ಬೀಜಿಂಗ್:ಚೀನಾದ ವುಹಾನ್ ನಿಂದ ಆಗಮಿಸಿದ ಜಪಾನ್ ನ ನೌಕೆಯಲ್ಲಿ ಕೊರೊನಾ ವೈರಸ್ ತಗುಲಿರುವವರ ಸಂಖ್ಯೆ 355ಕ್ಕೆ ಏರಿದೆ. ಮತ್ತೊಂದೆಡೆ ನೌಕೆಯಲ್ಲಿರುವ ಪ್ರಯಾಣಿಕರಿಗೆ ಜಪಾನ್ ಸರ್ಕಾರ 2000 ಐಫೋನ್ ಗಳನ್ನು ಉಚಿತವಾಗಿ ನೀಡಿರುವುದಾಗಿ ವರದಿ ತಿಳಿಸಿದೆ.
ವುಹಾನ್ ನಿಂದ ಆಗಮಿಸಿರುವ ಡೈಮಂಡ್ ಪ್ರಿನ್ಸೆಸ್ ನೌಕೆಯಲ್ಲಿರುವ ಪ್ರಯಾಣಿಕರು ಹಾಗೂ ಸಿಬ್ಬಂದಿಗಳಿಗೆ ಐಫೋನ್ ವಿತರಣೆ ಮಾಡಲಾಗಿದೆ. ಡೈಮಂಡ್ ಪ್ರಿನ್ಸೆಸ್ ಹಡಗನ್ನು ಚಿಕಿತ್ಸಾಗಾರವನ್ನಾಗಿ ಮಾಡಲಾಗಿದ್ದು, ನೌಕೆಯಲ್ಲಿ ಅಂದಾಜು 3,700 ಪ್ರಯಾಣಿಕರು ಇದ್ದಿರುವುದಾಗಿ ವರದಿ ವಿವರಿಸಿದೆ.
ಐಫೋನ್ ವಿತರಣೆ ಉದ್ದೇಶವೇನು?
ಐಫೋನ್ ವಿತರಿಸಿರುವ ಮುಖ್ಯ ಉದ್ದೇಶ ನೌಕೆಯಲ್ಲಿ ನಿರ್ಬಂಧಿಸಲ್ಪಟ್ಟಿರುವ ಪ್ರಯಾಣಿಕರು ಮೆಡಿಕಲ್ ಸಿಬ್ಬಂದಿಗಳು, ವೈದ್ಯರ ಜತೆ ಸಂಪರ್ಕದಲ್ಲಿರಲು. ಅಲ್ಲದೇ ಅಪಾಯಿಂಟ್ ಮೆಂಟ್ ಬುಕ್ ಮಾಡಲು, ಔಷಧ ಪಡೆಯಲು ಹಾಗೂ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ ನಡೆಸಲು ಎಂದು ವಿವರಿಸಿದೆ.
ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ ಪ್ರಯಾಣಿಕರಲ್ಲಿ 350 ಮಂದಿಗೆ ಕೊರೊನಾ ವೈರಸ್ ಪತ್ತೆಯಾಗಿದೆ. ಇದರಲ್ಲಿ ಐವರು ಭಾರತೀಯರು ಸೇರಿದ್ದಾರೆ. ಈಗಾಗಲೇ ಮೂವರು ಭಾರತೀಯರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ.