Advertisement

ಬೆಂಗ್ಳೂರು ಬಿಎಸ್ಪಿ ಸಮಾವೇಶಕ್ಕೆ 2 ಸಾವಿರ ಕಾರ್ಯಕರ್ತರು

03:50 PM Nov 23, 2017 | Team Udayavani |

ಚಾಮರಾಜನಗರ: ಬೆಂಗಳೂರಿನಲ್ಲಿ ಶನಿವಾರ ಹಮ್ಮಿಕೊಂಡಿರುವ ದಕ್ಷಿಣ ಭಾರತದ ಬಿಎಸ್‌ಪಿ ಕಾರ್ಯಕರ್ತರ ಬೃಹತ್‌ ಸಮಾವೇಶಕ್ಕೆ ಜಿಲ್ಲೆ ಯಿಂದ 2 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ತಿಳಿಸಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಿಂದ ಹಿಂದುಳಿದವರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಒದಗಿರುವ ಭೀಕರ ವಿಪತ್ತುಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ದಕ್ಷಿಣ ಭಾರತದ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ದಕ್ಷಿಣ ಭಾರತದ ವಿವಿಧೆಡೆಗಳಿಂದ ಭಾಗಿ: ಈ ಸಮಾವೇಶಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಡಾ.ಅಶೋಕ ಸಿದ್ದಾರ್ಥ, ರಾಷ್ಟ್ರೀಯ ಖಜಾಂಚಿ ಅಂಬೇತ್‌ ರಾಜನ್‌, ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ,
ತಮಿಳುನಾಡು, ಪುದುಚೇರಿ, ಕೇರಳ ರಾಜ್ಯ ಸಂಯೋಜಕರಾದ ಎಂ.ಗೋಪಿನಾಥ್‌, ರಾಂ. ಜೀ.ಗೌತಮ್‌, ರಾಜ್ಯಾಧ್ಯಕ್ಷ ಎನ್‌.ಮಹೇಶ್‌, ತಮಿಳುನಾಡು ರಾಜ್ಯಾಧ್ಯಕ್ಷ ಆಮ್‌ಸ್ಟ್ರಾಂಗ್‌, ಪುದುಚೇರಿ ರಾಜ್ಯಾಧ್ಯಕ್ಷ ಮೂರ್ತಿ, ಕೇರಳ
ರಾಜ್ಯಾಧ್ಯಕ್ಷ ಜೆ.ಸುಧಾಕರನ್‌ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಮಾವೇಶಕ್ಕೆ ಜಿಲ್ಲೆಯಿಂದ 6 ಬಸ್‌ಗಳಲ್ಲಿ ಬಿಎಸ್‌ಪಿ ಕಾರ್ಯಕರ್ತರು ಹಾಗೂ ರೈಲಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ 2 ಸಾವಿರ ಜನರು ಹೊರಡಲಿದ್ದಾರೆ. ಸಮಾವೇಶಕ್ಕೆ ಹೊರಡಲು 2 ತಿಂಗಳಿಂದ ಜಿಲ್ಲೆಯಲ್ಲಿ ಸಿದ್ಧತೆಯನ್ನು ಮಾಡಲಾಗುತ್ತಿದೆ ಎಂದರು.

ದೇಶದಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚೆ: ಸಮಾವೇಶದಲ್ಲಿ ದೇಶದಲ್ಲಿನ ಇಂದಿನ ಕಠಿಣ ಪರಿಸ್ಥಿತಿ, ನೋಟು ರದ್ಧತಿಯಿಂದಾದ ಪರಿಣಾಮ, ಬಿಜೆಪಿ ಜನರಿಗೆ ಕೊಟ್ಟ ಭರವಸೆ ಯನ್ನು ಈಡೇರಿಸದಿರುವುದು, ಬಿಜೆಪಿಯ ಅಜೆಂಡಾಗಳು, ಮಾಯಾವತಿ ಆಡಳಿತ ರೀತಿ, ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ ಎಂಬುದರ ಕುರಿತು ಕಾರ್ಯಕರ್ತರಿಗೆ ತಿಳಿಸಿಕೊಡಲಿದ್ದಾರೆ ಎಂದರು.

Advertisement

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮಾನವ ವಿರೋಧಿ ನೀತಿಯನ್ನು ಬಿಎಸ್‌ಪಿ ನೇತಾರರಾದ ಮಾಯಾವತಿ ಮಾತ್ರ ತಡೆಯಲು ಸಾಧ್ಯ. ಆದ್ದರಿಂದ ಮನುವಾದಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರೋಧಿಗಳೆಲ್ಲಾ ಒಂದಾಗಿ ಮಾಯಾವತಿ ಅವರನ್ನು ಬೆಂಬಲಿಸಿದರೆ ಮಾತ್ರ ದೇಶ ಉದ್ಧಾರ ಆಗುತ್ತದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನಲ್ಲಿ ನಡೆಯುವ ದಕ್ಷಿಣ ಭಾರತದ ಕಾರ್ಯಕರ್ತರ ಬೃಹತ್‌ ಸಮಾವೇಶಕ್ಕೆ ಕಾರ್ಯಕರ್ತರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಆರ್‌.ಪಿ.ನಂಜುಂಡಸ್ವಾಮಿ, ಜಿಲ್ಲಾಧ್ಯಕ್ಷ ಬಾಗಳಿರೇವಣ್ಣ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಮುಖಂಡ ಸೋಮಣ್ಣ ಉಪ್ಪಾರ್‌ ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next