Advertisement

Ajit Pawar ಪವರ್ ಪಾಲಿಟಿಕ್ಸ್ ; 4 ವರ್ಷದಲ್ಲಿ 3 ನೇ ಬಾರಿ ಡಿಸಿಎಂ!

07:48 PM Jul 02, 2023 | Team Udayavani |

ಮುಂಬಯಿ: 2019 ರಲ್ಲಿ ಬಿಜೆಪಿ ಸರಕಾರದ ಅಡಿಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಸಂಕ್ಷಿಪ್ತ ಅವಧಿಯ ನಂತರ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಪಕ್ಷವನ್ನು ವಿಭಜಿಸುವ ಮೂಲಕ ಮಹಾ ರಾಜಕೀಯದಲ್ಲಿನ ಘಟನೆಗಳ ಇನ್ನೊಂದು ಅದ್ಭುತ ತಿರುವಿನಲ್ಲಿ ಮತ್ತೊಮ್ಮೆ ಡಿಸಿಎಂ ಹುದ್ದೆಗೆ ಮರಳಿದ್ದಾರೆ.

Advertisement

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರಕಾರದಲ್ಲಿ ನವೆಂಬರ್ 2019 ರಿಂದ ಜೂನ್ 2022 ರವರೆಗೆ ಅಧಿಕಾರದಲ್ಲಿದ್ದ ವೇಳೆ ಉಪ ಮುಖ್ಯಮಂತ್ರಿಯಾಗಿದ್ದ ಪವಾರ್, ತಳಮಟ್ಟದ ನಾಯಕ ಮತ್ತು ಸಮರ್ಥ ಆಡಳಿತಗಾರನ ಇಮೇಜ್ ಹೊಂದಿ ಪ್ರಭಾವಿ ನಾಯಕನಾಗಿದ್ದಾರೆ.

ರಾಜಕೀಯವಾಗಿ ಮಹತ್ವಾಕಾಂಕ್ಷೆಯ ಮತ್ತು ನೇರವಾಗಿ ಮಾತನಾಡುವ 63 ವರ್ಷದ ನಾಯಕ ಅಜಿತ್, 2019 ರ ಬಳಿಕ ಮೂರನೇ ಬಾರಿಗೆ ಭಾನುವಾರ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ತಿಂಗಳುಗಟ್ಟಲೆ ಕೇಳಿಬರುತ್ತಿದ್ದ ಭಾರಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಹಿರಿಯ ಸಹೋದರ ದಿವಂಗತ ಅನಂತ್ ಪವಾರ್ ಅವರ ಪುತ್ರರಾಗಿರುವ ಅಜಿತ್ ಪವಾರ್ ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸುವಂತೆ ಮತ್ತು ಪಕ್ಷದ ಸಂಘಟನೆಯಲ್ಲಿ ಪಾತ್ರವನ್ನು ನಿಯೋಜಿಸುವಂತೆ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ್ದರು.

2019 ರ ವಿಧಾನಸಭಾ ಚುನಾವಣೆಯಲ್ಲಿ, ಅಜಿತ್ ಪವಾರ್ ಅವರು ರಾಜ್ಯದಲ್ಲಿಯೇ ಅತಿ ಹೆಚ್ಚು 1.65 ಲಕ್ಷ ಮತಗಳ ಅಂತರದಿಂದ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದರು.

Advertisement

ನವೆಂಬರ್ 2019 ರಲ್ಲಿ, ಅಜಿತ್ ಪವಾರ್ ಅವರು ಬಿಜೆಪಿಯ ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರದಲ್ಲಿ ಕಡಿಮೆ ಅವಧಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದು ರಾಜಭವನದಲ್ಲಿ ನಡೆದ ಸಮಾರಂಭದ ಬಳಿಕ ಕೇವಲ 80 ಗಂಟೆಗಳಲ್ಲಿ ಸರಕಾರ ಪತನವಾಗಿತ್ತು.

ಅಶೋಕ್ ಚವಾಣ್ ಮತ್ತು ಪೃಥ್ವಿರಾಜ್ ಚವಾಣ್ ಅವರ 15 ವರ್ಷಗಳ ಕಾಂಗ್ರೆಸ್-ಎನ್‌ಸಿಪಿ ಸರ್ಕಾರದ ಅವಧಿಯಲ್ಲಿ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಜಿತ್ ಜಲಸಂಪನ್ಮೂಲ ಮತ್ತು ವಿದ್ಯುತ್ ಇಲಾಖೆಗಳನ್ನೂ ನಿಭಾಯಿಸಿದ್ದಾರೆ.

ಅಜಿತ್ ಪವಾರ್ 1982 ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರಾಗಿ ರಾಜಕೀಯಕ್ಕೆ ಕಾಲಿಟ್ಟರು. ಅವರು 1991 ರಲ್ಲಿ ಪುಣೆ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಹಲವು ವರ್ಷಗಳ ಕಾಲ ಹುದ್ದೆಯಲ್ಲಿ ಇದ್ದರು.1991 ರಲ್ಲಿ ಬಾರಾಮತಿಯಿಂದ ಸಂಸದರಾಗಿ ಆಯ್ಕೆಯಾದರು, ಆದರೆ ನರಸಿಂಹರಾವ್ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಚಿಕ್ಕಪ್ಪ ಶರದ್ ಪವಾರ್ ಅವರಿಗಾಗಿ ಕ್ಷೇತ್ರ ಬಿಟ್ಟು ಕೊಟ್ಟರು. ನಂತರ, ಅಜಿತ್ ಪವಾರ್ ಅವರು ಬಾರಾಮತಿಯಿಂದ ಶಾಸಕರಾಗಿ ಆಯ್ಕೆಯಾದರು ಮತ್ತು ಆರು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಅವರು ಮೊದಲು ಸುಧಾಕರ್ ರಾವ್ ನಾಯಕ್ ಸರಕಾರದಲ್ಲಿ ಕೃಷಿ ಮತ್ತು ವಿದ್ಯುತ್ ರಾಜ್ಯ ಸಚಿವರಾದರು ಮತ್ತು ನಂತರ 1999 ರಲ್ಲಿ ಕ್ಯಾಬಿನೆಟ್ ಸಚಿವರಾದರು.

ತನಿಖೆ ಎದುರಿಸುತ್ತಿದ್ದಾರೆ

ಅಜಿತ್ ಪವಾರ್ ಅವರ ಆಪ್ತ ಸಹಾಯಕರು ಮತ್ತು ಕುಟುಂಬ ಸದಸ್ಯರು ತಮ್ಮ ಸಕ್ಕರೆ ಸಹಕಾರಿ ಘಟಕಗಳಲ್ಲಿ ಜಾರಿ ನಿರ್ದೇಶನಾಲಯ ಮತ್ತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆಯನ್ನು ಎದುರಿಸುತ್ತಿದ್ದಾರೆ.

2014 ರಲ್ಲಿ, ವಿರೋಧ ಪಕ್ಷದಲ್ಲಿದ್ದ ದೇವೇಂದ್ರ ಫಡ್ನವೀಸ್, 70,000 ಕೋಟಿ ರೂಪಾಯಿಗಳ ನೀರಾವರಿ ಹಗರಣದಲ್ಲಿ ಅಜಿತ್ ಪವಾರ್ ಭಾಗಿಯಾಗಿರುವುದನ್ನು ಎತ್ತಿ ತೋರಿಸಿದ್ದರು. ಅಜಿತ್ ಪವಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯದ ನೀರಾವರಿ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next