ಹೊಸದಿಲ್ಲಿ : 20 ವರ್ಷಗಳ ಹಿಂದೆ ಇದೇ ದಿನ ಮೇ 27ರಂದು ಭಾರತ, ಪಾಕಿಸ್ಥಾನ ವಿರುದ್ಧ ಕಾರ್ಗಿಲ್ ಯುದ್ಧವನ್ನು ಜಯಿಸಿತ್ತು.
ಭಾರತದ ಎಲ್‌ಓಸಿ ಕಡೆಯಲ್ಲಿರುವ ಕಾರ್ಗಿಲ್ ತುದಿಯನ್ನು ಆಕ್ರಮಿಸಿಕೊಂಡಿದ್ದ ಮುಜಾಹಿದೀನ್ ವೇಷಧಾರಿ ಪಾಕ್ ಸೈನಿಕರನ್ನು ಅಂದು ಭಾರತೀಯ ಸೇನೆ ಮತ್ತು ವಾಯ ಪಡೆಯ ಎಂಟೆದೆಯ ಯೋಧರು ಅಪ್ರತಿಮ ಶೌರ್ಯ ತೋರಿ ಸಂಪೂರ್ಣವಾಗಿ ಮಣಿಸಿದ್ದರು.
ಕಾರ್ಗಿಲ್ ಸಮರದಲ್ಲಿ ದಿಟ್ಟ ಹೋರಾಟ ನೀಡಿದ್ದ ಫ್ಲೈಟ್ ಲೆಫ್ಟಿನೆಂಟ್ ಕಂಬಂಪಾಟಿ ನಚಿಕೇತ ಮತ್ತು ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ಅವರು ತೋರಿದ್ದ ಧೈರ್ಯ, ಸಾಹಸ, ಈ ವರ್ಷದ ಆದಿಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ತೋರಿದ್ದ ಸಾಹಸಕ್ಕಿಂತ ಒಂದಿನಿತೂ ಕಡಿಮೆ ಇರಲಿಲ್ಲ.
ಅಂದು ತಾವು ಪಾಕ್ ಆಕ್ರಮಣಕೋರರ ವಿರುದ್ಧ ತೋರಿದ್ದ ಎಂಟೆದೆಯ ಸಾಹಸಗಾಥೆಯನ್ನು ತಿಳಿಸಲು ನಚಿಕೇತ ಅವರು ಇಂದಿಗೂ ನಮ್ಮೊಂದಿಗಿದ್ದಾರೆ; ಆದರೆ ಅಹುಜಾ ಅವರು ಭಾರತ ಎಂದೂ ಮರೆಯದ ಸಾಹಸ ತೋರಿ ಹುತಾತ್ಮರಾಗಿದ್ದಾರೆ.
ಪಾಕ್ ಸೇನೆ ಕಾರ್ಗಿಲ್ ದುಸ್ಸಾಹಸ ತೋರುವುದೆಂಬ ಮಾಹಿತಿ ಭಾರತೀಯ ಸೇನಾ ಪಡೆಗೆ ಮೇ ತಿಂಗಳ ಆರಂಭದಲ್ಲೇ ಇತ್ತು. ಅಗಲೇ ಪಾಕ್ ಪಡೆಯ ಎಲ್‌ಓಸಿ ಉದ್ದಕ್ಕೂ ಭಾರೀ ಗುಂಡಿನ ಹಾಗೂ ಶೆಲ್ ದಾಳಿ ಆರಂಭಿಸಿತ್ತು. ಮೇ 19ರಂದು ಭಾರತೀಯ ಗಸ್ತು ತಂಡ, 4 ಜಾಟ್ ರೆಜಿಮೆಂಟ್ ಇದರ ಕ್ಯಾಪ್ಟನ್ ಸೌರಬ್ ಕಾಲಿಯಾ ಅವರನ್ನು ಪಾಕ್ ಸೈನಿಕರು ಸೆರೆ ಹಿಡಿದರು.
ಕಾರ್ಗಿಲ್ ತುದಿಯನ್ನುಆಕ್ರಮಿಸಿಕೊಂಡಿದ್ದ ಪಾಕ್ ಸೈನಿಕರನ್ನು ಸದೆ ಬಡಿಯಲು 2 ಲಕ್ಷ ಭಾರತೀಯ ಯೋಧರನ್ನು ದ್ರಾಸ್, ಕಾರ್ಗಿಲ್ ಮತ್ತು ಬಟಾಲಿಕ್ ಸೆಕ್ಟರ್‌ಗಳಲ್ಲಿ ನಿಯೋಜಿಸಲಾಯಿತು.
ಮೇ 25ರಂದು ಭಾರತೀಯ ಸೇನಗೆ ಮತ್ತು ಮೇ 26ರಂದು ಭಾರತೀಯ ವಾಯು ಪಡೆಗೆ ದಾಳಿ ಆರಂಭಿಸಲು ಅನುಮತಿ ನೀಡಲಾಯಿತು. ಒಡನೆಯೇ ಐಎಎಫ್ ಸಫೇದ್ ಸಾಗ್ ಕಾರ್ಯಾಚರಣೆಯನ್ನು ಕೈಗೊಂಡು ಕಾರ್ಗಿಲ್ ವಿಮೋಚನೆಯಲ್ಲಿ ಮುಖ್ಯ ಪಾತ್ರ ವಹಿಸಿತು.
ಮೇ 27ರಂದು ಭಾರತ ಪಾಕ್ ವಿರುದ್ಧದ ಕಾರ್ಗಿಲ್ ಸಮರವನ್ನು ನಿರ್ಣಾಯಕವಾಗಿ ಜಯಿಸಿತು.