Advertisement

‘2,012 ವಿದ್ಯಾರ್ಥಿಗಳ ದಾಖಲಾತಿ’

11:43 AM Jul 20, 2018 | |

ಬಂಟ್ವಾಳ : ಪ್ರಸಕ್ತ ಸಾಲಿನಲ್ಲಿ ಉಡುಪಿ, ದ.ಕ ಜಿಲ್ಲಾ ವ್ಯಾಪ್ತಿಯ 40 ಶಾಲೆಗಳು ತುಳು ಪಠ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಳು ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಆಯ್ದುಕೊಂಡಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ತುಳು ಭಾಷಾ ಪರೀಕ್ಷೆಗೆ 2,012 ವಿದ್ಯಾರ್ಥಿಗಳ ದಾಖಲಾತಿ ಆಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು.

Advertisement

ಅವರು ಜು. 19ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಭಾಂಗಣದಲ್ಲಿ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ತುಳು ಭಾಷಾ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಮನ್ವಯಾಧಿಕಾರಿ ರಾಜೇಶ್‌ ಜಿ. ಮಾತನಾಡಿ, ತುಳು ಭಾಷೆ, ಸಂಸ್ಕೃತಿಯನ್ನು ವಿದ್ಯಾರ್ಥಿ ಜೀವನದಲ್ಲಿಯೇ ಕಲಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ತುಳು ವ್ಯಾಪಕವಾಗಿ ಬೆಳೆಯುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ| ಗಿರೀಶ್‌ ಭಟ್‌ ಅಜಕ್ಕಳ ಮಾತನಾಡಿ ತುಳು ಭಾಷೆ, ನಾಡು, ಸಂಸ್ಕೃತಿಯ ಇತಿಹಾಸವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ. ತುಳು ಭಾಷೆ ಪ್ರಾಚೀನ, ಸಂಪದ್ಭರಿತ, ಪ್ರಬುದ್ಧವಾದುದು. ತುಳುನಾಡಿನ ಇತಿಹಾಸ, ಭಾಷೆ, ಜನಪದೀಯ ಬದುಕು, ಕೃಷಿ, ಔದ್ಯೋಗಿಕ ನೆಲೆಗಳ ಬಗ್ಗೆ ಸಂಶೋಧನೆಗಳು ಆಗಬೇಕು. ತುಳುನಾಡಿದ ಧಾರ್ಮಿಕ ಬದುಕು ಅತ್ಯಂತ ಪ್ರಾಚೀನ, ಆಧ್ಯಾತ್ಮಿಕ ಮೌಲ್ಯದಿಂದ ಕೂಡಿತ್ತು. ಅನೇಕ ಧಾರ್ಮಿಕ ಕೇಂದ್ರಗಳು ಪರಂಪರಾಗತವಾಗಿ ಧ್ಯಾನಕೇಂದ್ರಗಳಾಗಿ ಸಹಸ್ರಾರು ವರ್ಷಗಳಿಂದ ಗುರುತಿಸಲ್ಪಟ್ಟಿವೆ ಎಂದರು.

ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಗಾನ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳ ತುಳು-ಕನ್ನಡ ಪಠ್ಯಪುಸ್ತಕದ ಬಗ್ಗೆ ವಿಮರ್ಶಿಸಿ, ಗದ್ಯ ಪಾಠ ಬೋಧನೆಯಲ್ಲಿ ಬರುವ ಸಮಸ್ಯೆಗಳು ಪರಿಹಾರ ವಿವರಿಸಿ, ಶಿಕ್ಷಕರು ತುಳು ಭಾಷಾ ಪಠ್ಯವನ್ನು ಹೊಸ ವಿಧಾನದಲ್ಲಿ ಮಕ್ಕಳಿಗೆ ತಿಳಿ ಹೇಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು. 

ಅಕಾಡೆಮಿ ಮಾಜಿ ಸದಸ್ಯ, ಯಕ್ಷಗಾನ ವೃತ್ತಿ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ, ಜಗತ್ತಿನ ಇತರ ಯಾವುದೇ ಭಾಷೆಗಿಂತ ಹೆಚ್ಚು ಶಬ್ದ ಭಂಡಾರ ತುಳುವಿನಲ್ಲಿದೆ. ಒಂದು ವಸ್ತುವಿಷಯವನ್ನು ವಿವರಿಸುವಲ್ಲಿ ತುಳುವಿನಲ್ಲಿ ಪ್ರತ್ಯೇಕ ಶಬ್ದ ಅರ್ಥಗಳನ್ನು ವಿಂಗಡಿಸಿ ನೀಡುವುದಾಗಿ ತಿಳಿಸಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಮಾತನಾಡಿ, ತುಳು ಭಾಷೆಯಲ್ಲಿ ಪ್ರಾದೇಶಿಕ ವೈವಿಧ್ಯ ಉಳಿಸಿಕೊಳ್ಳುವುದು ಅಗತ್ಯ ಎಂದರು. ಅಕಾಡೆಮಿ ರಿಜಿಸ್ಟಾರ್‌ ಚಂದ್ರಹಾಸ ರೈ ಬಿ. ಸ್ವಾಗತಿಸಿ, ಪ್ರಸ್ತಾವಿಸಿದರು. ಅಕಾಡೆಮಿ ಸದಸ್ಯ ಎ. ಗೋಪಾಲ ಅಂಚನ್‌ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next