ಸರ್ವರಿಗೂ ಹೊಸ ವರ್ಷ ಶುಭ ತರಲಿ. ಹಾಗೆಂದು ಪೂರ್ಣ ಆತ್ಮವಿಶ್ವಾಸದೊಂದಿಗೆ 2021ರ ದಿನಗಳಿಗೆ ಕಾಲಿಡುವಂತಹ ಪರಿಸ್ಥಿತಿಯೇನೂ ಇಲ್ಲ ! ಒಂದು ಭೀಕರ ದುಸ್ವಪ್ನದಂತೆ ಎದುರಾದ 2020ರ ಪ್ರತೀ ಕ್ಷಣಗಳೂ ಕೂಡಾ ಆತಂಕ – ಅಭದ್ರತೆಯ ಭಾವವನ್ನು ಎದೆಯಲ್ಲಿ ತುಂಬಿದ್ದು ಮರೆಯುವಂತಹದ್ದಲ್ಲ. ಇಂತಹ ಅತಂತ್ರ ಪರಿಸ್ಥಿತಿಯನ್ನು ಬದಿಗೊತ್ತಿ ಮುನ್ನಡೆಯಬೇಕಾಗಿದೆ. ಸಾಕಷ್ಟು ಸವಾಲುಗಳು ನಮ್ಮ ಮುಂದಿದೆ. ವಿಶೇಷವಾಗಿ ರೈತ- ಕಾರ್ಮಿಕ ವರ್ಗ ಹಿಂದೆಂದಿಗಿಂತಲೂ ಹೆಚ್ಚು ದುರ್ದಿನಗಳನ್ನು ಎದುರಿಸಿದೆ.
ಕೋವಿಡ್ – ಲಾಕ್ ಡೌನ್ ಕಾರಣದಿಂದ ಸಾಮಾನ್ಯ ಜನ ಉದ್ಯೋಗದಿಂದ ವಂಚಿತರಾಗಿ ಬಹು ದೀರ್ಘ ಕಾಲ ಒದ್ದಾಡುವಂತಾಗಿ ಅವರ ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ. ಇನ್ನೊಂದೆಡೆ ರೈತರ ಬೆಳೆಗೆ ಸವಾಲಾಗಿ ನಿಂತ ಕೃಷಿ ನೀತಿ ಅವರನ್ನು ಕಂಗೆಡಿಸಿದೆ. ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ಮಹಿಳೆಯರ ನಿರ್ಭಯತೆಯನ್ನೇ ಪ್ರಶ್ನಿಸುವಂತಿದೆ.
ಮತ್ತೊಂದೆಡೆ ಇಡೀ ಶೈಕ್ಷಣಿಕ ವರ್ಷವನ್ನೇ ಆಪೋಶನ ತೆಗೆದುಕೊಂಡಿರುವ ” ಕೋವಿಡ್ ನಿರ್ಬಂಧ ತಂತ್ರ” ವಿದ್ಯಾರ್ಥಿಗಳ ಭವಿಷ್ಯವನ್ನೇ ಮಸುಕುಗೊಳಿಸಿವೆ. ಪ್ರತಿಯೊಂದು ರಂಗದಲ್ಲಿಯೂ ಎದ್ದು ಕಾಣುತ್ತಿರುವ ಹಿನ್ನಡೆಯನ್ನು ನಿವಾರಿಸಿಕೊಂಡು ನಾಡಿನ ಆರ್ಥಿಕ -ಸಾಮಾಜಿಕ-ಶೈಕ್ಷಣಿಕ ಮರು ಕಟ್ಟುವಿಕೆ ಅಷ್ಟು ಸುಲಭವೇನೂ ಅಲ್ಲ.
ಈ ನಿಟ್ಟಿನಲ್ಲಿ ಸರಕಾರಗಳು ಜನತೆಗೆ ಭರವಸೆಯನ್ನೂ ಭದ್ರತೆಯನ್ನೂ ನೀಡಬೇಕಾಗಿದೆ. ವಿಶೇಷವಾಗಿ ಆತಂಕ ಮತ್ತು ಅತಂತ್ರ ಭಾವದಲ್ಲಿರುವ ಯುವ ಜನಾಂಗವನ್ನು ಅಭಿವೃದ್ಧಿಯ ದಿಶೆಯಲ್ಲಿ ಪ್ರೇರೇಪಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ದೇಶದ ಪರಿಸ್ಥಿತಿಯನ್ನು ಕೇವಲ ರಾಜಕೀಯ ಲೆಕ್ಕಾಚಾರಗಳಿಂದ ತೂಗುವ ಬದಲು ಸಮಗ್ರವಾದ ಉತ್ಪಾದನಾ ಶೀಲ ಯೋಜನೆಗಳಿಂದ ಮತ್ತೆ ಹಳಿಗೆ ತರುವ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಹೊಸ ವರ್ಷದ ದಿನಗಳು ನೆಮ್ಮದಿಯನ್ನು ತರಲಿ ಎಂದು ಹಾರೈಸುತ್ತೇನೆ.
ರಮೇಶ ಗುಲ್ವಾಡಿ, ಕಥೆಗಾರರು