Advertisement
ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿ) 10% ಕೊಡುಗೆ ನೀಡುವ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನಷ್ಟು ಉದ್ಯಮಸ್ನೇಹಿಯಾಗಿಸುವ ನಿಟ್ಟಿನಲ್ಲಿ ನಮ್ಮನ್ನಾಳುವ ಸರಕಾರಗಳು ಇತ್ತೀಚಿನ ವರ್ಷಗಳಲ್ಲಿ ಗಂಭೀರವಾಗಿ ಯೋಚಿಸುತ್ತಿವೆ ಎಂಬುದು ಸಮಾಧಾನಕರ ವಿಷಯವೇ ಸರಿ.
Related Articles
Advertisement
ಇನ್ನೊಂದು ಪ್ರಮುಖ ವಿಚಾರವೆಂದರೆ ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯ ಸೇರಿದಂತೆ, ದೇಶದ ಐದು ಆಯ್ದ ರಾಜ್ಯಗಳಲ್ಲಿ ಐದು ಪುರಾತತ್ವ ಶಾಸ್ತ್ರ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ಕೇಂದ್ರ ಹೊಂದಿದೆ. ಅವುಗಳೆಂದರೆ, ಹರ್ಯಾಣದ ರಾಖೀಗಢ, ಉತ್ತರಪ್ರದೇಶದ ಹಸ್ತಿನಿಪುರ, ಅಸ್ಸಾಂನ ಶಿವಸಾಗರ್, ಗುಜರಾತ್ ನ ದೋಲಾವೀರಾ ಹಾಗೂ ತಮಿಳುನಾಡಿನ ಅದಿಚಾನಲ್ಲೂರು. ಇವುಗಳ ಕುರಿತಾಗಿ ನಾವಿಲ್ಲಿ ಸಂಕ್ಷಿಪ್ತವಾಗಿ ನೋಡುವುದಾದಲ್ಲಿ…ಸಿಂಧೂ ನಾಗರಿಕತೆಯ ಬೃಹತ್ ಕುರುಹು ರಾಖೀಗಢ
ರಾಷ್ಟ್ರರಾಜಧಾನಿ ದೆಹಲಿಯಿಂದ 150 ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ಈ ರಾಖೀಗಢವು ಪ್ರಪಂಚದ ಪ್ರಾಚೀನ ನಾಗರೀಕತೆಗಳಲ್ಲಿ ಒಂದಗಿರುವ ಸಿಂಧೂನದಿ ನಾಗರಿಕತೆಯ ಕುರುಹನ್ನು ಆಧುನಿಕ ಜಗತ್ತಿಗೆ ಪರಿಚಯಿಸುವ ಪ್ರಮುಖ ಸ್ಥಳವಾಗಿ ಉಳಿದುಕೊಂಡಿದೆ. ಹರ್ಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಒಂದು ಗ್ರಾಮವಾಗಿದೆ ಈ ರಾಖೀಗಢ. ಇಲ್ಲಿರುವ ಏಳು ಪ್ರಮುಖ ದಿಬ್ಬಗಳು ಹಾಗೂ ಈ ಪ್ರದೇಶದ ಸುತ್ತಮುತ್ತಲಿನ ಭಾಗಗಳಲ್ಲಿರುವ ಇನ್ನಷ್ಟು ದಿಬ್ಬಗಳು ಕ್ರಿಸ್ತಪೂರ್ವ 6500 ವರ್ಷಗಳ ಹಿಂದೆ ವ್ಯವಸ್ಥಿತ ನಾಗರಿಕತೆಯೊಂದು ಜನ್ಮ ತಳೆದು, ಬೆಳೆದು ಬಳಿಕ ನಶಿಸಿ ಹೋದುದಕ್ಕೆ ಮೂಕ ಸಾಕ್ಷಿಯಾಗಿ ನಿಂತಿದೆ. ಸರಿಯಾದ ನಿರ್ವಹಣೆಗಳಿಲ್ಲದೆ ಹಾಗೂ ಈ ಪ್ರದೇಶದ ಉತ್ಖನನಕ್ಕೆ ಜಾರಿಯಾಗುವ ನಿಧಿಯ ಸದ್ಭಳಕೆಯಿಲ್ಲದೆ ಸುಮಾರು 350 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಬ್ಬಿಕೊಂಡಿರುವ ಈ ಪ್ರಾಚೀನ ನಾಗರಿಕತೆಯ ಕುರುಹನ್ನು ಅಗೆದು, ಅಭ್ಯಸಿಸಿ ಈ ಮಾಹಿತಿಗಳನ್ನು ಭವಿಷ್ಯದ ಇತಿಹಾಸ ಕುತೂಹಲರಿಗೋಸ್ಕರ ಸಂರಕ್ಷಿಸಿಡುವ ಉದ್ದೇಶದೊಂದಿಗೆ ಇಲ್ಲಿ ಪುರಾತತ್ವ ಕೇಂದ್ರವನ್ನು ತೆರೆಯಲು ನಿರ್ಧರಿಸಿರುವ ಕೇಂದ್ರ ಸರಕಾರದ ನಿರ್ಧಾರ ಸಕಾಲಿಕವಾದುದು.
ಮಹಾಭಾರತದ ಮೂಲಸ್ಥಾನ ಹಸ್ತಿನಾಪುರ ; ಜೈನ ತೀರ್ಥಂಕರರ ಜನ್ಮಸ್ಥಾನವಾಗಿಯೂ ಮಹತ್ವದ್ದು
ನಮ್ಮ ದೇಶದ ಎರಡು ಮಹಾಕಾವ್ಯಗಳಲ್ಲಿ ಒಂದಾಗಿರುವ ಮಹಾಭಾರತದ ಕೇಂದ್ರ ಸ್ಥಾನವಾಗಿರುವ ಹಸ್ತಿನಾಪುರ ಅಥವಾ ಹಸ್ತಿನಾವತಿ ಎಂಬುದು ದ್ವಾಪರ ಯುಗದಲ್ಲಿ ಅಸ್ತಿತ್ವದಲ್ಲಿದ್ದ ಕುರು ವಂಶಜರ ರಾಜಧಾನಿಯಾಗಿ ಮೆರೆದಾಡಿತ್ತು. ಇದೀಗ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿರುವ ಹಸ್ತಿನಾಪುರ ಹಲವಾರು ಐತಿಹಾಸಿಕ ಮತ್ತು ಪೌರಾಣಿಕ ಮಹತ್ವಗಳನ್ನು ತನ್ನೊಡಲಲ್ಲಿ ಹುದುಗಿಸಿರಿಸಿಕೊಂಡಿದೆ. ಗಂಗಾ ನದಿಯ ತಟದಲ್ಲಿ ತಲೆಯೆತ್ತಿದ್ದ ಈ ಪ್ರಾಚೀನ ನಗರಿ ಬಳಿಕ ಜೈನ ಶ್ರದ್ಧಾಳುಗಳ ಮಹತ್ವದ ಕೇಂದ್ರವಾಗಿಯೂ ಇತಿಹಾಸದಲ್ಲಿ ಗುರುತಿಸಲ್ಪಟ್ಟಿದೆ. ಆದರೆ ಮಹಾಭಾರತದ ಹಿನ್ನಲೆಯಲ್ಲಿ ಬರುವ ಈ ಪುರಾಣ ಪ್ರಸಿದ್ಧ ನಗರಿ ಕೇವಲ ಹಿಂದೂಗಳಿಗೆ ಮಾತ್ರವಲ್ಲದೇ ಸಮಸ್ತ ಭಾರತೀಯರಿಗೂ ಐತಿಹಾಸಿಕ ಮಹತ್ವವನ್ನು ಹೊಂದಿರುವ ಅಧ್ಯಯನ ಯೋಗ್ಯ ಪ್ರದೇಶವಾಗಿದೆ. ಇದನ್ನು ಜೈನ ತೀರ್ಥಂಕರರ ಜನ್ಮ ಸ್ಥಳವೆಂದೂ ಸಹ ಜೈನ ಶ್ರದ್ಧಾಳುಗಳು ನಂಬಿಕೊಂಡು ಬರುತ್ತಿದ್ದಾರೆ. ಹಲವಾರು ಜಿನ ಮಂದಿರಗಳು ಹಾಗೂ ಹಿಂದೂ ಧರ್ಮ ಕೇಂದ್ರಗಳಿರುವ ಇಂತಹ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಮಹತ್ವವುಳ್ಳ ಕ್ಷೇತ್ರವನ್ನು ಪ್ರಾಕ್ತನ ಕೇಂದ್ರದ ಅಡಿಯಲ್ಲಿ ತರುವ ಸರಕಾರದ ಪ್ರಯತ್ನ ನಿಜವಾಗಿಯೂ ಪ್ರಶಂಸನೀಯ.
ಆರು ಶತಮಾನಗಳ ಅಹೋಮ್ ಸಾಮ್ರಾಜ್ಯದ ಆಳ್ವಿಕೆಯ ಕುರುಹಾಗಿರುವ ಅಸ್ಸಾಂನ ಶಿವ್ ಸಾಗರ್
ಭಾರತಕ್ಕೆ ಬ್ರಿಟಿಷರ ಆಗಮನ್ನಕ್ಕೂ ಮೊದಲು ಹಲವಾರು ರಾಜವಂಶಗಳು ಈ ದೇಶವನ್ನು ವಿವಿಧ ಪ್ರಾಂತ್ಯಗಳನ್ನಾಗಿಸಿ ತಮ್ಮ ಸಾಮ್ರಾಜ್ಯದ ಧ್ವಜದಡಿಯಲ್ಲಿ ಆಳುತ್ತಿದ್ದವು. ಈ ದೇಶದ ಸಾಂಕ್ಕೃತಿಕ, ಧಾರ್ಮಿಕ ಮತ್ತು ಶಿಲ್ಪಕಲಾ ಕ್ಷೇತ್ರಕ್ಕೆ ಈ ರಾಜಮನೆತನಗಳ ಕೊಡುಗೆ ಇಂದಿಗೂ ಸ್ಮರಣೀಯವಾದುದು. ಪ್ರಕೃತಿ ಸೌಂದರ್ಯವೇ ಮೇಳೈಸಿದಂತಿರುವ ಈಶಾನ್ಯ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಅಸ್ಸಾಂ ರಾಜ್ಯವನ್ನು ಸ್ವಾತಂತ್ರ್ಯಪೂರ್ವದಲ್ಲಿ ಸುಮಾರು 600 ವರ್ಷಗಳಷ್ಟು ಸುದೀರ್ಘ ಅವಧಿಗೆ ಆಳಿದ ರಾಜಮನೆತನವೇ ಅಹೋಮ್ ರಾಜಮನೆತನ. 1699 ರಿಂದ 1788ರವರೆಗೆ ಈ ರಾಜಮನೆತನದ ರಾಜಧಾನಿಯಾಗಿದ್ದ ಶಿವ್ ಸಾಗರ್ ಆ ದಿನಗಳಲ್ಲಿ ರಂಗ್ ಪುರ್ ಎಂಬ ಹೆಸರಿನಿಂದ ಪ್ರಸಿದ್ಧಿಯನ್ನು ಹೊಂದಿತ್ತು. ಈ ರಾಜವಂಶದ ದೊರೆ ಶಿವ ಸಿಂಗ ನಗರದ ಹೃದಯಭಾಗದಲ್ಲಿ ದೊಡ್ಡ ಕೆರೆಯೊಂದನ್ನು ಕಟ್ಟಿಸಿ ಅದಕ್ಕೆ ಶಿವ್ ಸಾಗರ್ ಎಂಬ ಹೆಸರನ್ನಿಟ್ಟ ಬಳಿಕ ಈ ನಗರ ಇದೇ ಹೆಸರಿನಿಂದ ಜನಜನಿತವಾಯಿತು. ಇದೀಗ ಅಸ್ಸಾಂ ರಾಜ್ಯದ ಒಂದು ಜಿಲ್ಲೆಯೂ ಹೌದು. ಡೆಹಿಂಗ್ ಮಳೆ ಕಾಡುಗಳು ಈ ಪಟ್ಟಣವನ್ನು ಸುತ್ತುವರೆದಿದ್ದರೆ, ಬ್ರಹ್ಮಪುತ್ರ ಹಾಗೂ ಲೋಹಿತ್ ನದಿಗಳ ಸಂಗಮ ಸ್ಥಾನವೂ ಈ ಊರಿನಲ್ಲಿದೆ. ಇಂತಹ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿರುವ ಶಿವ್ ಸಾಗರ್ ದೇಶದ ಪ್ರಾಕ್ತನಶಾಸ್ತ್ರ ಅಭ್ಯಾಸಿಗಳಿಗೆ ಮತ್ತು ಇತಿಹಾಸದ ಕುರಿತಾಗಿ ಒಲವುಳ್ಳವರಿಗೆ ಒಂದೊಳ್ಳೆ ಅಧ್ಯಯನ ಕೇಂದ್ರವೂ ಹೌದು.