ಕೀವ್: ಉಕ್ರೇನ್ ಮೇಲಿನ ರಷ್ಯಾ ಪಡೆಗಳ ದಾಳಿಯಿಂದ ಕೋಟ್ಯಾಂತರ ರೂ ನಷ್ಟ ಸಂಭವಿಸಿದೆ. ರಷ್ಯಾದ ವಾಯುದಾಳಿಯಿಂದ ಉಕ್ರೇನ್ ನಲ್ಲಿ ಹಲವಾರು ಕಟ್ಟಡಗಳು ಧರೆಗುರುಳಿದೆ. ಕೀವ್ ನ ಝೈಟೊಮಿರ್ ನಲ್ಲಿ ಶಾಲಾ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.
ರಷ್ಯಾದ ಪಡೆಗಳು ಇದುವರೆಗೆ 202 ಶಾಲೆಗಳು, 34 ಆಸ್ಪತ್ರೆಗಳು ಮತ್ತು 1,500 ವಸತಿ ಕಟ್ಟಡಗಳನ್ನು ನಾಶಪಡಿಸಿವೆ. ಝೈಟೊಮಿರ್ ಶಾಲೆಯ ಮೇಲಿನ ದಾಳಿಯಲ್ಲಿ ಯಾವುದೇ ಸಾವು ನೋವು ನಡೆದ ಬಗ್ಗೆ ವರದಿಯಾಗಿಲ್ಲ. ಉಕ್ರೇನ್ ನಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಆಗ್ನೇಯ ಉಕ್ರೇನ್ ನಲ್ಲಿರುವ ಬರ್ಡಿಯನ್ಸ್ಕ್ ನ ಹೊರವಲಯದಲ್ಲಿರುವ ಸೇನಾನೆಲೆಯನ್ನು ರಷ್ಯಾ ವಶಕ್ಕೆ ಪಡೆದಿದೆ. ಸೇನಾ ಉಪಕರಣಗಳು, ಫಿರಂಗಿಗಳು ಮತ್ತು ಇಂಧನ ಡಿಪೋಗಳನ್ನು ರಷ್ಯಾ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಅರೆಸೈನಿಕ ಪಡೆ ಸೇರಿದ ತಮಿಳುನಾಡಿನ ವಿದ್ಯಾರ್ಥಿ
ರಷ್ಯಾ ಮತ್ತು ಉಕ್ರೇನ್ ನ ವಿದೇಶಾಂಗ ಸಚಿವರುಗಳು ಮಾರ್ಚ್ 10ರಂದು ಟರ್ಕಿಯಲ್ಲಿ ಮಾತುಕತೆ ನಡೆಸಲಿದ್ದಾರೆ. ಇದು ಯುದ್ಧದ ಬಳಿ ಎರಡು ದೇಶಗಳ ನಡುವಿನ ನಾಲ್ಕನೇ ಸುತ್ತಿನ ಮಾತುಕತೆಯಾಗಿದೆ.
ರಷ್ಯಾದಿಂದ ತೈಲ ಆಮದಿಲ್ಲ: ಉಕ್ರೇನ್ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿರುವ ಜಪಾನ್, ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಿದೆ ಎಂದು ವರದಿಯಾಗಿದೆ. ರಷ್ಯಾದ ಒಕ್ಕೂಟ ಮತ್ತು ಬೆಲಾರಸ್ ನ ನಾಗರಿಕರು ಹಾಗೂ ಕಂಪನಿಗಳ ವಿರುದ್ಧವ ಜಪಾನ್ ದೇಶವು ನಿರ್ಬಂಧಗಳನ್ನು ವಿಧಿಸಿದೆ