Advertisement

ಐಪಿಎಲ್‌ ಇಲ್ಲದೆ 2020 ಮುಗಿಯದು: ಗಂಗೂಲಿ

03:52 AM Jul 09, 2020 | Sriram |

ಹೊಸದಿಲ್ಲಿ: ಪ್ರಸಕ್ತ ಋತುವಿನಲ್ಲಿ ಐಪಿಎಲ್‌ ನಡೆಸುವುದೇ ತಮ್ಮ ಪ್ರಮುಖ ಆದ್ಯತೆ ಆಗಿರುತ್ತದೆ, ಕೋವಿಡ್‌-19 ಕಂಟಕದ ಹೊರತಾಗಿಯೂ ಐಪಿಎಲ್‌ ಇಲ್ಲದೆ 2020ನೇ ಇಸವಿ ಮುಗಿಯದು ಎಂದು ಖಚಿತ ಧ್ವನಿಯಲ್ಲಿ ಹೇಳಿದ್ದಾರೆ .

Advertisement

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ. “ಐಪಿಎಲ್‌ ಇಲ್ಲದೇ 2020ರ ಋತುವನ್ನು ಮುಗಿ ಸಲು ನಮಗೆ ಇಷ್ಟವಿಲ್ಲ. ಆದರೆ ಟಿ20 ವಿಶ್ವಕಪ್‌ ಬಗ್ಗೆ ಐಸಿಸಿ ಖಚಿತ ನಿರ್ಧಾರ ತೆಗೆದುಕೊಳ್ಳದ ಹೊರತು ಐಪಿಎಲ್‌ ಆಯೋಜನೆ ಕುರಿತು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ’ ಎಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ದಾದಾ ಹೇಳಿದರು.

“ಐಪಿಎಲ್‌ ಪಂದ್ಯಾವಳಿಯನ್ನು ಭಾರತದಲ್ಲೇ ನಡೆಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಲಿದೆ. ಕನಿಷ್ಠ 35ರಿಂದ 40 ದಿನಗಳ ಅವಧಿ ಲಭಿಸಿದರೂ ಸಾಕು, ನಾವು ಕೂಟವನ್ನು ನಡೆಸಲಿದ್ದೇವೆ. ಆದರೆ ಎಲ್ಲಿ ಎಂಬುದು ಮಾತ್ರ ಗೊತ್ತಿಲ್ಲ…’ ಎಂದು “ಇನ್ಸ್‌ ಪಿರೇಶನ್‌ ಶೋ’ದಲ್ಲಿ ಗಂಗೂಲಿ ಹೇಳಿದರು.

ಮೊದಲ ಆದ್ಯತೆ ಭಾರತ
“ಪಂದ್ಯಾವಳಿಯನ್ನು ನಡೆಸಲು ಈಗಾಗಲೇ ಯುಎಇ, ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್‌ ಆಸಕ್ತಿ ವಹಿಸಿರುವುದು ನಿಜ. ಆದರೆ ಈ ಕೊರೊನಾ ಸ್ಥಿತಿಯಲ್ಲಿ ಕ್ರಿಕೆಟ್‌ ಕೂಟವನ್ನು ವಿದೇಶಗಳಲ್ಲಿ ನಡೆಸಿದರೆ ಖರ್ಚು ವಿಪರೀತವಾಗುತ್ತದೆ. ಹೀಗಾಗಿ ಇದು ಭಾರತದಲ್ಲೇ ನಡೆಯುವಂತಿದ್ದರೆ ಒಳ್ಳೆಯದು…’ ಎಂದರು.

“ಐಸಿಸಿ ಈವರೆಗೆ ಟಿ20 ವಿಶ್ವಕಪ್‌ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮಾಧ್ಯಮಗಳಿಂದ ಬೇರೆ ಬೇರೆ ರೀತಿಯ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಯಾವುದೂ ಅಧಿಕೃತವಲ್ಲ. ಹೀಗಾಗಿ ಐಪಿಎಲ್‌ ನಿರ್ಧಾರದಲ್ಲೂ ವಿಳಂಬ ಸಹಜ’ ಎಂಬುದಾಗಿ ಗಂಗೂಲಿ ಹೇಳಿದರು.

Advertisement

“ಮುಂಬಯಿ, ಹೊಸದಿಲ್ಲಿ, ಕೋಲ್ಕತಾ, ಚೆನ್ನೈ, ಬೆಂಗಳೂರೆಲ್ಲ ಐಪಿಎಲ್‌ನ ದೊಡ್ಡ ಐಪಿಎಲ್‌ ತಂಡಗಳನ್ನು ಹೊಂದಿವೆ. ಆದರೆ ಇಲ್ಲೆಲ್ಲ ಕೋವಿಡ್‌-19 ತೀವ್ರಗೊಂಡಿದೆ. ಹೀಗಾಗಿ ಈ ಕೇಂದ್ರಗಳಲ್ಲಿ ಐಪಿಎಲ್‌ ಆಡಿಸಬಹುದೆಂಬ ಧೈರ್ಯ ಯಾರಲ್ಲೂ ಇಲ್ಲ. ಒಟ್ಟಾರೆ ಹಳಿ ತಪ್ಪಿದ ಬದುಕು ಸಹಜ ಸ್ಥಿತಿಗೆ ಮರಳಬೇಕು, ಇದರೊಂದಿಗೆ ಕ್ರಿಕೆಟ್‌ ಕೂಡ…’ ಎಂಬ ಆಶಯ ವ್ಯಕ್ತಪಡಿಸಿದರು ಗಂಗೂಲಿ.

ಏಶ್ಯ ಕಪ್‌ ಕ್ರಿಕೆಟ್‌ ರದ್ದು
ಹೊಸದಿಲ್ಲಿ: ಸೆಪ್ಟಂಬರ್‌ ತಿಂಗಳಲ್ಲಿ ನಡೆಯಬೇಕಿದ್ದ ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿ ರದ್ದುಗೊಂಡಿದೆ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

“ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿ ರದ್ದುಗೊಂಡಿದೆ. ಇದು ಸೆಪ್ಟಂಬರ್‌ನಲ್ಲಿ ನಡೆಯಬೇಕಿತ್ತು’ ಎಂದು ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಮೂಡಿಬಂದ “ಸ್ಪೋರ್ಟ್ಸ್ ಟಾಕ್‌’ ಕಾರ್ಯಕ್ರಮದಲ್ಲಿ ಗಂಗೂಲಿ ಹೇಳಿದರು. ಆದರೆ ಈ ಪಂದ್ಯಾವಳಿಯ ಆತಿಥೇಯ ರಾಷ್ಟ್ರದ ಕುರಿತು ಅವರು ಯಾವುದೇ ಪ್ರಸ್ತಾವ ಮಾಡಲಿಲ್ಲ.

6 ರಾಷ್ಟ್ರಗಳ ನಡುವಿನ ಈ ಪಂದ್ಯಾವಳಿ ಪಾಕಿಸ್ಥಾನದ ಆತಿಥ್ಯದಲ್ಲಿ ನಡೆಯಬೇಕಿತ್ತು. ಆದರೆ ಭಾರತ ಇದರಲ್ಲಿ ಪಾಲ್ಗೊಳ್ಳದ ಕಾರಣ ಕೂಟವನ್ನು ಯುಎಇಯಲ್ಲಿ ನಡೆಸುವ ಕುರಿತು ಮಾತುಕತೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next