ಬೆಳಗಾವಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ್ದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಜಿಲ್ಲಾ ಪೋಕ್ಸೋ ನ್ಯಾಯಾಲಯ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಸವದತ್ತಿ ತಾಲೂಕಿನ ಬಸರಗಿ ಗವಟಿನ ಗ್ರಾಮದ ಹನುಮಂತ ಪುಂಡಲಿಕ ಚಿಪ್ಪಲಕಟ್ಟಿ(21) ಎಂಬ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-1 ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ತೀರ್ಪು ನೀಡಿದ್ದಾರೆ.
ಬಾಲಕಿಯ ತಂದೆ, ತಾಯಿ ಕೃಷಿ ಜೀವನ ನಡೆಸಿಕೊಂಡು ಪುತ್ರ ಹಾಗೂ ಇಬ್ಬರು ಪುತ್ರಿಯರೊಂದಿಗೆ ಜೀವನ ಸಾಗಿಸುತ್ತಿದ್ದರು. ಹನುಮಂತ ಪುಂಡಲಿಕ ಚಿಪ್ಪಲಕಟ್ಟಿ ಎಂಬಾತ ಬಾಲಕಿಯನ್ನು 7 ನವೆಂಬರ್ 2019ರಂದು ಅತ್ಯಾಚಾರ ಮಾಡುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಗೋನಗನೂರ ಗ್ರಾಮದ ದೊಡ್ಡಗುಡ್ಡದಲ್ಲಿ ಕರೆದುಕೊಂಡು ಹೋಗಿ ಒತ್ತಾಯದಿಂದ ಹಲವಾರು ಬಾರಿ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದನು. ಈ ಬಗ್ಗೆ ಸವದತ್ತಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖಾಧಿಕಾರಿ ಎಂ.ಐ. ನಡುವಿನಮನಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ವಿಚಾರಣೆ ನಡೆಸಿ 20 ಸಾಕ್ಷಿ, ದಾಖಲೆಗಳು ಹಾಗೂ ಮುದ್ದೆಮಾಲಗಳ ಆಧಾರದ ಮೇಲಿಂದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರೂ. ಪರಿಹಾರ ಧನವನ್ನು ಪಡೆಯಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದಾರೆ.