ವಾರಾಣಸಿ : 2006ರಲ್ಲಿ ವಾರಾಣಸಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಆರೋಪಿ, ಉಗ್ರ ವಲಿಯುಲ್ಲಾಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಜಿತೇಂದ್ರ ಕುಮಾರ್ ಸಿನ್ಹಾ ಅವರ ಪೀಠ ಸೋಮವಾರ ಮರಣದಂಡನೆ ವಿಧಿಸಿದೆ.
ಶನಿವಾರ ನ್ಯಾಯಾಲಯ ವಲಿಯುಲ್ಲಾ ದೋಷಿ ಎಂದು ತೀರ್ಪು ನೀಡಿತ್ತು. ವಾರಾಣಸಿಯಲ್ಲಿ ಬಾಂಬ್ ಸ್ಫೋಟದಲ್ಲಿ 18 ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿಗಾಗಿ ಎಲ್ಲರೂ ಕಾಯುತ್ತಿದ್ದರು.
ವಿಚಾರಣೆಗೂ ಮುನ್ನ ನ್ಯಾಯಾಲಯದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ನ್ಯಾಯಾಲಯದ ಮೂರು ಮಾರ್ಗಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಒನ್ ವೇ ಮೂಲಕ ಪರಿಶೀಲಿಸಿದ ನಂತರವೇ ನ್ಯಾಯಾಲಯ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಭದ್ರತೆಯ ದೃಷ್ಟಿಯಿಂದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ಹೋಗುವ ಗ್ಯಾಲರಿಯಲ್ಲಿ ಪೊಲೀಸರನ್ನು ನಿಯೋಜಿಸಿ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯವನ್ನು ಸಂಪರ್ಕಿಸಲು ಬೇರೆ ಯಾವುದೇ ವಕೀಲರಿಗೆ ಅವಕಾಶವಿರಲಿಲ್ಲ. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳವೂ ಸ್ಥಳದಲ್ಲಿ ಬೀಡುಬಿಟ್ಟಿತ್ತು.
ಮಾರ್ಚ್ 7, 2006 ರಂದು ಸರಣಿ ಬಾಂಬ್ ಸ್ಫೋಟಗಳು ನಡೆದಿದ್ದವು ಸಂಕತ್ಮೋಚನ್ ದೇವಸ್ಥಾನದಲ್ಲಿ ಸಂಜೆ 6.15 ಕ್ಕೆ ಮೊದಲ ಬಾಂಬ್ ಸ್ಫೋಟ ಸಂಭವಿಸಿ ಏಳು ಮಂದಿ ಸಾವನ್ನಪ್ಪಿ, 26 ಮಂದಿ ಗಾಯಗೊಂಡಿದ್ದರು. ಅದೇ ದಿನ, 15 ನಿಮಿಷಗಳ ನಂತರ ದಶಾಶ್ವಮೇಧ ಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಜಮ್ಮು ರೈಲ್ವೆ ಗೇಟ್‌ನ ರೇಲಿಂಗ್ ಬಳಿ ಕುಕ್ಕರ್ ಬಾಂಬ್ ಪತ್ತೆಯಾಗಿತ್ತು . ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಇಲ್ಲಿ ಸ್ಫೋಟವನ್ನು ತಪ್ಪಿಸಲಾಗಿತ್ತು.ಈ ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯವು ಭಯೋತ್ಪಾದಕ ವಲಿಯುಲ್ಲಾನನ್ನು ಕೊಲೆ, ಕೊಲೆಯ ಯತ್ನ, ಸ್ಫೋಟಕ ವಸ್ತುಗಳ ಕಾಯಿದೆ ಮತ್ತು ಭಯೋತ್ಪಾದಕ ಚಟುವಟಿಕೆಯ ಆರೋಪದ ಮೇಲೆ ದೋಷಿ ಎಂದು ಘೋಷಿಸಿತ್ತು.
ರೈಲು ನಿಲ್ದಾಣದಲ್ಲಿ ಚೇಂಬರ್ ಮುಂದೆ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 50 ಮಂದಿ ಗಾಯಗೊಂಡಿದ್ದರು. ಆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಅವನನ್ನು ಖುಲಾಸೆಗೊಳಿಸಿದೆ.
ಸ್ಥಳೀಯ ವಕೀಲರು ವಲಿಯುಲ್ಲಾ ಪರ ವಕಾಲತ್ತು ವಹಿಸಲು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ. 24 ಡಿಸೆಂಬರ್ 2006 ರಂದು, ಹೈಕೋರ್ಟ್‌ನ ಆದೇಶದ ಮೇರೆಗೆ, ಈ ಪ್ರಕರಣವನ್ನು ವಿಚಾರಣೆಗಾಗಿ ಗಾಜಿಯಾಬಾದ್‌ಗೆ ವರ್ಗಾಯಿಸಲಾಗಿತ್ತು. ವಲಿಯುಲ್ಲಾ ಪ್ರಯಾಗರಾಜ್‌ನ ಫುಲ್‌ಪುರದಲ್ಲಿರುವ ನಾಲ್ಕುಪ್ ಕಾಲೋನಿಯ ನಿವಾಸಿಯಾಗಿದ್ದಾನೆ.