ಪಣಜಿ: ಕಳೆದ ವಾರ ಮುಂಬೈಯಿಂದ ಗೋವಾಕ್ಕೆ ಹಡಗಿನಲ್ಲಿ ಸುಮಾರು 2000 ಜನ ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದ ಕಾರ್ಡೆಲಿಯಾ ಕ್ರೂಜ್ ಹಡಗಿನಲ್ಲಿದ್ದ ಪ್ರಯಾಣಿಕರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಡಗಿನಲ್ಲಿದ್ದ ಪ್ರವಾಸಿಗರ ಆರ್ ಟಿಪಿಸಿಆರ್ ತಪಾಸಣೆ ನಡೆಸಲಾಗಿದ್ದು, ಅದರಲ್ಲಿ 66 ಜನ ಪ್ರವಾಸಿಗರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಹಡಗಿನಲ್ಲಿದ್ದ 2000 ಜನ ಪ್ರವಾಸಿಗರ ಪೈಕಿ 66 ಜನರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಹಡಗನ್ನು ಪ್ರವಾಸಿಗರ ಸಮೇತವಾಗಿ ಮುಂಬಯಿಗೆ ವಾಪಸ್ಸು ಕಳುಹಿಸಲಾಗುತ್ತಿದೆ.
ಈ ಹಡಗಿನಲ್ಲಿದ್ದ ಕೆಲ ಪ್ರವಾಸಿಗರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಹಡಗು ವಾಸ್ಕೊ ಮುರಗಾಂವ ಬಂದರು ಪ್ರವೇಶಿಸಲು ನಿರಾಕರಿಸಲಾಗಿತ್ತು. ಇದರಿಂದಾಗಿ ಒಂದು ವಾರಗಳ ಕಾಲ ಸಮುದ್ರ ಮಧ್ಯದಲ್ಲಿಯೇ ನಿಲ್ಲುವಂತಾಗಿತ್ತು.
ಎಲ್ಲಿಯ ವರೆಗೆ ಎಲ್ಲ ಪ್ರವಾಸಿಗರ ತಪಾಸಣೆ ಪೂರ್ಣಗೊಳ್ಳುವುದಿಲ್ಲವೋ ಅಲ್ಲಿಯ ವರೆಗೆ ಮುರಗಾಂವ ಬಂದರಿನ ಟರ್ಮಿನಲ್‍ಗೆ ಆಗಮಿಸಲು ನಿರ್ಬಂಧ ಹೇರಲಾಗಿತ್ತು. ಆದರೆ ಇದೀಗ ಈ ಹಡಗನ್ನು ಪ್ರವಾಸಿಗರ ಸಮೇತವಾಗಿ ಮುಂಬಯಿಗೆ ವಾಪಸ್ಸು ಕರೆದೊಯ್ಯಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.