ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ನೆರೆಹಾವಳಿಗೆ ಸಿಲುಕಿರುವ ಸಂತ್ರಸ್ತರಿಗೆ ತಮ್ಮ ಒಂದು ದಿನದ ಸಂಬಳದ ಒಟ್ಟು ಮೊತ್ತ 200 ಕೋಟಿ ರೂ.ಗಳನ್ನು ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಿಡಲು ರಾಜ್ಯ ಸರ್ಕಾರಿ ನೌಕರರ ಸಂಘ ಚಿಂತಿಸಿದೆ. ಸಂಘದ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ಒಂದು ದಿನದ ಸಂಬಳದ ಮೊತ್ತ 200 ಕೋಟಿ ರೂ.ಗಳನ್ನು ಪರಿಹಾರ ನಿಧಿಗೆ ಬುಧವಾರ ಜಮೆ ಮಾಡಿಕೊಳ್ಳಲು ಮನವಿ ಮಾಡುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ .ಷಡಕ್ಷರಿ ತಿಳಿಸಿದರು.
“ಉದಯವಾಣಿ’ ಜತೆ ಮಾತನಾಡಿದ ಷಡಕ್ಷರಿ, ಸದ್ಯ ರಾಜ್ಯದಲ್ಲಿ ಒಟ್ಟು 5.4 ಲಕ್ಷ ಸರ್ಕಾರಿ ನೌಕರರಿದ್ದು, ನಿಗಮ ಮಂಡಳಿಗಳ ಸಿಬ್ಬಂದಿ ಸೇರಿ 6.4 ಲಕ್ಷದಷ್ಟಿದ್ದಾರೆ. ಒಂದು ದಿನದ ಸಂಬಳವನ್ನು ನೇರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡಿಕೊಳ್ಳಲು ತಿಳಿಸುವ ಸರ್ಕಾರಿ ನೌಕರರ ಸಂಘದ ತೀರ್ಮಾನಕ್ಕೆ ಎಲ್ಲಾ ಜಿಲ್ಲಾವಾರು ಸಂಘದ ಪದಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು, 200 ಕೋಟಿಯಷ್ಟಾಗುವ ಈ ಮೊತ್ತವನ್ನು ಬುಧವಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡಿಕೊಳ್ಳುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಪತ್ರ ನೀಡುವುದಾಗಿ ತಿಳಿಸಿದರು.
ಇತಿಹಾಸದಲ್ಲೇ ಅತಿ ಹೆಚ್ಚು ದೇಣಿಗೆ: ನೆರೆ ಪರಿಸ್ಥಿತಿಗಳಲ್ಲಿ ಸರ್ಕಾರಿ ನೌಕರರ ಸಂಘ ತಮ್ಮ ಒಂದು ದಿನದ ಸಂಬಳ ನೀಡುವ ಪ್ರವೃತ್ತಿ ಕಳೆದ ಹಲವು ದಶಕಗಳಿಂದ ಚಾಲ್ತಿಯಲ್ಲಿದ್ದು, ಕಳೆದ ಬಾರಿ ಕೊಡಗು ಗುಡ್ಡಕುಸಿತ ಮತ್ತು ಪ್ರವಾಹದ ವೇಳೆ ಕೂಡ ಸಂಘದಿಂದ 102 ಕೋಟಿ ರೂ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿತ್ತು. ಈ ಬಾರಿ ಸರ್ಕಾರಿ ನೌಕರರ ಸಂಬಳದ 6ನೇ ವೇತನ ಜಾರಿಯಲ್ಲಿದ್ದು, ಸದಸ್ಯರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಒಂದು ದಿನದ ಸಂಬಳದ ಮೊತ್ತ ಸುಮಾರು 200 ಕೋಟಿಯಷ್ಟಾಗಲಿದೆ.
ಶಿಕ್ಷಕರಿಂದಲೇ ಅತಿ ಹೆಚ್ಚು ಕೊಡುಗೆ: ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿನ 5.4 ಲಕ್ಷ ನೌಕರರ ಸದಸ್ಯತ್ವದ ಪೈಕಿ ಎರಡು ಲಕ್ಷಕ್ಕೂ ಅಧಿಕ ಶಿಕ್ಷಕರೇ ಇದ್ದಾರೆ. ಹಾಗಾಗಿ ಈ ಬಾರಿಯ ದೇಣಿಗೆಯಲ್ಲಿ ಶೇ. 40ರಷ್ಟು ಶಿಕ್ಷಕರ ಸಂಘ ನೀಡುತ್ತಿದೆ. ಇನ್ನುಳಿದಂತೆ 70- 80ಸಾವಿರದಷ್ಟು ಸದಸ್ಯತ್ವ ಹೊಂದಿರುವ ಆರೋಗ್ಯ ಇಲಾಖೆ ಎರಡನೇ ಸ್ಥಾನದಲ್ಲಿದ್ದು, ಶೇ. 20ರಷ್ಟು ದೇಣಿಗೆ ಇವರಿಂದ ಸಂಗ್ರಹವಾಗಲಿದೆ. 40ರಿಂದ 60 ಸಾವಿರ ಸದಸ್ಯತ್ವ ಹೊಂದಿರುವ ಕಂದಾಯ ಇಲಾಖೆ ಶೇ. 15ರಷ್ಟು ಮತ್ತು ಇನ್ನುಳಿದ 81 ವಿವಿಧ ಇಲಾಖೆಗಳಿಂದ ಬಾಕಿ ಶೇ. 25ರಷ್ಟು ದೇಣಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂಗ್ರಹವಾಗುತ್ತದೆ ಎಂದು ಸಂಘದ ಪದಾಧಿಕಾರಿ ಕೃಷ್ಣಮೂರ್ತಿ ಮಾಹಿತಿ ನೀಡಿದರು.
* ಲೋಕೇಶ್ ರಾಮ್