Advertisement

ಮಳೆಯಿಂದ ಹಾನಿಗೀಡಾದ ರಸ್ತೆಗಳ ದುರಸ್ತಿಗೆ 200 ಕೋಟಿ ರೂ.: ಸಚಿವ ಸಿ.ಸಿ.ಪಾಟೀಲ್‌

08:20 PM Jul 19, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದ ಹಾನಿಗೀಡಾದ ರಸ್ತೆಗಳ ದುರಸ್ತಿಗೆ 200 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇನಿಂದ ಜುಲೈ ತಿಂಗಳವರೆಗೆ ಸುರಿದ ಮಳೆಗೆ 141 ಕಿ.ಮೀ. ರಾಜ್ಯ ಹೆದ್ದಾರಿ, 924 ಕಿ.ಮೀ. ಜಿಲ್ಲಾ ಮುಖ್ಯರಸ್ತೆ, 354 ಸಣ್ಣ ಸೇತುವೆ ಹಾನಿಗೀಡಾಗಿದ್ದು, ದುರಸ್ತಿಗಾಗಿ 754 ಕೋಟಿ ರೂ. ಅಗತ್ಯದ ಅಂದಾಜು ಮಾಡಲಾಗಿದೆ ಎಂದು ಹೇಳಿದರು.

ತಕ್ಷಣಕ್ಕೆ ಹಾನಿಯಾಗಿರುವ ರಸ್ತೆಗಳ ದುರಸ್ತಿ ಕಾಮಗಾರಿ ಕೈಗೊಂಡು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಜಿಲ್ಲಾಧಿಕಾರಿಗಳ ಜತೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸೂಚಿಸ ಲಾ ಗಿದೆ. ಮೇ ಹಾಗೂ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ.

ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ , ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯುಂಟಾಗಿದೆ ಎಂದು ಹೇಳಿದರು.

ಸಂಪಾಜೆ ರಸ್ತೆ ಬಂದ್‌ ಮಾಡಿರುವ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗಿದೆ. ದೆಹಲಿಯ ತಜ್ಞರು ಸ್ಥಳ ಪರಿಶೀಲಿಸಿ ವರದಿ ನೀಡಿದ ನಂತರ ತೀರ್ಮಾನಿಸಲು ಸೂಚಿಸ ಲಾ ಗಿದೆ ಮಡಿಕೇರಿಯಲ್ಲಿ ನಿರ್ಮಿಸಿರುವ ಜಿಲ್ಲಾಧಿಕಾರಿಗಳ ಕಚೇರಿ ಗೋಡೆ ಶಿಥಿಲದ ಬಗ್ಗೆಯೂ ತಜ್ಞರು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದರು.

Advertisement

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸುನಿಲ್‌ಕುಮಾರ್‌ ಅವರ ಜತೆ ದಕ್ಷಿಣ ಕನ್ನಡ, ಉಡುಪಿ ಪ್ರವಾಸ ಕೈಗೊಂಡಿದ್ದೆ, ಗೋಪಾಲಯ್ಯ ಅವರೊಂದಿಗೆ ಹಾಸನ ಜಿಲ್ಲೆ ಪ್ರವಾಸ, ಶಿವರಾಮ ಹೆಬ್ಟಾರ್‌ ಜತೆಗೂಡಿ ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿಯೂ ಪರಿಶೀಲಿಸಿದ್ದೇನೆ. ಹಾನಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ.

ವಾಡಿಕೆಗಿಂತ ಮಳೆ ಹೆಚ್ಚಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಭೂ ಕುಸಿತ ಹಾಗೂ ಇತರೆ ಸಮಸ್ಯೆಗಳಿಗೆ ಕಾರಣ ಏನು ಎಂಬುದರ ಬಗ್ಗೆಯೂ ತಜ್ಞರಿಂದ ವರದಿ ಪಡೆಯಲಾಗುತ್ತಿದೆ. ತಕ್ಷಣಕ್ಕೆ ಹಾನಿಗೀಡಾಗಿರುವ ರಸ್ತೆ-ಸೇತುವೆ ದುರಸ್ತಿಗೆ ಹೆಚ್ಚು ಗಮನಹರಿಸಲಾಗಿದೆ ಎಂದು ಹೇಳಿದರು.

ಸಚಿವ ಗೋಪಾಲಯ್ಯ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಅನಿಲ್‌ಕುಮಾರ್‌, ಕಾರ್ಯದರ್ಶಿ ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.

ಶಿರಾಡಿಘಾಟ್‌ನಲ್ಲಿ ಏಕಮುಖ ಸಂಚಾರ
ಶಿರಾಡಿ ಘಾಟ್‌ನಲ್ಲಿ ಕಾಮಗಾರಿ ನಡೆಯುತ್ತಿದ್ದು ಮಳೆಯಿಂದ ಕೆಲವೆಡೆ ಭೂ ಕುಸಿತ ಸಹ ಉಂಟಾಗಿದೆ. ಹೀಗಾಗಿ, ತಾತ್ಕಾಲಿಕವಾಗಿ ಸಕಲೇಶಪುರದಿಂದ ದೋಣಿಗಲ್‌ವರೆಗೆ ಏಕ ಮುಖ ರಸ್ತೆ ಮಾಡಿ ಆ ಭಾಗದಿಂದ ಬರುವ ವಾಹನಗಳಿಗೆ ದೋಣಿಗಲ್‌ -ಕೇಶಗಾನಹಳ್ಳಿ-ಕಪ್ಪಹಳ್ಳಿ ಮಾರ್ಗದಲ್ಲಿ ಪರ್ಯಾಯ ರಸ್ತೆ ಅಭಿವೃದ್ಧಿಸಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ್‌ ತಿಳಿಸಿದರು. ಶಿರಾಡಿಘಾಟ್‌ ಮಾರ್ಗದ ಕಾಮಗಾರಿ 2023 ಜೂನ್‌ ವೇಳೆಗೆ ಪೂರ್ಣಗೊಳಿಸಿ ಮುಂದಿನ ಮಳೆಗಾಲಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದರು.

ಮಂಗಳೂರು ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರು ನಿರಂತರ ಸಂಪರ್ಕದಲ್ಲಿದ್ದು ತಮ್ಮ ಭಾಗದಲ್ಲಿ ಭೂ ಕುಸಿತದಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ. ಮುಖ್ಯಮಂತ್ರಿಯವರೂ ಅಗತ್ಯ ಬಿದ್ದರೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಲು ಸೂಚಿಸಿ ದ್ದಾರೆ. ಹೀಗಾಗಿ, ಶಿರಾಡಿಘಾಟ್‌ ಭಾಗದಲ್ಲಿ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಶಿರಾಡಿಘಾಟ್‌ ಹಾಗೂ ಚಾರ್ಮಾಡಿ ಘಾಟ್‌ ಭಾಗದಲ್ಲಿ ಸುರಂಗ ಮಾರ್ಗದ ಪ್ರಸ್ತಾವನೆಯೂ ಇದ್ದು ಹೊಸದಾಗಿ ಕಾರ್ಯಸಾಧ್ಯತಾ ವರದಿ ತಯಾರಿಸಲು ಸೂಚಿಸ ಲಾ ಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next