Advertisement
ಖುದ್ದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇದನ್ನು ದೃಢಪಡಿಸಿದ್ದು, ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ, ಬರುವ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಗೆಲ್ಲುವ ಸಾಮರ್ಥ್ಯ ಹಾಗೂ ಕ್ಷೇತ್ರಗಳಲ್ಲಿ ಜನಪ್ರಿಯತೆ ಉಳಿಸಿಕೊಂಡಿರುವ ಅಭ್ಯರ್ಥಿಗಳು ಬೇಕು. ಹೀಗಾಗಿ, ಅಂತಹ ಅಭ್ಯರ್ಥಿಗಳ ಬಗ್ಗೆ ಆಂತರಿಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
Related Articles
ನೋಟ್ ಬ್ಯಾನ್ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಹೋರಾಟ ಮಾಡಲು ಸೂಚನೆ ನೀಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರುಗಳು ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಿರುವ ಬಗ್ಗೆಯೂ ಪರಮೇಶ್ವರ್ ಸಭೆಯ ಗಮನಕ್ಕೆ ತಂದು ಮಾರ್ಚ್ ಅಂತ್ಯದೊಳಗೆ ಎಲ್ಲ ಜಿಲ್ಲೆಗಳಲ್ಲಿಯೂ ಹೋರಾಟ ಮಾಡಬೇಕು ಎಂದು ಸೂಚಿಸಿದರು.
Advertisement
ನೋಟ್ ಅಮಾನ್ನೀಕರಣ ಹೋರಾಟದಲ್ಲಿ ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳದಿದ್ದರೆ ಅಂತಹ ಸಚಿವರ ವಿರುದ್ಧ ಎಐಸಿಸಿ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು.
ಸಾಲ ಮನ್ನಾ ಮಾಡಲು ಆಗ್ರಹಸತತ ಮೂರು ವರ್ಷದಿಂದ ರಾಜ್ಯದಲ್ಲಿ ತೀವ್ರ ಬರ ಬೀಳುತ್ತಿರುವುದರಿಂದ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕೆಂದು ಪದಾಧಿಕಾರಿಗಳ ಸಭೆಯಲ್ಲಿ ಆಗ್ರಹ ಕೇಳಿ ಬಂದಿದೆ. ಈ ಬಗ್ಗೆ ಬಜೆಟ್‌ನಲ್ಲಿ ಸರ್ಕಾರ ಘೋಷಣೆ ಮಾಡಬೇಕು ಎಂದು ಪದಾಧಿಕಾರಿಗಳು ಪರಮೇಶ್ವರ್ ಅವರನ್ನು ಆಗ್ರಹಿಸಿದರು. ಮುಖ್ಯಮಂತ್ರಿ ಬಜೆಟ್ ಮಂಡಿಸುವ ಮುಂಚೆ ಕೆಪಿಸಿಸಿ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಬೇಕು ನಮ್ಮ ಸಲಹೆಗಳನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಪಡಿತರ ವ್ಯವಸ್ಥೆಯಲ್ಲಿ ಕೂಪನ್ ಕೊಡುವ ವ್ಯವಸ್ಥೆಯ ಬಗ್ಗೆಯೂ ಆಕ್ಷೇಪ ಕೇಳಿ ಬಂದಿದ್ದು, ಅನ್ನಭಾಗ್ಯ ಯೋಜನೆಯ ಲಾಭ ಬಡವರಿಗೆ ಆಗುತ್ತದೆ. ಅದನ್ನು ಸರಿಯಾಗಿ ನಿಭಾಯಿಸದಿದ್ದರೆ, ಬೇರೆ ಪಕ್ಷಗಳು ಅದರ ಲಾಭ ಪಡೆಯಲಿವೆ ಎಂದು ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಸಿದರು ಎನ್ನಲಾಗಿದೆ. ಜಿಲ್ಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕೆಪಿಸಿಸಿ ಗಮನಕ್ಕೆ ತಂದರೆ, ಬಜೆಟ್ ಸಂದರ್ಭದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಬಂಧಿಸಿದ ಮಂತ್ರಿಗಳಿಗೆ ಸೂಚಿಸುವುದಾಗಿ ಪರಮೇಶ್ವರ್ ಸಭೆಗೆ ಭರವಸೆ ನೀಡಿದರು. ಸಭೆ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಭೆಯಲ್ಲಿ ಮೂರು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ, ಪಕ್ಷದ ಸಾಂಸ್ಥಿಕ ಚುನಾವಣೆ ಪ್ರಕ್ರಿಯೆ ಆರಂಭ ಮಾಡಿದ್ದೇವೆ.ರಾಜ್ಯದಲ್ಲಿ 70 ಸಾವಿರ ಭೂತ್‌ಗಳಿದ್ದು, ಪ್ರತಿ ಭೂತ್‌ನಲ್ಲಿಯೂ ಕನಿಷ್ಠ 50 ಮೆಂಬರ್ ಇರುವಂತೆ ನೋಡಿಕೊಳ್ಳಲು ಸಭೆಯಲ್ಲಿ ಸೂಚಿಸಲಾಗಿದೆ. ಜಿಲ್ಲಾಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಲಿದೆ ಎಂದು ಪರಮೇಶ್ವರ್ ಹೇಳಿದರು. ಕೃಷ್ಣ ರಾಜೀನಾಮೆ ವಿಚಾರ ಚರ್ಚೆ
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರಾಜೀನಾಮೆ ವಿಷಯ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಎಸ್.ಎಂ. ಕೃಷ್ಣ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವ ಕುರಿತು ಸಭೆಗೆ ಮಾಹಿತಿ ನೀಡುವಂತೆ ಪರಮೇಶ್ವರ್ ಅವರನ್ನು ಪದಾಧಿಕಾರಿಗಳು ಆಗ್ರಹಿಸಿದರು. ಕೃಷ್ಣ ಅವರು ರಾಜೀನಾಮೆ ಕೊಟ್ಟಾಗಲೇ ನಮಗೂ ಗೊತ್ತಾಗಿದ್ದು, ರಾಜೀನಾಮೆ ಕೊಟ್ಟ ಮೇಲೆ ಒಂದು ಸಾರಿ ಮಾತನಾಡಿದ್ದೇವೆ. ನಮ್ಮ ಕೈಯಲ್ಲಿ ಏನೂ ಇಲ್ಲ. ಹೈಕಮಾಂಡ್ ಎಲ್ಲವನ್ನು ನೋಡಿಕೊಳ್ಳುತ್ತದೆ ಎಂದು ಪರಮೇಶ್ವರ್ ತಿಳಿಸಿದರು. ಸರ್ಕಾರ ಮತ್ತು ಮುಖ್ಯಮಂತ್ರಿ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವ ಹಿರಿಯ ನಾಯಕರಾದ ಜನಾರ್ಧನ ಪೂಜಾರಿ ಹಾಗೂ ಎಚ್.ವಿಶ್ವನಾಥ್ ಅವರಿಗೆ ಕಡಿವಾಣ ಹಾಕಬೇಕೆಂಬ ಒತ್ತಾಯವೂ ಸಭೆಯಲ್ಲಿ ಕೇಳಿ ಬಂದಿತು. ಆ ವಿಷಯದಲ್ಲಿಯೂ ಕೆಪಿಸಿಸಿ ಕ್ರಮ ಕೈಗೊಳ್ಳಲು ಬರುವುದಿಲ್ಲ. ಎಐಸಿಸಿ ಗಮನಕ್ಕೆ ತರಲಾಗುವುದು ಎಂದು ಪರಮೇಶ್ವರ್ ಜಾರಿಕೊಂಡರು ಎಂದು ಮೂಲಗಳು ತಿಳಿಸಿವೆ.