Advertisement

ನಾಯಕನಹಟ್ಟಿ: ಮಾನವ ರಹಿತ ಯುದ್ಧ ಡ್ರೋಣ್‌ ‘ತಪಸ್‌’ನ 200 ಹಾರಾಟ ಪೂರ್ಣ

05:35 PM Jun 28, 2023 | Team Udayavani |

ನಾಯಕನಹಟ್ಟಿ: ಮಾನವ ರಹಿತ ಯುದ್ಧ ಡ್ರೋಣ್‌ ತಪಸ್‌ (ಯುಎವಿ) ಸತತ 200 ಹಾರಾಟಗಳನ್ನು ಪೂರ್ಣಗೊಳಿಸಿದ ಸಂದರ್ಭ ಮಂಗಳವಾರ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಬಳಿಯ ಕುದಾಪುರದ ಡಿಆರ್‌ಡಿಒ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ನಲ್ಲಿ ರಕ್ಷಣಾ ಪಡೆಗಳ ತ್ರಿಸೇವಾ ತಂಡದ ಮುಂದೆ ಪ್ರಾತ್ಯಕ್ಷಿಕೆ ನಡೆಸಲಾಯಿತು. ಇದೀಗ ಬಳಕೆದಾರರ ಮೌಲ್ಯಮಾಪನಕ್ಕೆ ಡ್ರೋಣ್‌ ಸಿದ್ಧಗೊಂಡಿದೆ.

Advertisement

ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಸಂಪೂರ್ಣ ದೇಶೀಯವಾಗಿ ನಿರ್ಮಿಸಿರುವುದು ಇದರ ಪ್ರಮುಖ ಅಂಶವಾಗಿದೆ. ಇಸ್ರೇಲ್‌ ನಿರ್ಮಿತ ಹೀರಾನ್‌ ಡ್ರೋಣ್‌ ಗೆ ಸ್ಪರ್ಧೆಯೊಡ್ಡುವಂತಿರುವ ದೇಶಿ ಡ್ರೋಣ್‌ ಸತತ 200 ಹಾರಾಟಗಳನ್ನು ಪೂರೈಸಿರುವುದು ಡಿಆರ್‌ಡಿಒ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು. ಇಲ್ಲಿನ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ (ಎಟಿಅರ್‌) ನಲ್ಲಿ ತ್ರಿಸೇವಾ ತಂಡದ ಸದಸ್ಯರಿಗೆ ಈ ಡ್ರೋಣ್‌ ನ ಪ್ರಾತ್ಯಕ್ಷಿಕೆ ನಡೆಯಿತು. ಈ ತಂಡವು ಪರೀಕ್ಷಾ ಕಾರ್ಯ ಕೈಗೊಂಡ ಎಲ್ಲ ಸಿಬ್ಬಂದಿಯನ್ನು ಅಭಿನಂದಿಸಿದೆ.

ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳ ಪ್ರಮುಖರನ್ನು ಒಳಗೊಂಡ ತಂಡ ಡಿಆರ್‌ ಡಿಒದಲ್ಲಿ “ತಪಸ್‌’ ಡ್ರೋಣ್‌ನ ಪರಿಶೀಲನೆ ನಡೆಸಿತು. ಹಾರಾಟ, ನಿಯಂತ್ರಣ ಸೇರಿದಂತೆ ಎಲ್ಲ ಅಂಶಗಳ ನಿಖರತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿತು. ಮಾರಾಟ ಮತ್ತು ರಫ್ತು ಉದ್ದೇಶ ಹೊಂದಿರುವ ಡ್ರೋಣ್‌ನ್ನು ಇನ್ನಷ್ಟು ಸುಧಾರಣೆ ಮಾಡುವ ಕಾರ್ಯದಲ್ಲಿ ಡಿಆರ್‌ಡಿಒ ತೊಡಗಿದೆ.

“ತಪಸ್‌’ ವಿಶೇಷತೆಗಳು: ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2023ರಲ್ಲಿ ಮೊದಲ ಬಾರಿಗೆ ಪ್ರದರ್ಶನಕ್ಕೆ ಬಂದ ಈ ಡ್ರೋಣ್‌ ಎಲ್ಲರ ಗಮನ ಸೆಳೆದಿತ್ತು. 18 ಸಾವಿರ ಅಡಿ ಎತ್ತರದಲ್ಲಿ (ಅಂದಾಜು 5.5 ಕಿಮೀ) ಸತತ 18 ಗಂಟೆಗಳ ಕಾಲ ಹಾರಾಡುವ ಕ್ಷಮತೆ ಹೊಂದಿದೆ. 9.5 ಮೀಟರ್‌ ಉದ್ದ ಮತ್ತು 20.6 ಮೀಟರ್‌ ಉದ್ದದ ರೆಕ್ಕೆಗಳನ್ನು ಹಾಗೂ 1800 ಕೆಜಿ ತೂಕವನ್ನು ಒಳಗೊಂಡಿದೆ. 350 ಕೆಜಿ ರಕ್ಷಣಾ ಯುದ್ಧ ಸಾಮಗ್ರಿಗಳನ್ನು ಹೊತ್ತೂಯ್ಯಬಲ್ಲದು. ಒಂದು ಸಾವಿರ ಕಿಮೀ ವ್ಯಾಪ್ತಿಯಲ್ಲಿ ಹಾರಾಡುವ ಮತ್ತು ಆಕ್ರಮಣ ಮಾಡುವ ಸಾಮರ್ಥ್ಯ ಈ ಡ್ರೋಣ್‌ ಗಿದೆ. ಗಂಟೆಗೆ 224 ಕಿಮೀ ವೇಗದಲ್ಲಿ ಸಾಗುವ ಡ್ರೋಣ್‌ 130-180 ಎಚ್‌ಪಿ ಸಾಮರ್ಥ್ಯ ಹೊಂದಿದೆ.

Advertisement

ಸಮುದ್ರ ಮಟ್ಟದಿಂದ 28 ಸಾವಿರ ಅಡಿ ಎತ್ತರದಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಸತತ 18 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಭೂಮಿಯಿಂದ ಸಾಗರದ ಮೇಲ್ಮೈ ಮೇಲೆ ಇರುವ ಜಲನೌಕೆಗೆ ಕಾರ್ಯಗಳನ್ನು ವರ್ಗಾಯಿಸುವ ಪರೀಕ್ಷೆಯನ್ನು ಈಗಾಗಲೇ ಭೂಸೇನೆ ಮತ್ತು ನೌಕಾಸೇನೆಗಳು ಯಶಸ್ವಿಯಾಗಿ ಪೂರೈಸಿವೆ. 100ರಿಂದ 500 ಕೆಜಿ ಭಾರದ ಯುದ್ಧ ಸಾಮಗ್ರಿಗಳನ್ನು ಕೊಂಡೊಯ್ಯವ ಸಾಮರ್ಥ್ಯ ಇದಕ್ಕಿದೆ. ವಿಮಾನದಂತೆ ಭೂಮಿಯಿಂದ ನಭಕ್ಕೆ ಹಾರುವ ಮತ್ತು ಇಳಿಯುವ ಶಕ್ತಿ ಹೊಂದಿದೆ.

ಈ ಡ್ರೋಣ್‌ನ್ನು ಮೇಲ್‌ (ಮೀಡಿಯಂ ಅಲ್ಟಿಟ್ಯೂಡ್‌ ಆ್ಯಂಡ್‌ ಲಾಂಗ್‌ ಎನ್‌ಡ್ಯೂರೇನ್ಸ್‌) ಮಧ್ಯಮ ಎತ್ತರ ಮತ್ತು ಹೆಚ್ಚಿನ ಕಾಲ ಕಾರ್ಯನಿರ್ವಹಿಸುವ ಡ್ರೋಣ್‌ ಎಂದು ಕರೆಯಲಾಗಿದೆ. ಹೇಲ್‌ (ಹೈ ಅಲ್ಟಿಟ್ಯೂಡ್‌ ಆ್ಯಂಡ್‌ ಲಾಂಗ್‌ ಎನ್‌ಡ್ಯೂರೆನ್ಸ್‌) ಮುಂದಿನ ಗುರಿಯಾಗಿದೆ. ಭೂಮಿಯಿಂದ 50ರಿಂದ 60 ಸಾವಿರ ಅಡಿ ಎತ್ತರದಲ್ಲಿ ಸಾಗುವ ಮತ್ತು ಒಂದು ಸಾವಿರ ಕೆಜಿ ಭಾರ ಹೊತ್ತು ಸಾಗುವಂತೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next