆಯಲ್ಲಿ ಭಾರೀ ಸದ್ದು ಮಾಡಿದ್ದ ಗ್ರೇಟಾ ಥನ್ ಬರ್ಗ್ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಿಸರ ಕಾರ್ಯಕರ್ತೆ 21 ವರ್ಷದ ದಿಶಾ ರವಿಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದು, ದೊಡ್ಡ ಸುದ್ದಿಯಾಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತಾಗಿತ್ತು.
ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಅವರು ಟ್ವೀಟ್ ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡುವುದು ಹೇಗೆ ಎಂಬುದನ್ನು ವಿವರಿಸುವ ಟೂಲ್ ಕಿಟ್ ಅನ್ನು ಹಂಚಿಕೊಂಡಿದ್ದರು. ಈ ವೇಳೆ ಟೂಟ್ ಕಿಟ್ ಅನ್ನು ಕೂಡಾ ಗ್ರೇಟಾ ಟ್ವೀಟ್ ಮಾಡಿದ್ದು, ಇದು ವಿವಾದಕ್ಕೀಡಾಗುತ್ತಿದ್ದಂತೆ ಆ ಟೂಲ್ ಕಿಟ್ ಅನ್ನು ಡಿಲೀಟ್ ಮಾಡಿದ್ದರು. ನಂತರ ತನಿಖೆ ವೇಳೆ ದಿಶಾ ರವಿ ಹೆಸರು ಹೊರಬಿದ್ದಿತ್ತು.
ಚತ್ತೀಸ್ ಗಢದಲ್ಲಿ ನಕ್ಸಲರ ದಾಳಿಗೆ 22 ಭದ್ರತಾ ಯೋಧರು ಹುತಾತ್ಮ:
2021ರಲ್ಲಿ ನಡೆದ ನಕ್ಸಲೀಯರ ಭೀಕರ ದಾಳಿಗೆ ಸುಕ್ಮಾ ಸಾಕ್ಷಿಯಾಗಿತ್ತು. ಚತ್ತೀಸ್ ಗಢದ ಸುಕ್ಮಾ-ಬಿಜಾಪುರ್ ಗಡಿಗಳ ಸಿಲಗುರ್ ಅರಣ್ಯ ಪ್ರದೇಶದಲ್ಲಿ ಸಿಆರ್ ಪಿಎಫ್ ಯೋಧರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ (ಏಪ್ರಿಲ್ 3) ನಕ್ಸಲೀಯರ ಹೊಂಚುದಾಳಿಗೆ 22 ಯೋಧರು ಹುತಾತ್ಮರಾಗಿದ್ದರು. ಯೋಧರ ಪ್ರತಿದಾಳಿಯಲ್ಲಿ ಐವರು ನಕ್ಸಲೀಯರು ಸಾವನ್ನಪ್ಪಿದ್ದರು.
ಪಶ್ಚಿಮಬಂಗಾಳದಲ್ಲಿ 3ನೇ ಬಾರಿಗೆ ಗದ್ದುಗೆ ಏರಿದ ಮಮತಾ, ಭುಗಿಲೆದ್ದ ಹಿಂಸಾಚಾರ:
ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆ ಬಿಜೆಪಿ ಮತ್ತು ಟಿಎಂಸಿ ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಫಲಿತಾಂಶ ಘೋಷಣೆಯಾಗಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದ ಬೆನ್ನಲ್ಲೇ ರಾಜ್ಯಾದ್ಯಂತ ಹಿಂಸಾಚಾರ, ಕೊಲೆಗಳು ನಡೆದಿತ್ತು. 294 ಸದಸ್ಯಬಲದ ಪಶ್ಚಿಮಬಂಗಾಳ ವಿಧಾನಸಭೆಯಲ್ಲಿ ಟಿಎಂಸಿ 213 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 77 ಸ್ಥಾನಗಳಲ್ಲಿ ಜಯ ಗಳಿಸಿತ್ತು.
ಗುಜರಾತ್ ಕರಾವಳಿಗೆ ಅಪ್ಪಳಿಸಿದ್ದ ತೌಕ್ತೆ ಚಂಡಮಾರುತ:
ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿ ಪ್ರದೇಶಕ್ಕೆ ಬಂದಪ್ಪಳಿಸಿದ್ದ ತೌಕ್ತೆ ಚಂಡಮಾರುತ ಅಪಾರ ಹಾನಿಯನ್ನುಂಟು ಮಾಡಿತ್ತು. ಮುಂಬಯಿ ಸಮೀಪ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಕ್ಕೆ ಸಿಲುಕಿ ನೌಕೆಯೊಂದು ಮುಳುಗಿ ಹೋಗಿ 26 ಮಂದಿ ಸಾವನ್ನಪ್ಪಿದ್ದರು. ಗುಜರಾತ್ ನಲ್ಲಿ ತೌಕ್ತೆ ಚಂಡಮಾರುತಕ್ಕೆ 65 ಮಂದಿ ಬಲಿಯಾಗಿದ್ದರು. ಗುಜರಾತಿನಲ್ಲಿ ಚಂಡಮಾರುತ ಬಾಧಿತ ಕರಾವಳಿ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ 1000 ಕೋಟಿ ರೂ.ಗಳ ನೆರವು ಘೋಷಿಸಿದ್ದರು.
ಪಂಡೋರಾ ಪೇಪರ್ ಲೀಕ್ ಪ್ರಕರಣ:
2016ರಲ್ಲಿ ಜಾಗತಿಕವಾಗಿ ಸಂಚಲನ ಮೂಡಿಸಿದ್ದ ಪನಾಮಾ ಪೇಪರ್ಸ್ ನಂತೆ 2021ರಲ್ಲಿ ಪಂಡೋರಾ ಪೇಪರ್ ಎಂಬ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿತ್ತು. ಇದರಲ್ಲಿ ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ದಿವಾಳಿ ಎಂದು ಘೋಷಿಸಿಕೊಂಡಿದ್ದ ಅನಿಲ್ ಅಂಬಾನಿ, ಬಯೋಕಾನ್ ಸಂಸ್ಥೆಯ ಕಿರಣ್ ಮುಜುಂದಾರ್ ಪತಿ ಸೇರಿದಂತೆ 300 ಭಾರತೀಯರ ಹೆಸರು ಬಹಿರಂಗಗೊಂಡಿತ್ತು.
ಲಕ್ಷದ್ವೀಪದಲ್ಲಿ ಗೋ ಮಾಂಸ ಮಾರಾಟ ನಿಷೇಧ ವಿವಾದ:
ಕೇಂದ್ರಾಡಳಿತ ಪ್ರದೇಶವಾಗಿರುವ ಪುಟ್ಟ ಲಕ್ಷದ್ವೀಪ ಪ್ರದೇಶದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಇದಕ್ಕೆ ಕಾರಣವಾಗಿದ್ದು, ಪಟೇಲ್ ಅವರ ಕೆಲವು ನೀತಿಗಳು. ಗೋ ಮಾಂಸ ಮಾರಾಟ ನಿಷೇಧ, ಅಪರಾಧ ಪ್ರಕರಣ ಕಡಿಮೆ ಇರುವ ದ್ವೀಪಪ್ರದೇಶದಲ್ಲಿ ಗೂಂಡಾ ಕಾಯ್ದೆ ಜಾರಿ, ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪಂಚಾಯತ್ ಮತದಾನ ಆಕಾಂಕ್ಷಿಗಳನ್ನು ಅನರ್ಹಗೊಳಿಸಬೇಕು, ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರಿಂದ ಭೂಮಿ ವಶಪಡಿಸಿಕೊಳ್ಳಲು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಸೇರಿದಂತೆ ಹಲವು ನಿರ್ಧಾರಗಳು ಲಕ್ಷದ್ವೀಪದಲ್ಲಿ ಪ್ರತಿಭಟನೆ ತಾರಕಕ್ಕೇರಲು ಕಾರಣವಾಗಿತ್ತು.
ಕೃಷಿ ಕಾಯ್ದೆ ವಾಪಸ್ ಪಡೆದ ಕೇಂದ್ರ:
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಒಕ್ಕೂಟ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸಿದ್ದವು. ಸುಮಾರು ಒಂದು ವರ್ಷಗಳ ಕಾಲದವರೆಗೂ ಗಡಿಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, 2021ರ ನವೆಂಬರ್ 19ರಂದು ಗುರು ನಾನಕ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದರು. ನಂತರ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಲಾಗಿತ್ತು. ಕೊನೆಗೆ ಕೇಂದ್ರ ಸರ್ಕಾರ ರೈತರ ಕೆಲವು ಬೇಡಿಕೆಗಳನ್ನು ಒಪ್ಪಿಕೊಂಡ ಬಳಿಕ ಭಾರತೀಯ ಕಿಸಾನ್ ಒಕ್ಕೂಟ ಪ್ರತಿಭಟನೆಯನ್ನು ಕೈಬಿಟ್ಟಿತ್ತು. ಇದರೊಂದಿಗೆ 15 ತಿಂಗಳ ಕಾಲದ ರೈತರ ದೀರ್ಘಕಾಲದ ಪ್ರತಿಭಟನೆ ಕೊನೆಗೊಂಡಿತ್ತು.
ಲಖೀಂಪುರ್ ಖೇರಿ ಹಿಂಸಾಚಾರ:
ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಕಾರು ಹರಿಸಿರುವ ವಿಡಿಯೋ ವೈರಲ್ ಆದ ನಂತರ ನಡೆದ ಹಿಂಸಾಚಾರ ಪ್ರಕರಣದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದರು. ಲಖೀಂಪುರ್ ಖೇರಿ ಪ್ರಕರಣ ರಾಜಕೀಯವಾಗಿ ವಾಕ್ಸಮರಕ್ಕೆ ಕಾರಣವಾಗಿತ್ತು, ನಂತರ ಉತ್ತರಪ್ರದೇಶ ಪೊಲೀಸರು ಅಜಯ್ ಮಿಶ್ರಾ ಮಗ ಆಶಿಶ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು.
ಹೆಲಿಕಾಪ್ಟರ್ ಪತನದಲ್ಲಿ ಸಿಡಿಎಸ್ ಜ.ಕ್ಯಾಪ್ಟನ್ ಬಿಪಿನ್ ರಾವತ್ ವಿಧಿವಶ:
ತಮಿಳುನಾಡಿನ ವೆಲ್ಲಿಂಗ್ಟನ್ ಸಮೀಪದ ಕೂನೂರು ಸಮೀಪ (ಡಿ.08) ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ದೇಶದ ಮೂರು ಸೇನೆಗಳ ಮಹಾದಂಡನಾಯಕ ಜ.ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಮಂದಿ ವಿಧಿವಶರಾಗಿದ್ದರು. ದುರಂತದಲ್ಲಿ ಯಾರೊಬ್ಬರ ಗುರುತು ಸಿಗಲಾರದಷ್ಟು ಶವಗಳು ಸುಟ್ಟು ಹೋಗಿತ್ತು. ನಂತರ ಡಿಎನ್ ಎ ಪರೀಕ್ಷೆ ಮೂಲಕ ಗುರುತು ಪತ್ತೆ ಮಾಡಲಾಗಿತ್ತು.