Advertisement
“ಸುಮಾರು ಇಪ್ಪತ್ತು ವರ್ಷಗಳಿಂದಲೂ ಶಿವರಾಜಕುಮಾರ್ ಅವರೊಂದಿಗೆ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಆಸೆ, ಈಗ ಈಡೇರಿದೆ…’
ಅವರು ಹೇಳಿದ್ದು, ತಮ್ಮ ನಿರ್ಮಾಣದ “ಆಯುಷ್ಮಾನ್ ಭವ’ ಚಿತ್ರದ ಬಗ್ಗೆ. ಈ ಚಿತ್ರ ಈಗ ಮುಗಿದಿದ್ದು, ರಾಜ್ಯೋತ್ಸವದಂದು ಬಿಡುಗಡೆಯಾಗುತ್ತಿದೆ. ಆ ಕುರಿತು ಹೇಳಲೆಂದೇ, ತಮ್ಮ ತಂಡದ ಜೊತೆ ಆಗಮಿಸಿದ್ದ ಯೋಗೀಶ್ ದ್ವಾರಕೀಶ್ ಹೇಳಿದ್ದಿಷ್ಟು; “ನಮ್ಮ ಬ್ಯಾನರ್‌ನಲ್ಲಿ ಮೊದಲ ಚಿತ್ರ ನಿರ್ಮಾಣವಾಗಿದ್ದು “ಮೇಯರ್ ಮುತ್ತಣ್ಣ’. ಅದು 1969 ರಲ್ಲಿ. ದ್ವಾರಕೀಶ್ ಚಿತ್ರ ಬ್ಯಾನರ್‌ಗೆ 50 ವರ್ಷ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇಷ್ಟು ವರ್ಷಗಳಲ್ಲಿ 52 ಸಿನಿಮಾಗಳ ನಿರ್ಮಾಣ ಮಾಡಿದ್ದೇವೆ. ಮೊದಲ ಚಿತ್ರ ಡಾ.ರಾಜಕುಮಾರ್ ಅವರಿಗೆ ನಿರ್ಮಾಣ ಮಾಡಿದರೆ, 52ನೇ ಸಿನಿಮಾ ಅವರ ಪುತ್ರ ಶಿವರಾಜಕುಮಾರ್ ಅವರಿಗೆ ಮಾಡಿದ್ದೇವೆ. ಈ ಹಿಂದೆಯೇ ನಾವು ಶಿವರಾಜಕುಮಾರ್ ಜೊತೆಗೆ ಸಿನಿಮಾ ಮಾಡಬೇಕು ಅಂದುಕೊಂಡಿದ್ದೆವು. ಕಳೆದ 20 ವರ್ಷಗಳಿಂದಲೂ ಅದು ಯಾಕೋ ಕೆಲ ಕಾರಣಗಳಿಂದ ಸಾಧ್ಯವೇ ಆಗಲಿಲ್ಲ. ಕೊನೆಗೆ ಶಿವರಾಜಕುಮಾರ್ ಅವರೇ, ಈ ಕಥೆ ಆಯ್ಕೆ ಮಾಡಿ, ಸಿನಿಮಾ ಮಾಡುವಂತೆ ಅವಕಾಶ ಕೊಟ್ಟಿದ್ದಕ್ಕೆ ಸಿನಿಮಾ ಆಗಿದೆ ಎಂದು ವಿವರಿಸಿದ ಯೋಗಿ, “ಪಿ. ವಾಸು ಅವರು 57 ದಿನಗಳ ಕಾಲ ಚಿತ್ರೀಕರಿಸಿದ್ದಾರೆ. ಇನ್ನು, ಗುರುಕಿರಣ್ ಅವರ 100ನೇ ಸಿನಿಮಾ ಎಂಬುದು ಮತ್ತೂಂದು ವಿಶೇಷ. ಮೊದಲ ಸಲ ರಚಿತಾ ಅವರು ಶಿವಣ್ಣ ಅವರ ಜೋಡಿಯಾಗಿ ನಟಿಸಿದ್ದಾರೆ. ಪಿ.ಕೆ.ಎಚ್.ದಾಸ್ ಕೂಡ ಮೊದಲ ಬಾರಿಗೆ ನಮ್ಮ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದಾರೆ. ಅದೇನೆ ಇರಲಿ, ಕಷ್ಟಕಾಲದಲ್ಲಿದ್ದಾಗ, ಶಿವಣ್ಣ ನಮ್ಮನ್ನು ಕರೆದು ಈ ಚಿತ್ರ ಮಾಡಲು ಅವಕಾಶ ಕೊಟ್ಟಿದ್ದಾರೆ’ ಎಂದು ನೆನಪಿಸಿಕೊಂಡರು ಯೋಗಿ.
Related Articles
Advertisement
ರಚಿತಾ ರಾಮ್ ಅವರಿಗಿಲ್ಲಿ ತಮ್ಮ ವಯಸ್ಸಿಗೆ ಮೀರಿದ ಪಾತ್ರ ಸಿಕ್ಕಿದೆಯಂತೆ. ಸಾಕಷ್ಟು ಕಲಿತಿದ್ದೇನೆ ಎಂದು ಹೇಳುವ ರಚಿತಾ, “ಶಿವಣ್ಣ ಅವರೊಂದಿಗೆ ಕೆಲಸ ಮಾಡಿದ್ದು ಮರೆಯದ ಅನುಭವ. ಅವರ ಎನರ್ಜಿ ನೋಡಿದರೆ, ಖುಷಿಯಾಗುತ್ತೆ. ನಾನಿಲ್ಲಿ ಏನೇ ಕೆಲಸ ಮಾಡಿದ್ದರೂ, ಆ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು’ ಎಂದರು ರಚಿತಾರಾಮ್.
ಗುರುಕಿರಣ್ ಅವರಿಗೆ ಇದು 100ನೇ ಚಿತ್ರ. ಅವರಿಲ್ಲಿ ಐದು ಹಾಡುಗಳ ಜೊತೆಗೆ ಐದು ತುಣುಕು ಹಾಡುಗಳನ್ನು ಕೊಟ್ಟಿದ್ದಾರಂತೆ. ಈ ಹಿಂದೆ ಶಿವರಾಜಕುಮಾರ್ ಅಭಿನಯದ “ಸತ್ಯ ಇನ್ ಲವ್’ ಗುರುಕಿರಣ್ ಅವರ 50ನೇ ಚಿತ್ರವಾಗಿತ್ತು. ಈಗ ಇದು 100ನೇ ಚಿತ್ರ. ಸಹಜವಾಗಿಯೇ ಗುರುಕಿರಣ್‌ಗೆ ಖುಷಿ ಇದೆ. “ಇದು ಪಕ್ಕಾ ಮ್ಯೂಸಿಕಲ್ ಸಿನಿಮಾ. ಮೊದಲು ಯೋಗಿ ಹೇಳಿದಾಗ, ಇಳೆಯರಾಜ ಅವರ ಬಳಿ ಮಾಡಿಸು. ಅವರು ಒಪ್ಪದಿದ್ದರೆ, ನಾನು ಮಾಡ್ತೀನಿ ಅಂದೆ. ಆದರೆ, “ಆಯುಷ್ಮಾನ್‌ಭವ’ ನನ್ನ ಪಾಲಾಯ್ತು. ನಿರೀಕ್ಷೆ ಸುಳ್ಳಾಗದ ಚಿತ್ರವಿದು’ ಎಂದರು ಗುರು. ದ್ವಾರಕೀಶ್, 50ನೇ ವರ್ಷದ ಸಂಭ್ರಮದ ಬಗ್ಗೆ, ಸಾಧು ಕೋಕಿಲ, ನಿಧಿ ಸುಬ್ಬಯ್ಯ, ಪಿಕೆಎಚ್ ದಾಸ್ ಸಿನಿಮಾ ಅನುಭವ ಹೇಳಿಕೊಂಡರು.
ವಿಜಯ್ ಭರಮಸಾಗರ