Advertisement

ರಸ್ತೆ ದುರಸ್ತಿಗೆ ಬೇಕಿದೆ 200 ಕೋಟಿ ಅನುದಾನ

11:27 AM Sep 09, 2019 | Suhan S |

ಶಿರಸಿ: ಕಳೆದ ಆಗಸ್ಟ್‌ನಿಂದ ಬಿಡದೇ ಸುರಿದ ಮಳೆಯ ಕಾರಣದಿಂದ ಹದಗೆಟ್ಟ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ರಸ್ತೆಯ ದುರಸ್ತಿಗೆ ಬರೋಬ್ಬರಿ 200 ಕೋಟಿ ರೂ. ಬೇಕಿದೆ.

Advertisement

ಹೀಗೆಂದು, ಅತಿವೃಷ್ಟಿಯಿಂದ ಹಾಳಾದ ರಸ್ತೆಗೆ ಲೋಕೋಪಯೋಗಿ ಇಲಾಖೆ ಶಿರಸಿ ವಿಭಾಗ ವ್ಯಾಪ್ತಿಯಿಂದ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಆರು ತಾಲೂಕುಗಳಲ್ಲಿ 327 ಕಿಮೀ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗೆ ಧಕ್ಕೆಯುಂಟಾಗಿದ್ದು, 112 ಸೇತುವೆ, ಸಿ.ಡಿಗೆ ಹಾನಿಯುಂಟಾಗಿದೆ ಎಂದು ವರದಿ ನೀಡಿದೆ.

ಲೋಕೋಪಯೋಗಿ ಇಲಾಖೆ ವಿಭಾಗ ವ್ಯಾಪ್ತಿ ಎಂದರೆ ಆರು ತಾಲೂಕುಗಳು ಸೇರಿವೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೋಯಿಡಾ ಹಾಗೂ ಹಳಿಯಾಳ ತಾಲೂಕಿನಲ್ಲಿ ಮಳೆ ಅನಾಹುತ ಸೃಷ್ಟಿಸಿದೆ. ರಸ್ತೆಯ ಮೇಲೆ ಮೊದಲು ಒಂದು ಗಂಟೆ ಪ್ರಯಾಣ ಈಗ ಎರಡು ತಾಸು ತೆಗೆದುಕೊಳ್ಳುತ್ತಿದೆ. ಅಲ್ಲಿಗಾದರೆ ನಾವು ಬರಲ್ಲ ಎಂದೂ ಕೆಲ ವಾಹನ ಬಾಡಿಗೆ ಬಿಟ್ಟವರೂ ಹೇಳುವಂತಾಗಿದೆ.

ನಾಗರ ಪಂಚಮಿಯಿಂದ ಆರಂಭಗೊಂಡ ಮಳೆ ರಸ್ತೆ, ಸೇತುವೆ, ಸರಕಾರಿ ಕಟ್ಟಡಗಳಿಗೆ ಹಾನಿಯುಂಟು ಮಾಡಿದೆ. ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು ಹೊಂಡದಿಂದ ಆವೃತ್ತವಾಗಿದ್ದು, ಸಂಚಾರಕ್ಕೆ ಸಂಕಟ ತಂದಿಟ್ಟಿದೆ. ಮರಗಳ ನಡುವೆ ರಸ್ತೆ ಹಾದು ಹೋಗಿರುವುದು, ನೀರು ಹರಿಯುವುದಕ್ಕೆ ಸರಿಯಾಗಿ ಕಾಲವೆ ಇಲ್ಲದಿರುವುದು, ರಸ್ತೆಯಲ್ಲೇ ನೀರು ಹರಿಯುವುದು, ಗುಣಮಟ್ಟದ ಕಾಮಗಾರಿಯ ಕೊರತೆ ಮತ್ತಿತರ ಕಾರಣದಿಂದ ಅತಿಯಾದ ಮಳೆಯಲ್ಲಿ ರಸ್ತೆಗಳು ಕಿತ್ತೆದ್ದು, ವ್ಯಾಪಕ ಹೊಂಡ ಬಿದ್ದಿವೆ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳ ಇಂತಹ ದುಸ್ಥಿತಿ ಎಲ್ಲೆಡೆ ಗೋಚರವಾಗುತ್ತಿದೆ.

ರಸ್ತೆಗಳ ಹೊಂಡ ತುಂಬುವುದು ಸೇರಿದಂತೆ ರಸ್ತೆಯ ತಾತ್ಕಾಲಿಕ ದುರಸ್ತಿಗೆ 4.57 ಕೋಟಿ ರೂ. ಗಳ ಕ್ರಿಯಾಯೋಜನೆ ನೀಡಲಾಗಿದೆ. ಇನ್ನು ಹಾಳಾದ ರಸ್ತೆಗೆ ಮರು ಡಾಂಬರೀಕರಣ ಸೇರಿದಂತೆ ಸುವ್ಯವಸ್ಥಿತಗೊಳಿಸಲು 153 ಕೋಟಿ ರೂ. ಗಳ ಪ್ರಸ್ತಾವನೆ ನೀಡಲಾಗಿದೆ. ಒಟ್ಟಾರೆ ಸಂಪೂರ್ಣ ದುರಸ್ತಿಗೆ ಹಣ ಮಾತ್ರ ಬೇಕಾದಷ್ಟು ಬೇಕಿದೆ. ವಿಭಾಗ ವ್ಯಾಪ್ತಿಯಲ್ಲಿ 30 ಸರಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು, ಅದನ್ನು ಸರಿಪಡಿಸಲು 3.30 ಕೋಟಿ ರೂ. ಅಗತ್ಯವಿರುವುದನ್ನು ಅಂದಾಜಿಸಲಾಗಿದೆ.

Advertisement

ಈ ಮಧ್ಯೆ ಶಿರಸಿ 95, ಸಿದ್ದಾಪುರ 32, ಯಲ್ಲಾಪುರ 19, ಮುಂಡಗೋಡ 87, ಹಳಿಯಾಳ 80, ಜೊಯಿಡಾ 11 ಪ್ರಮುಖ ರಸ್ತೆಗಳು ಹದಗೆಟ್ಟಿವೆ.

ಮುಖ್ಯವಾಗಿ ಹೊಳೆ, ಹಳ್ಳ, ನದಿಗಳು ತುಂಬಿ ಹರಿದ ಪರಿಣಾಮ ಘಟ್ಟದ ಮೇಲಿನ ತಾಲೂಕುಗಳಲ್ಲಿ ರಾಜ್ಯ ಹೆದ್ದಾರಿ ಹಾಗು ಜಿಲ್ಲಾ ಮುಖ್ಯ ರಸ್ತೆಯಲ್ಲಿರುವ ಸೇತುವೆ ಸಿ.ಡಿ.ಗಳಿಗೆ ಧಕ್ಕೆಯಾಗಿದೆ. ಅದರಲ್ಲಿ ಶಿರಸಿ ತಾಲೂಕಿನಲ್ಲಿ 13, ಸಿದ್ದಾಪುರ 25, ಯಲ್ಲಾಪುರ 29, ಮುಂಡಗೋಡ 25, ಹಳಿಯಾಳ 13 ಹಾಗೂ ಜೋಯಿಡಾ ತಾಲೂಕಿನಲ್ಲಿ 7ಸಿ.ಡಿ ಮತ್ತು ಸೇತುವೆಗೆ ಧಕ್ಕೆಯಾಗಿದೆ. ಇವುಗಳ ತಾತ್ಕಾಲಿಕ ದುರಸ್ತಿಗೆ 5.9 ಕೋಟಿ ರೂ.ಗಳ ಪ್ರಸ್ತಾವನೆ ನೀಡಲಾಗಿದ್ದರೆ ಶಾಶ್ವತ ನಿರ್ಮಾಣಕ್ಕೆ 34.95 ಕೋಟಿ ರೂ.ಗೆ ಬೇಡಿಕೆ ಇಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next