Advertisement

ಸ್ವಪ್ನಾ ಗ್ಯಾಂಗ್‌ ಸಾಗಿಸಿದ್ದು 200 ಕೆಜಿ ಚಿನ್ನ!

02:21 AM Jul 20, 2020 | Hari Prasad |

ತಿರುವನಂತಪುರ/ಕೊಚ್ಚಿ/ದುಬಾೖ: ಕೇರಳದಲ್ಲಿ ಬಿರುಗಾಳಿಗೆ ಕಾರಣವಾಗಿರುವ ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿ ದಿನ ಹೊಸ ಮಾಹಿತಿ ಬಹಿರಂಗವಾಗುತ್ತಿದೆ.

Advertisement

ಸದ್ಯ ಪೊಲೀಸರ ಬಂಧನದಲ್ಲಿರುವ ಸ್ವಪ್ನಾ ಸುರೇಶ್‌, ಸಂದೀಪ್‌ ನಾಯರ್‌ ಗ್ಯಾಂಗ್‌ ಬರೋಬ್ಬರಿ 200 ಕೆಜಿ ಚಿನ್ನವನ್ನು ಯುಎಇನಿಂದ ಕೇರಳಕ್ಕೆ ರಾಜತಾಂತ್ರಿಕ ಅಧಿಕಾರಿಗಳಿಗೆ ಇರುವ ರಕ್ಷಣೆಯಲ್ಲಿ ತಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ತಂಡ ಈ ಅಂಶವನ್ನು ಖಚಿತಪಡಿಸಿದೆ.

ಆರಂಭದಲ್ಲಿ ಖರ್ಜೂರ, ವಿವಿಧ ರೀತಿಯ ಕ್ಯಾಂಡಿಗಳು, ವಿದ್ಯುತ್‌ ದೀಪಗಳ ಬ್ಯಾಗ್‌ ಮೂಲಕ ಪರಿಕ್ಷಾರ್ಥವಾಗಿ ಕಳುಹಿಸಿ, ತನಿಖೆ ನಡೆಸಿದರೂ ಪತ್ತೆಯಾಗುವುದಿಲ್ಲ ಎಂಬ ಅಂಶ ಖಚಿತವಾದ ಬಳಿಕ ಚಿನ್ನ ಸಾಗಣೆಯನ್ನು ಶುರು ಮಾಡಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಒಟ್ಟು 70 ಕೆಜಿ ಚಿನ್ನವನ್ನು ತಂದಿದ್ದಾರೆ.

ಜೂನ್‌ನಲ್ಲಿ 3.5 ಕೆಜಿ, ಮತ್ತೆರಡು ಬಾರಿ ಕ್ರಮವಾಗಿ 5 ಮತ್ತು 7 ಕೆಜಿಯಷ್ಟು ಚಿನ್ನ ಸಾಗಣೆ ಮಾಡಿದ್ದಾರೆ. ಕಸ್ಟಮ್ಸ್‌ ಇಲಾಖೆಗೆ ಬಂಧಿತರು ನೀಡಿದ ಮಾಹಿತಿ ಪ್ರಕಾರ 20 ಪಾರ್ಸೆಲ್‌ ಬ್ಯಾಗ್‌ಗಳಲ್ಲಿ 200 ಕೆಜಿ ಚಿನ್ನ ತಂದಿದ್ದಾರೆ. ಅವರು ಹೇಳಿದ ಮಾಹಿತಿಯನ್ನು ಇನ್ನಷ್ಟೇ ಪರಿಶೀಲಿಸಬೇಕಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಜು.5ರಂದು 30 ಕೆಜಿ ತಂದಿದ್ದರು ಮತ್ತು ಅದೇ ಸರಿತ್‌ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದ.

ಫೈಸಲ್‌ ಫ‌ರೀದ್‌ ಬಂಧನ: ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬಾೖನಲ್ಲಿ ಫೈಸಲ್‌ ಫ‌ರೀದ್‌ ಎಂಬಾತನನ್ನು ಬಂಧಿಸಲಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಸರಕಾರಕ್ಕೆ ಕೂಡ ಯುಎಇ ಸರಕಾರ ಮಾಹಿತಿ ನೀಡಿದೆ. ಆತನಿಂದ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆ ಎಂದು ಹೇಳಲಾಗಿದೆ. ಆತನನ್ನು ಸೋಮವಾರ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆ ಇದೆ.

Advertisement

ಅಧಿಕಾರಿ ಯುಎಇಗೆ
ಇದೇ ವೇಳೆ, ಅಕ್ರಮದಲ್ಲಿ ಲಿಂಕ್‌ ಇದೆ ಎಂದು ಹೇಳಲಾಗಿರುವ ಯುಎಇ ಅಧಿಕಾರಿ ಕಳೆದ ವಾರ ಹೊಸದಿಲ್ಲಿ ಮೂಲಕ ಸ್ವದೇಶಕ್ಕೆ ವಾಪಸಾಗಿದ್ದಾರೆ. ಹೀಗಾಗಿ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಅನುಮತಿ ಜತೆಗೆ, ಯುಎಇ ದೂತಾವಾಸ ಕಚೇರಿಯ ಪ್ರಭಾರ ಮುಖ್ಯಸ್ಥರ ಉಪಸ್ಥಿತಿಯಲ್ಲಿಯೇ ರಾಜತಾಂತ್ರಿಕ ಅಧಿಕಾರಿಗಳ ಹೆಸರಿನಲ್ಲಿದ್ದ ಬ್ಯಾಗ್‌ ತೆರೆದು ಶೋಧಿಸಲಾಗಿತ್ತು.

ಸಂದೀಪ್‌ನದ್ದೇ ಐಡಿಯಾ
ರಾಜತಾಂತ್ರಿಕರಿಗೆ ಇರುವ ರಕ್ಷಣೆ ದುರ್ಬಳಕೆ ಮಾಡಿಕೊಂಡು ಚಿನ್ನ ಸಾಗಣೆ ಮಾಡುವ ಬಗ್ಗೆ ಐಡಿಯಾ ಕೊಟ್ಟದ್ದೇ ಬಂಧಿತ ಸಂದೀಪ್‌ ನಾಯರ್‌. 2019ರ ಮೇನಿಂದಲೇ ಅದನ್ನು ವ್ಯವಸ್ಥಿತವಾಗಿ ಜಾರಿಗೆ ತಂದಿದ್ದರು. ಈ ಪ್ರಕರಣದಲ್ಲಿ ಸಂದೀಪ್‌ ನಾಯರ್‌ ಮತ್ತು ರಮೀಜ್‌ ಅವರು ಪ್ರಮುಖ ಕೊಂಡಿಗಳು.

7 ತಾಸು ವಿಚಾರಣೆ
ತನಿಖೆ ಕೂಡ ಮುಂದುವರಿದಿದ್ದು, ಸ್ವಪ್ನಾ ಸುರೇಶ್‌, ಸಂದೀಪ್‌ ನಾಯರ್‌ ಅವರನ್ನು ತಿರುವನಂತಪುರಕ್ಕೆ ಎನ್‌ಐಎ ಕರೆ ತಂದಿದೆ. ವಿವಿಧ ಸ್ಥಳಗಳಿಗೆ ಅವರನ್ನು ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಲಾಗಿದೆ. ಜತೆಗೆ ಒಟ್ಟು 7 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next