Advertisement

ಪಶ್ಚಿಮ ಘಟ್ಟದ ನಾಲ್ಕು ಜಿಲ್ಲೆಗಳಲ್ಲಿ 20,000 ಹೆ. ಅರಣ್ಯ ನಾಶ!

02:34 PM Aug 19, 2019 | Sriram |

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಾದುಹೋಗುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ 17 ವರ್ಷಗಳಲ್ಲಿ ಬರೋಬ್ಬರಿ 20 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶ ನಾಶವಾಗಿ ಜೀವ ವೈವಿಧ್ಯದ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ.

Advertisement

ಹಲವು ಕಾರಣಗಳಿಗಾಗಿ ವರ್ಷದಿಂದ ವರ್ಷಕ್ಕೆ ಅರಣ್ಯ ನಾಶದ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಪಶ್ಚಿಮ ಘಟ್ಟದ ಭೌಗೋಳಿಕ ಸೂಕ್ಷ್ಮತೆಯು ಕ್ಷೀಣಿಸುತ್ತಿದ್ದು, ಪರಿಸರ ಸಮತೋಲನದ ಸ್ಥಿತ್ಯಂತರಕ್ಕೆ ಕಾರಣವಾಗುತ್ತಿದೆ ಎಂದು ಈ ಹಿಂದೆಯೇ ತಜ್ಞರು ನೀಡಿದ್ದ ಎಚ್ಚರಿಕೆ ಈಗ ನಿಜವಾಗುತ್ತಿದೆ. ಒಂದೆರಡು ವರ್ಷಗಳಿಂದ ನಿರಂತರ ಘಟಿಸುತ್ತಿರುವ ಭೂಕುಸಿತಗಳು ಪರಿಣತರ ಮಾತನ್ನು ಪುಷ್ಟೀಕರಿಸುತ್ತಿದೆ.

ಗ್ಲೋಬಲ್‌ ಫಾರೆಸ್ಟ್‌ ವಾಚ್‌ (ಜಿಎಫ್‌ ಡಬುÉ é)ಸಂಸ್ಥೆಯು, 2001ರಿಂದ 2017ರ ವರೆಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಘಟ್ಟ ಪ್ರದೇಶದಲ್ಲಿ ಅರಣ್ಯ ನಾಶದ ಪ್ರಮಾಣವನ್ನು 2017ರ ತನ್ನ ವರದಿಯಲ್ಲಿ ಬಹಿರಂಗ ಪಡಿಸಿತ್ತು. ಘಟ್ಟದ ಜೀವ ವೈವಿಧ್ಯ ಅಪಾಯದಲ್ಲಿದೆ ಎಂದು ಎಚ್ಚರಿಸಿತ್ತು.

2001ರಿಂದ 2017ರ ವರೆಗೆ ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ 8,395 ಹೆಕ್ಟೇರ್‌, ಉಡುಪಿ ವ್ಯಾಪ್ತಿಯಲ್ಲಿ 6,084 ಹೆಕ್ಟೇರ್‌, ಕೊಡಗು ಜಿಲ್ಲೆಯಲ್ಲಿ 2,906.4 ಹೆಕ್ಟೇರ್‌ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 2,283.9 ಹೆಕ್ಟೇರ್‌ ಅರಣ್ಯ ನಾಶವಾಗಿದೆ.

2012ರಿಂದ 2017ರಿಂದ 6 ವರ್ಷಗಳಲ್ಲಿ ಈ ಜಿಲ್ಲೆಗಳ ಪಶ್ಚಿಮ ಘಟ್ಟ ಪ್ರದೇಶದಲ್ಲಿ 10,000 ಹೆಕ್ಟೇರ್‌ ಅರಣ್ಯ ಕಣ್ಮರೆಯಾಗಿದೆ. 2017ರಲ್ಲಿ ದಕ್ಷಿಣ ಕನ್ನಡದಲ್ಲಿ 955 ಹೆಕ್ಟೇರ್‌, ಉಡುಪಿಯಲ್ಲಿ 857 ಹೆಕ್ಟೇರ್‌, ಕೊಡಗಿನಲ್ಲಿ 160 ಹೆಕ್ಟೇರ್‌ ಹಾಗೂ ಉತ್ತರ ಕನ್ನಡದಲ್ಲಿ 236 ಹೆಕ್ಟೇರ್‌ ಸೇರಿದಂತೆ ಒಟ್ಟು 2,208 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ನಾಶವಾಗಿದೆ ಎಂಬುದು ವರದಿಯಲ್ಲಿ ಉಲ್ಲೇಖೀತ ಅಂಶ.

Advertisement

ಅರಣ್ಯ ನಾಶ, ಗಣಿಗಾರಿಕೆ, ಪ್ರವಾಸೋದ್ಯಮ ಹೆಸರಿನಲ್ಲಿ ಭೂಕಬಳಿಕೆ, ಅಭಿವೃದ್ಧಿ ಕಾಮಗಾರಿಗಳು ಪಶ್ಚಿಮ ಘಟ್ಟದ ಭೌಗೋಳಿಕ ಸೂಕ್ಷ್ಮತೆಗೆ ಹಾನಿಯುಂಟು ಮಾಡುತ್ತಿದ್ದು ಇದನ್ನು ನಿಯಂತ್ರಿಸಬೇಕು ಎಂಬು ದಾಗಿ ಪ್ರೊ| ಮಾಧವ ಗಾಡ್ಗಿಳ್‌ ಹಾಗೂ ಡಾ| ಕಸ್ತೂರಿ ರಂಗನ್‌ ವರದಿಗಳಲ್ಲಿ ಕೂಡ ಎಚ್ಚರಿಸಲಾಗಿತ್ತು. ಆದರೂ ಸರಕಾರ, ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳದ ಪರಿಣಾಮ ಈಗ ಗೋಚರಿಸುತ್ತಿದೆ.
ಘಟ್ಟದ ತಪ್ಪಲಲ್ಲಿರುವ ಮಡಿಕೇರಿ, ಶಿರಾಡಿ, ಚಾರ್ಮಾಡಿ, ಬೆಳ್ತಂಗಡಿ, ದಿಡುಪೆ, ಕೊಲ್ಲಿ, ಕಿಲ್ಲೂರು, ಶಿಶಿಲ, ಕಡಿರುದ್ಯಾವರ, ನಿಡಿಗಲ್‌, ಇಂದಬೆಟ್ಟು, ಬಂಜಾರುಮಲೆ, ಸುಳೊÂàಡಿ, ನಾವೂರು, ನೆರಿಯ, ಚಿಬಿದ್ರೆ, ಅಂತರ, ಕೊಳಂಬೆ, ಉಡುಪಿಯ ಆಗುಂಬೆ, ಚಿಕ್ಕಮಗಳೂರಿನ ಮೂಡಿಗೆರೆ, ತೀರ್ಥಹಳ್ಳಿ, ಕಳಸ, ಎತ್ತಿನಹೊಳೆ ಕಾಮಗಾರಿ ಪ್ರದೇಶಗಳು ಅಪಾಯದ ಅಂಚಿನಲ್ಲಿ ರುವಂತಾಗಿದೆ.ಪಶ್ಚಿಮಘಟ್ಟ ಪರಿಸರದಲ್ಲಿ ಗಣಿಗಾರಿಕೆಗೆ ನಿಷೇಧ, ನಗರೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ನಿಯಂತ್ರಣ, ಕೃಷಿಯಲ್ಲಿ ರಾಸಾಯನಿಕ ಬಳಸದಂತೆ ಹಾಗೂ ಪರಿಸರದ ಮೇಲೆ ಹಾನಿಯುನ್ನುಂಟು ಮಾಡುವ ಕೈಗಾರಿಕೆಗಳನ್ನು ನಿಷೇಧಿಸಬೇಕು ಎಂದು ತಜ್ಞರು ಸರಕಾರಕ್ಕೆ ಶಿಫಾರಸು ಮಾಡಿದ್ದರು.

ಕಡಿದಾದ ಗುಡ್ಡ ಪ್ರದೇಶಗಳಲ್ಲಿ ನೀರು ಹಾಗೂ ಮಣ್ಣು ಹಿಡಿದಿಟ್ಟು ಕೊಳ್ಳಲು ಅರಣ್ಯ ಮುಖ್ಯ.ಪಶ್ಚಿಮ ಘಟ್ಟ ಪ್ರದೇಶದಲ್ಲಿ 1 ಎಕ್ರೆ ಪ್ರದೇಶದಲ್ಲಿ ಮಳೆಗಾಲದಲ್ಲಿ 1.5 ಕೋಟಿ ಲೀಟರ್‌ ಮಳೆ ನೀರು ಬೀಳುತ್ತದೆ ಎಂಬ ಅಂದಾಜಿದೆ. ಕಾಡು ದಟ್ಟವಾಗಿದ್ದಾಗ ನೀರನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ಹರಿಯುತ್ತದೆ. ಮಣ್ಣು ಸವೆತ ತಡೆಯುತ್ತದೆ. ಹಾಗಾಗಿ ಅರಣ್ಯ ನಾಶ ತಡೆಯಬೇಕು.
– ಶಿವಾನಂದ ಕಳವೆ, ಪರಿಸರ ತಜ್ಞರು ಶಿರಸಿ

ಶೀಘ್ರ ಕ್ರಮಗಳು ಅಗತ್ಯ
ಈ ಬಗ್ಗೆ ಜಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ, ಪರಿಸರ ವಿಜ್ಞಾನಿಗಳು, ಪಶ್ಚಿಮ ಘಟ್ಟ ಕಾರ್ಯ ಪಡೆ ಈ ಹಿಂದೆಯೇ ಎಚ್ಚರಿಸಿದ್ದವು. ಸರಕಾರಕ್ಕೂ ಪತ್ರ ಬರೆಯಲಾಗಿತ್ತು. ಪಶ್ಚಿಮ ಘಟ್ಟದ ಪ್ರಸ್ತುತ ವಿದ್ಯಮಾನಗಳನ್ನು ಪರಿಗಣಿಸಿ ವಿವಿಧ ಕ್ಷೇತ್ರಗಳ ಪರಿಣತರು, ಸರಕಾರದ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ಸಮಿತಿ ರಚಿಸಿ ಅಧ್ಯಯನ ನಡೆಸಿ ವರದಿ ನೀಡಬೇಕು. ಸರಕಾರ ತತ್‌ಕ್ಷಣ ಪೂರಕ ಕ್ರಮಗಳನ್ನು ಜರಗಿಸಬೇಕು. ಅರಣ್ಯ ನಾಶ, ಅತಿಕ್ರಮಣಕ್ಕೆ ಕಡಿವಾಣದಿಂದ ಮಾತ್ರ ಪರಿಹಾರ ಸಾಧ್ಯ.
– ಅನಂತ ಕುಮಾರ ಆಶೀಸರ,
ಪ. ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ

 - ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next