Advertisement

ದೇಶದಲ್ಲಿ 20 ವಿಶ್ವದರ್ಜೆ ಶಿಕ್ಷಣ ಸಂಸ್ಥೆ ನಿರ್ಮಾಣ

03:45 AM Jan 08, 2017 | Team Udayavani |

ಬೆಂಗಳೂರು: ಯುವ ಸಮೂಹವನ್ನು ಸ್ವದೇಶದಲ್ಲೇ ಉನ್ನತ ಶಿಕ್ಷಣದತ್ತ ಸೆಳೆಯಲು ಹಾಗೂ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸದಾಗಿ ವಿಶ್ವದರ್ಜೆಯ 20 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಜತೆಗೆ ಪ್ರಧಾನಮಂತ್ರಿ ವಿದ್ಯಾರ್ಥಿ ವೇತನವನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ. 

Advertisement

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ ಸಮಾವೇಶದಲ್ಲಿ ಭಾರತೀಯ ಯುವ ರಾಯಭಾರಿಗಳ ಜತೆ ಸಂವಾದ ನಡೆಸಿದ ಅವರು, ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ನಮ್ಮಲ್ಲಿನ ಸಾಕಷ್ಟು ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುತ್ತಿದ್ದಾರೆ. ದೇಶದಲ್ಲಿಯೇ ಅಂತಹ ಶಿಕ್ಷಣ ಕಲ್ಪಿಸಿದರೆ ವಿದೇಶಗಳಿಗೆ ಹೋಗುವುದನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ 10 ಸರ್ಕಾರಿ ವಿಶ್ವವಿದ್ಯಾಲಯ ಸ್ಥಾಪಿಸಿ, 10 ಖಾಸಗಿ ಶಿಕ್ಷಣ ವಿಶ್ವವಿದ್ಯಾಲಯಗಳಿಗೂ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ದೇಶದ ಪ್ರತಿಭೆ ಪಲಾಯನವಾಗಬಾರದು ಎಂಬುದು ನಮ್ಮ ಮೂಲ ಉದ್ದೇಶ. ಹೀಗಾಗಿ, ಯುವ ಸಮೂಹ ಇಲ್ಲೇ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯಡಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸ್ತುತ ಮಾಸಿಕ ನೀಡುತ್ತಿರುವ ಎರಡು ಸಾವಿರ ರೂ. ಮೊತ್ತವನ್ನು ವರ್ಷಕ್ಕೆ ಒಂದು ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ವಿದೇಶಗಳಲ್ಲಿ ಕೆಲವು ಕಡೆ ವಿದ್ಯಾರ್ಥಿ ವೇತನ ಅಧಿಕವಾಗಿ ನೀಡುತ್ತಿರುವುದರಿಂದ ವಿದ್ಯಾಭ್ಯಾಸಕ್ಕಾಗಿ ಅತ್ತ ನಮ್ಮ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ದೇಶದಲ್ಲಿನ ಪ್ರತಿಭೆಯೂ ಹೊರಗೆ ಹೋಗುತ್ತಿದೆ. ಇದನ್ನು ತಡೆದು ನಮ್ಮ ವಿದ್ಯಾರ್ಥಿಗಳು ಇಲ್ಲೇ ಶಿಕ್ಷಣ ಪಡೆಯಲು ಉತ್ತೇಜಿಸುವ ದೃಷ್ಟಿಯಿಂದ ವಿದ್ಯಾರ್ಥಿ ವೇತನ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದರು. 

ಭಾರತದಲ್ಲಿ ವಿದ್ಯಾಭ್ಯಾಸ ಮಾಡಲು ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ವಿಫ‌ುಲವಾದ ಅವಕಾಶಗಳಿವೆ. ಭಾರತದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅವರಿಗೆ ಬೇಕಾದ ಎಲ್ಲ ಸವಲತ್ತು ಒದಗಿಸಲಾಗುವುದು. ಏನೇ ತೊಡಕಿದ್ದರೂ ನಿವಾರಣೆ ಮಾಡಲು ಸರ್ಕಾರ ಬದ್ಧವಿದೆ ಎಂದು ಹೇಳಿದರು. 

Advertisement

ವಿದೇಶಗಳಲ್ಲಿ ಅತ್ಯುತ್ತಮ ಸಂಶೋಧನಾ ಕೇಂದ್ರಗಳ ಮಾಹಿತಿ ನೀಡಲು ಹಾಗೂ ಸ್ವದೇಶಕ್ಕೆ ಮರಳಿದ ನಂತರ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಲು ಇಚ್ಛಿಸುವವರಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಜಾಗತಿಕ ಸಂಶೋಧನಾ ಸಂವಾದ ಸಂಪರ್ಕ (ಎನ್‌ಆರ್‌ಐಎನ್‌) ಕೇಂದ್ರ ಆರಂಭಿಸಲಾಗಿದೆ. ಇದಲ್ಲದೇ ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ ವತಿಯಿಂದ ವಿದ್ಯಾರ್ಥಿಗಳ ಅಗತ್ಯ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ವಿದೇಶದಲ್ಲಿ ಓದುವವರಿಗೆ ಕಾರ್ಡ್‌:
ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಧ್ಯಾನೇಶ್ವರ್‌ ಮುಳೆ, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಪಾಸ್‌ಪೋರ್ಟ್‌ಗೆ ಸಂಬಂಧಿಸಿದಂತೆ ಕಾರ್ಡ್‌ವೊಂದನ್ನು ನೀಡಲಾಗುತ್ತಿದೆ. ಇದನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಪ್ರಸ್ತುತ ಇದನ್ನು ಉಚಿತವಾಗಿ ನೀಡಲಾಗುತ್ತಿದ್ದು, ಮುಂದಿನ ದಿನದಲ್ಲಿ ಇದಕ್ಕೆ ಶುಲ್ಕ ನಿಗದಿ ಪಡಿಸಲಾಗುತ್ತದೆ. ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿ ಮಾಡಿಕೊಳ್ಳುವುದರಿಂದ ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯ ಅಧಿಕೃತ ಮಾಹಿತಿ ಲಭ್ಯವಾದಂತಾಗುತ್ತದೆ ಎಂದು ತಿಳಿಸಿದರು. 

ಸಂವಾದದ ವೇಳೆ ಭಾರತ ಹಾಗೂ ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ವೀಸಾ ಪಡೆಯುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆ, ಪೊಲೀಸ್‌ ಠಾಣೆಗೆ ಅಲೆಯಬೇಕಾದ ಸ್ಥಿತಿ ಮತ್ತಿತರ ವಿಚಾರಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಸಚಿವರಿಂದ ದೊರೆಯಿತು. 

ಎನ್‌ಆರ್‌ಐಗಳ ಜತೆ ಮದುವೆಯಾಗಲಿ!
ಅನಿವಾಸಿ ಭಾರತೀಯ ಮತ್ತು ಮೂಲ ಭಾರತೀಯರ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಈ ಅಸಮತೋಲನ ನಿವಾರಿಸಿ ಸಮತೋಲನ ಕಾಯ್ದುಕೊಳ್ಳಲು ಭಾರತದ ಯುವಕರೊಂದಿಗೆ ಎನ್‌ಆರ್‌ಐ ಯುವತಿಯರು, ಭಾರತದ ಯುವತಿಯರೊಂದಿಗೆ ಎನ್‌ಆರ್‌ಐ ಯುವಕರು ಮದುವೆಯಾಗಬೇಕು ಎಂದು ಎಚ್‌.ಎಸ್‌. ಶರ್ಮಾ ಎಂಬುವವರು ನೀಡಿದ ಸಲಹೆ ಸಂವಾದದಲ್ಲಿ ಪಾಲ್ಗೊಂಡಿದ್ದವರನ್ನು ನಗೆಗಡಲಲ್ಲಿ ತೇಲಿಸಿತು. ವಿದೇಶದಲ್ಲಿನ ಭಾರತೀಯ ವಿದ್ಯಾರ್ಥಿಗಳ ಮತ್ತು ಭಾರತದಲ್ಲಿನ ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಸಮಸ್ಯೆಗಳು ಕುರಿತು ಸಚಿವ ಜಾವಡೇಕರ್‌ ಮುಕ್ತ ಸಲಹೆ ಸೂಚನೆ ಪಡೆಯುತ್ತಿದ್ದಾಗ, ಎದ್ದು ನಿಂತ ಶರ್ಮಾ ಈ ಸಲಹೆ ಮುಂದಿಟ್ಟಾಗ ಸಚಿವರಾದಿಯಾಗಿ ಇಡೀ ಸಭೆಯಲ್ಲಿ ನಗುವಿನ ಅಲೆ. ಆದರೆ, ವೇದಿಕೆ ನಿರ್ವಾಹಕರು, ಇದು ಸಂವಾದಕ್ಕೆ ಸಂಬಂಧಪಡುವುದಿಲ್ಲ ಎಂದು ಶರ್ಮಾ ಅವರನ್ನು ಸುಮ್ಮನಾಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next