Advertisement

ಧಾರವಾಡ ಸಾಹಿತ್ಯ ಸಂಭ್ರಮ-2017ಕ್ಕೆ ಅದ್ದೂರಿ ಚಾಲನೆ

03:45 AM Jan 21, 2017 | |

ಧಾರವಾಡ: ಮೂರು ದಿನಗಳ ಕಾಲ ನಡೆಯುವ “ಧಾರವಾಡ ಸಾಹಿತ್ಯ ಸಂಭ್ರಮ-2017’ಕ್ಕೆ ಶುಕ್ರವಾರ ಅದ್ದೂರಿ ಚಾಲನೆ ಸಿಕ್ಕಿದೆ. ಇಲ್ಲಿನ ಕವಿವಿಯ ಸುವರ್ಣ ಮಹೋತ್ಸವ ಭವನದಲ್ಲಿ ಆರಂಭಗೊಂಡ ಕಾರ್ಯಕ್ರಮವನ್ನು ನಾಡೋಜ ಡಾ| ಕೆ.ಎಸ್‌.ನಿಸಾರ್‌ ಅಹಮದ್‌ ಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವ ಅಕ್ಷರಗಳನ್ನು ಯಾರೇ ಬರೆದರೂ ಅದನ್ನು ಸ್ವೀಕರಿಸಬೇಕಾದ ಅಗತ್ಯತೆ ಇಂದು ಇದೆ ಎಂದು ಅಭಿಪ್ರಾಯಪಟ್ಟರು.

ಕಾರ್ಪೋರೇಟ್‌ ಜಗತ್ತಿನಲ್ಲಿ ಕೆಲಸ ಮಾಡುವ ಅನೇಕರು ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈ ವಿಚಾರ ಇಂದು ಚರ್ಚೆಗೆ ಗ್ರಾಸವಾಗಿ ಪರ, ವಿರೋಧ ಚರ್ಚೆ ನಡೆಯುತ್ತಿದೆ. ಕಾರ್ಪೋರೇಟ್‌ ಜಗತ್ತಿನಲ್ಲಿ ಕೆಲಸ ಮಾಡುವ ಸಾಹಿತಿಗಳು ಹೊಟ್ಟೆ ತುಂಬಿದವರು. ಅವರಿಗೆ ಹಣ ಹೆಚ್ಚಾಗಿದ್ದು, ಕೀರ್ತಿ ಪಡೆಯುವುದಕ್ಕೆ ಸಾಹಿತ್ಯ ಲೋಕಕ್ಕೆ ಬರುತ್ತಿದ್ದಾರೆ. ಅವರಿಂದ ಕನ್ನಡದ ಪಾವಿತ್ರÂ ಹಾಳಾಗುತ್ತದೆ ಎಂಬ ಆರೋಪಗಳಿವೆ. ಆದರೆ ಅವು ಏಕಪಕ್ಷೀಯವಾಗಿವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತ್ಯ ಸಂಭ್ರಮ ಸಂಘಟಕ ಡಾ|ಗಿರಡ್ಡಿ ಗೋವಿಂದರಾಜ್‌, ಸಾಹಿತ್ಯ ಸಂಭ್ರಮ ಯಶಸ್ವಿಯಾಗಿ ಇದೀಗ 5ನೇ ವರ್ಷಕ್ಕೆ ಕಾಲಿಟ್ಟಿದೆ. ಈ ವೇದಿಕೆ ಮೂಲಕ ಸಾಹಿತ್ಯ ವಿಚಾರಗಳು ಮಾತ್ರವಲ್ಲ, ನಾಡು-ನುಡಿಯ ವಿಚಾರಗಳು ಚರ್ಚೆಯಾಗಲಿ ಎನ್ನುವುದು ನಮ್ಮ ಆಶಯ ಎಂದರು.

ಸಾಹಿತ್ಯ ಸಂಭ್ರಮ ಉದ್ಘಾಟಿಸಿದ ಡಾ|ಕೆ.ಎಸ್‌.ನಿಸಾರ್‌ ಅಹಮದ್‌  ಸಾಹಿತ್ಯಾಸಕ್ತರ ಒತ್ತಾಸೆಗೆ ಮಣಿದು ತಾವು ಬರೆದ, ರಾಮನ್‌ ಸತ್ತ ಸುದ್ದಿ ಮತ್ತು ನಿಮ್ಮೊಡನಿದ್ದು ನಿಮ್ಮಂತಾಗದೇ ಎನ್ನುವ ಕವನ ವಾಚನ ಮಾಡಿ ಗಮನ ಸೆಳೆದರು.

Advertisement

ಡಾ|ಎಚ್‌.ಎಸ್‌. ವೆಂಕಟೇಶಮೂರ್ತಿ ಆಶಯ ಭಾಷಣ ಮಾಡಿದರು. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌, ನಾಡೋಜ ಚೆನ್ನವೀರ ಕಣವಿ, ಲೇಖಕಿ ಡಾ| ವೀಣಾ ಶಾಂತೇಶ್ವರ, ಡಾ|ಲೋಹಿತ್‌ ನಾಯ್ಕರ್‌, ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ ಉಪಸ್ಥಿತರಿದ್ದರು.

ಉಮಾಶ್ರೀ ಗೈರು:
ಸಾಹಿತ್ಯ ಸಂಭ್ರಮದ ಉದ್ಘಾಟನೆಗೆ ಆಗಮಿಸಬೇಕಿದ್ದ ಸಚಿವೆ ಉಮಾಶ್ರೀ ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು.

ಡಾ|ಕಲಬುರ್ಗಿ ಹಂತಕರ ಸೆರೆಗೆ ಆಗ್ರಹ:
ಸಂಶೋಧಕ ಡಾ|ಎಂ.ಎಂ.ಕಲಬುರ್ಗಿ ಅವರ ಹಂತಕರ ಬಂಧನಕ್ಕೆ ಸಾಹಿತ್ಯ ಸಂಭ್ರಮದಲ್ಲಿ ಮತ್ತೆ ಒಕ್ಕೊರಲ ಆಗ್ರಹ ಕೇಳಿ ಬಂತು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ|ಗಿರಡ್ಡಿ ಗೋವಿಂದರಾಜ್‌, ಎಂ.ಎಂ.ಕಲಬುರ್ಗಿ ಅವರ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಲು ಸಾಧ್ಯವಾಗದಿರುವುದು ವಿಷಾದನೀಯ. ಸರ್ಕಾರ ಕೂಡಲೇ ಹಂತಕರನ್ನು ಬಂಧಿಸಬೇಕು. ಇನ್ನು ಅವರ ಹೆಸರಿನ ಮೇಲೆ ಪ್ರತ್ಯೇಕವಾದ ಸಂಶೋಧನಾ ಕೇಂದ್ರವನ್ನು ಧಾರವಾಡದಲ್ಲಿ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next