Advertisement

ಉದ್ಯೋಗಮೇಳಕ್ಕೆ 200 ಕಂಪನಿ ಆಹ್ವಾನ: ಜಿಲ್ಲಾಧಿಕಾರಿ

08:25 AM Feb 17, 2019 | |

ಕಲಬುರಗಿ: ಕಲಬುರಗಿ, ಬೀದರ, ಯಾದಗಿರಿ ಜಿಲ್ಲೆಯನ್ನೊಳಗೊಂಡು ಹಮ್ಮಿಕೊಂಡಿರುವ ಬೃಹತ್‌ ಉದ್ಯೋಗ ಮೇಳದಲ್ಲಿ ಕನಿಷ್ಠ 200ಕ್ಕಿಂತಲೂ ಹೆಚ್ಚು ಕಂಪನಿಗಳನ್ನು ಆಹ್ವಾನಿಸುವ ಮೂಲಕ ಅವುಗಳು ಭಾಗಹಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಆಯೋಜನೆ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉದ್ಯೋಗ ಮೇಳಗಳ ಯಶಸ್ಸು ಅಭ್ಯರ್ಥಿಗಳಿಗೆ ಸಿಗುವ ಉದ್ಯೋಗಾವಕಾಶದ ಮೇಲೆ ಅವಲಂಬಿತವಾಗುತ್ತದೆ ಎಂದರು.

ಈ ಭಾಗದ ಹೆಚ್ಚಿನ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಸಿಗಬೇಕಾದರೆ ಬೃಹತ್‌ ಉದ್ಯೋಗ ಮೇಳದಲ್ಲಿ ಉದ್ಯೋಗ ನೀಡುವ ಹೆಚ್ಚಿನ ಕಂಪನಿಗಳು ಭಾಗವಹಿಸಿದರೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಚೇಂಬರ್‌ ಆಫ್‌ ಕಾಮರ್ಸ್‌, ಉದ್ಯೋಗ ಮತ್ತು ತರಬೇತಿ, ಜಿಲ್ಲಾ ಕೈಗಾರಿಕಾ ಕೇಂದ್ರದವರು ಕಂಪನಿಗಳನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.
 
ಮುಂಬರುವ ಲೋಕಸಭೆ ಚುನಾವಣೆ ಅಧಿಸೂಚನೆಗಿಂತಲೂ ಮುಂಚಿತವಾಗಿ ಬೃಹತ್‌ ಉದ್ಯೋಗ ಮೇಳ ಹಮ್ಮಿಕೊಳ್ಳಬೇಕು. ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ತರಬೇತಿ ಸಂಸ್ಥೆ ಅಧಿಕಾರಿಗಳು ಸಹಾಯಕ ಆಯುಕ್ತರೊಂದಿಗೆ ಜಂಟಿಯಾಗಿ ಉದ್ಯೋಗ ಮೇಳ ಕೈಗೊಳ್ಳಲು ಸ್ಥಳ ಪರಿಶೀಲನೆ ಮಾಡುವ ಮೂಲಕ ವರದಿ ಸಲ್ಲಿಸಬೇಕು. ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣ, ಎನ್‌.ವಿ. ಮೈದಾನ, ಪಿಡಿಎ ಇಂಜಿನಿಯರಿಂಗ್‌ ಕಾಲೇಜುಗಳ ಸ್ಥಳ ಪರಿಶೀಲಿಸಬೇಕು ಎಂದು ಹೇಳಿದರು.

ಮೇಳದ ಮೇಲುಸ್ತುವಾರಿಯು ಉದ್ಯೋಗ ಮತ್ತು ತರಬೇತಿ ಇಲಾಖೆಯದ್ದಾಗಿದ್ದು, ಈ ಇಲಾಖೆ ಅಧಿಕಾರಿಗಳು ಆಸಕ್ತಿ ತೋರದಿರುವುದು ವಿಷಾದನೀಯವಾಗಿದೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಉದ್ಯೋಗ ಮೇಳದ ಮೇಲುಸ್ತುವಾರಿಯನ್ನು ವಹಿಸಿಕೊಳ್ಳಬೇಕು ಎಂದರು.

ಮೇಳದಲ್ಲಿ ಭಾಗವಹಿಸುವ ಕಂಪನಿಗಳ ವಿವರವನ್ನು ಮುಂಚಿತವಾಗಿ ಪಡೆದುಕೊಳ್ಳಬೇಕು. ಕಂಪನಿಗಳ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಸೂಕ್ತ ಸೂಚನೆ ನೀಡಲು ಸಾಧ್ಯವಾಗುತ್ತದೆ. ಉದ್ಯೋಗ ಮೇಳದ ಕುರಿತಂತೆ ವೆಬ್‌ ಸೈಟ್‌ ಪ್ರಾರಂಭಿಸಿ ಅಭ್ಯರ್ಥಿಗಳ ನೋಂದಣಿ ಪ್ರಾರಂಭಿಸಬೇಕು. ಮೇಳದ ಆಯೋಜನೆಗೆ ಸ್ವಾಗತ ಮತ್ತು ಶಿಷ್ಠಾಚಾರ, ವೇದಿಕೆ, ಮುದ್ರಣ ಪ್ರಚಾರ, ಕಾರ್ಯ ನಿರ್ವಹಣೆ, ಆಹಾರ, ಆರೋಗ್ಯ-ಸ್ವತ್ಛತೆ-ಸುರಕ್ಷತೆ, ಸಮನ್ವಯ ಸಮಿತಿಗಳನ್ನು ರಚಿಸುವ ಮೂಲಕ ಆಯಾ ಸಮಿತಿಗಳ ಕರ್ತವ್ಯಗಳನ್ನು ತಿಳಿಸಿದರು.

Advertisement

ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ ರಘೋಜಿ, ಐಟಿಐ ಕಾಲೇಜಿನ ಪ್ರಾಂಶುಪಾಲ ಪಾಂಚಾಳ, ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next