ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಒಂದೇ ದಿನ ಮೂರು ಹಬ್ಬಗಳು ಬಂದಿರುವುದರಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ರಂಜಾನ್, ಶಿವ-ಬಸವ ಜಯಂತಿಗೆ ಎರಡು ಸಾವಿಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಮೇ 2ರಂದು ಮುಸ್ಲಿಂರ ಪವಿತ್ರ ರಮಜಾನ್ ಹಬ್ಬದ ವೇಳೆ ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
3ರಂದು ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಾಗ ಬಂದೋಬಸ್ತ್ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಜಗಜ್ಯೋತಿ ಬಸವೇಶ್ವರ ಜಯಂತಿ ಮೆರವಣಿಗೆ ರಾತ್ರಿವರೆಗೂ ನಡೆಯಲಿದ್ದು, ಈ ವೇಳೆಯೂ ಪೊಲೀಸರನ್ನು ನಿಯೋಜಿಸಲಾಗಿದೆ.
ಮೇ 4ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮಧ್ಯಾಹ್ನದಿಂದ ತಡರಾತ್ರಿವರೆಗೂ ನಡೆಯಲಿದೆ. ಹೀಗಾಗಿ ಎರಡು ದಿನ ಮುಂಚಿತವಾಗಿಯೇ ಬೇರೆ ಬೇರೆ ಜಿಲ್ಲೆಯಿಂದ ಪೊಲೀಸರನ್ನು ಬೆಳಗಾವಿ ನಗರಕ್ಕೆ ಕರೆಯಿಸಿಕೊಳ್ಳಲಾಗಿದೆ.
ಕಮಿಷನರ್, ಮೂವರು ಡಿಸಿಪಿ, 15 ಮಂದಿ ಡಿಎಸ್‌ಪಿ, 44 ಸಿಪಿಐ, 62 ಪಿಎಸ್‌ಐ, 140 ಎಎಸ್‌ಐ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ಗಾಗಿ ಕರೆಯಿಸಿಕೊಳ್ಳಲಾಗಿದೆ.
ಜತೆಗೆ 600 ಹೋಮ್ ಗಾರ್ಡ್, 12 ಕೆಎಸ್‌ಆರ್‌ಪಿ ತುಕಡಿ, 10 ಸಿಎಆರ್ ತುಕಡಿ ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ತಡೆಯಲು ಶಿವ ಜಯಂತಿ ಮೆರವಣಿಗೆ ವೇಳೆ ಕಣ್ಣಿಡಲು 200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಆರು ಡ್ರೋನ್ ಕ್ಯಾಮೆರಾ ಇರಲಿವೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಕಮಿಷನರ್ ಡಾ| ಎಂ.ಬಿ. ಬೋರಲಿಂಗಯ್ಯ, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ, ಅಪರಾಧ ವಿಭಾಗ ಡಿಸಿಪಿ ಸ್ನೇಹಾ ನೇತೃತ್ವದಲ್ಲಿ ಅನೇಕ ಸಭೆಗಳನ್ನು ನಡೆಸಲಾಗಿದೆ. ಈಗಾಗಲೇ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಕರೆಯಿಸಿ ಸಭೆ ನಡೆಸಿದ್ದಾರೆ. ಸುಸೂತ್ರವಾಗಿ ಮೆರವಣಿಗೆ ನಡೆಯುವಂತೆ ಪೊಲೀಸ್ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಮೇ 3 ಹಾಗೂ 4ರಂದು ಪೂಜೆ, ಪ್ರಾರ್ಥನೆ, ಮೆರವಣಿಗೆ ನಡೆಯಲಿರುವುದರಿಂದ ಸುಗಮ ವಾಹನ ಸಂಚಾರಕ್ಕಾಗಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ಮಾರ್ಗ ಬದಲಾವಣೆ ಮಾಡಿ, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸಾರ್ವಜನಿರಲ್ಲಿ ಕೋರಲಾಗಿದೆ. ಬೆಳಗಾವಿ ನಗರದಲ್ಲಿ ರಂಜಾನ್, ಬಸವೇಶ್ವರ ಹಾಗೂ ಶಿವಾಜಿ ಜಯಂತಿ ಮೆರವಣಿಗೆಗೆ ಮುಂಜಾಗ್ರತ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ.
ಅಹಿತಕರ ಘಟನೆ ನಡೆಯದಂತೆ ಎಲ್ಲ ಕಡೆಗೂ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆ ಕದಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. –
ರವೀಂದ್ರ ಗಡಾದಿ, ಡಿಸಿಪಿ, ಕಾನೂನು ಮತ್ತು ಸುವ್ಯವಸೆ