Advertisement
ಮಡಿಕೇರಿಯಲ್ಲಿ ವಿಜಯದಶಮಿಯ ದಿನ ಎಲ್ಲೆಲ್ಲೂ ಬೆಳಕಿನ ಚಿತ್ತಾರ. ದುಷ್ಟಶಕ್ತಿಗಳನ್ನು ದಮನಗೊಳಿಸಿ ಶಿಷ್ಟಶಕ್ತಿಗಳ ಜಯದ ಸಂಕೇತವಾದ ನಾಡಹಬ್ಬ ಮಡಿಕೇರಿಯಲ್ಲಿ ಜನೋತ್ಸವವಾಗಿ ಆಚರಿಸಲ್ಪಪಡುತ್ತದೆ. ಮಡಿಕೇರಿ ಜನಸಂಖ್ಯೆ ಅಂದಾಜು 25 ರಿಂದ 30 ಸಾವಿರ. ಆದರೆ ದಸರೆಯ ದಿನ ಲಕ್ಷಾನುಗಟ್ಟಲೆ ಜನಸಂದಣಿಯನ್ನು ಕಾಣಬಹುದು. ಮಕ್ಕಳಿಂದ ಹಿರಿಯರಾದಿವರೆಗೂ ಸುತ್ತುಮತ್ತಲಿನ ಹಳ್ಳಿಗಳಿಂದ ಮಾತ್ರವಲ್ಲದೆ ರಾಜ್ಯದ ಬೇರೆಬೇರೆ ಭಾಗಗಳಿಂದ ಪ್ರವಾಸಿಗರು ಈ ನಾಡಹಬ್ಬ ವೀಕ್ಷಣೆಗೆ ಬರುತ್ತಾರೆ. ಇತ್ತೀಚಿಗಂತೂ ದಸರಾ ಪ್ರವಾಸೋದ್ಯಮಕ್ಕೆ ವಿಶೇಷ ಹಿನ್ನಲೆ ಒದಗಿಸಿರುವುದಂತೂ ಸುಳ್ಳಲ್ಲ.
Related Articles
Advertisement
ಮಡಿಕೇರಿಯ ರಾಮಮಂದಿರಗಳ ಪೈಕಿ, ದೇಚೂರು ರಾಮಮಂದಿರಕ್ಕೆ ಒಂದು ಶತಮಾನದ ಇತಿಹಾಸವಿದೆ. ಕೋದಂಡ ರಾಮ ದೇವಾಲಯ ಇತ್ತೀಚಿನದ್ದು. ಮಡಿಕೇರಿಯ ಮಹದೇವಪೇಟೆಯಲ್ಲಿರುವ ಚೌಡೇಶ್ವರಿ ದೇವಾಲಯ ಹಿಂದೆ ಶಂಕರಿಗುಡಿ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಿತ್ತು, ಕ್ರಮೇಣ ಚೌಡೇಶ್ವರಿ ಎಂದು ಹೆಸರಾಯಿತು. ಇಲ್ಲಿ ಈಗ ಚೌಡೇಶ್ವರಿಯೇ ಅಲ್ಲದೆ ಸತ್ಯನಾರಾಯಣ ನವಗ್ರಹ ಗುಡಿಗಳು ಇವೆ. ಈ ದೇವಾಲಯ 1962ರಿಂದಲೂ ದಸರಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿವೆ. ಮಡಿಕೇರಿ ಕೋಟೆಯೊಳಗಿರುವ ಗಣಪತಿ ಗುಡಿ ಕೊಡಗಿನ ರಾಜರ ಕಾಲದಿಂದಲೂ ಪ್ರಸಿದ್ಧಿಯಲ್ಲಿದೆ. ಗಣೇಶ ಚತುರ್ಥಿಯದಿನ ಭಕ್ತರು ಸಾಲುಗಟ್ಟಿ ಬಂದು ತಮ್ಮ ಸೇವೆ ಸಲ್ಲಿಸುತ್ತಾರೆ. ಪ್ರಾಚೀನ ಇತಿಹಾಸ ಹೊಂದಿರುವ ಕರವಲೆ ಬಾಡಗ ಗ್ರಾಮದ ಭಗವತಿ ದೇವಾಸ್ಥಾನ ಎತ್ತರದ ಸ್ಥಾನದಲ್ಲಿ ನಿಂತು ಇಡೀ ಮಡಿಕೇರಿ ನಗರವನ್ನು ವೀಕ್ಷಿಸುವಂತಿದೆ. ದಸರಾದ ಶೋಭಾಯಾತ್ರೆಯಲ್ಲಿ ಈ ದೇವಾಲಯದ ಮಂಟಪ 1995 ರಿಂದ ಪಾಲ್ಗೊಳ್ಳುತ್ತಿದೆ.
ಮಡಿಕೇರಿ ದಸರಾ ಉತ್ಸವವನ್ನು ವೀಕ್ಷಿಸಲು, ಮೈಸೂರು ದಸರಾಕ್ಕೆ ಆಗಮಿಸುವ ಪ್ರವಾಸಿಗರು ಸಾಲುಗಟ್ಟಿ ಮಡಿಕೇರಿಗೆ ಬರುತ್ತಿರುವುದು ಇತ್ತೀಚಿನ ಬೆಳವಣಿಗೆ. ಹಗಲು ಮೈಸೂರಿನ ಜಂಬೂ ಸವಾರಿಯನ್ನು ನೋಡಿ ರಾತ್ರಿ ಜನ ಮಡಿಕೇರಿಗೆ ಆಗಮಿಸುತ್ತಾರೆ. ವಿಜಯದಶಮಿ ಮಡಿಕೇರಿ ಪಾಲಿಗೆ ಅದ್ಭುತ ಅನುಭವ ಕೊಡುವ ಸುಂದರ ಶೋಭಾಯಮಾನ ರಾತ್ರಿ. ಆ ರಾತ್ರಿ ಮಡಿಕೇರಿಯ ಬೀದಿ ಬೀದಿಗಳಲ್ಲಿ ರಾಕ್ಷಸ ವೇಷಗಳು ಅಬ್ಬರಿಸುತ್ತಾರೆ, ಶುಂಭ-ನಿಶುಂಭರು, ಚಂಡ-ಮುಂಡರು ತಮ್ಮ ಅಸುರಗಣಗಳೊಂದಿಗೆ ಎಂಥವರ ಎದೆಯನ್ನೂ ನಡುಗಿಸುವಂತೆ ತಮ್ಮ ಪ್ರತಾಪ ತೋರಿಸುತ್ತಾರೆ. ಕೊನೆಗೊಮ್ಮೆ ಶಿಷ್ಟಶಕ್ತಿಯ ಎದುರು ನಾಶವಾಗುತ್ತಾರೆ. ಧರ್ಮಕ್ಕೆ ಎಂದಿಗೂ ಜಯವಿದ್ದೇ ಇದೆ ಎಂಬುದನ್ನು ಆದಿಶಕ್ತಿಯು ತನ್ನ ಶಕ್ತಿಯ ಮೂಲಕ ತೋರಿಸಿಕೊಡುತ್ತಾಳೆ. ವರ್ಷದಿಂದ ವರ್ಷಕ್ಕೆ ಕಲಾಕೃತಿಗಳು ಬೆರಗು ಹುಟ್ಟಿಸುವಂತೆ ತಯಾರಾಗುತ್ತದೆ. ಒಂದೊಮ್ಮೆ ಸ್ಥಬ್ಧ ಚಿತ್ರದಂತಿದ್ದ ಮಂಟಪಗಳು ಆಧುನಿಕ ತಂತ್ರಜ್ಞಾನದಿಂದ ಧ್ವನಿ ದೃಶ್ಯಗಳ ಆಳವಡಿಕೆಯಿಂದ ಮೆರಗು ಪಡೆಯುತ್ತಿದೆ. ಕಣ್ಣೆದುರೆ ನಡೆಯುವ ರಾಕ್ಷಸ ಸಂಹಾರ ಮೈನವಿರೇಳಿಸುತ್ತದೆ. ನೋಡುಗರನ್ನು ಮಾಯಾಲೋಕ ಕ್ಕೆಸೆಳೆಯುತ್ತದೆ.
ಮಿಥುನ್ ಮೊಗೇರ