ಶಿಮ್ಲಾ : ಇಲ್ಲಿಂದ ಸುಮಾರು 80 ಕಿ.ಮೀ. ದೂರವಿರುವ ಬಿಲಾಸ್‌ಪುರ – ಶಿಮ್ಲಾ ಹೈವೇಯಲ್ಲಿನ ಮಾಂಗ್‌ರೋಟ್ ಎಂಬಲ್ಲಿ ಇಂದು ಶನಿವಾರ ಬೆಳಗ್ಗೆ ಪ್ರವಾಸಿಗರ ಬಸ್ ಅಡಿಮೇಲಾಗಿ ಮಗುಚಿ ಕೊಂಡ ದುರಂತದಲ್ಲಿ ಕನಿಷ್ಠ 20 ಮಂದಿ ಪ್ರವಾಸಿಗರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಶಿಮ್ಲಾದಿಂದ ಮನಾಲಿಗೆ ಹೋಗುತ್ತಿದ್ದ ನತದೃಷ್ಟ ಬಸ್ಸಿನಲ್ಲಿ 41 ಮಂದಿ ಪ್ರವಾಸಿಗರಿದ್ದರು.
ಬಸ್ಸು ಅತ್ಯಂತ ವೇಗದಲ್ಲಿ ಧಾವಿಸುತ್ತಿದ್ದ ಕಾರಣ ಅದು ಅಡಿಮೇಲಾಗಿ ಮಗುಚಿ ಬಿತ್ತು; ಮಾತ್ರವಲ್ಲದೆ ರಸ್ತೆ ಬಿದ್ದಿ ನಿಲ್ಲಿಸಿಟ್ಟಿದ್ದ ಎರಡು ಕಾರುಗಳು ಕೂಡ ಹಾನಿಗೀಡಾದವು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಒಡನೆಯೇ ಬಿಲಾಸ್‌ಪುರದ ಸರಕಾರಿ ಅಸ್ಪತ್ರೆಗೆ ಒಯ್ಯಲಾಯಿತು. ಅವರೆಲ್ಲರೂ ಪ್ರಾಣಾಪಾಯದಿಂದ ಪಾಗಿರುವುದಾಗಿ ತಿಳಿದು ಬಂದಿದೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.