ಬೆಂಗಳೂರು: ಪರಿಸರ ಸಂರಕ್ಷಣೆ ಹಾಗೂ ಹಸಿರು ಉಳಿಸುವ ಉದ್ದೇಶದಿಂದ ರೈತರು ಒಂದು ಎಕರೆ ಕೃಷಿ ಭೂಮಿಯಲ್ಲಿ 20 ಸಸಿ ನೆಟ್ಟು ಬೆಳೆಸುವುದು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದ್ದು ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಭೂಮಿಯಲ್ಲಿ ಬದು ಹಾಗೂ ಅಂಚಿನಲ್ಲಿ ಸಸಿ ನೆಡಲು ರೈತರು ಆಸಕ್ತಿ ತೋರಿದ್ದು ಸರ್ಕಾರ ಸಹ ಪ್ರತಿ ಸಸಿ ನೆಟ್ಟು ಪೋಷಿಸಲು 100 ರೂ. ಪ್ರೋತ್ಸಾಹ ಧನ ನೀಡಲಿದೆ. ರೈತರಿಗೆ ಅಗತ್ಯವಾದ ಸಸಿಗಳನ್ನು ನೀಡಲಿದೆ ಎಂದು ತಿಳಿಸಿದರು.
ಆಗಸ್ಟ್ 15 ರಂದು ಹಸಿರು ಕರ್ನಾಟಕ ಯೋಜನೆಗೆ ಚಾಲನೆ ನೀಡಿ 10 ಕೋಟಿ ಸಸಿ ನೆಡುವ ಗುರಿ ಹೊಂದಾಗಿದೆ. ಇದುವರೆಗೂ 2 ಲಕ್ಷ ಸಸಿ ನೆಡಲಾಗಿದೆ ಎಂದು ಹೇಳಿದರು. ಈ ಹಿಂದೆ ವರ್ಷಕ್ಕೆ 5.50 ಕೋಟಿ ಸಸಿ ನೆಡುವ ಯೋಜನೆ ರೂಪಿಸಲಾಗಿತ್ತು .ಇದೀಗ ಹಸಿರು ಕರ್ನಾಟಕ ಯೋಜನೆಯಡಿ 10 ಕೋಟಿ ಸಸಿ ನೆಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಈ ನಡುವೆ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ತ್ಯಾಜ್ಯ ಹೊರಹಾಕುವ ಕಾರ್ಖಾನೆ ಹಾಗೂ ಕೆರೆ ಅಂಚಿನ ಕಟ್ಟಡಗಳ ಮೇಲೆ ನಿಗಾ ಹರಿಸಲು ತಂಡ ರಚಿಸಲಾಗಿದೆ. ಅದಕ್ಕಾಗಿ 10 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿ ಜಾರಿಗೂ ಇಲಾಖೆ ವತಿಯಿಂದ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಮಾಲಿನ್ಯನಿಯಂತ್ರಣ ಮಂಡಳಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜತೆಗೂಡಿ ದಾಳಿ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಈ ವಿಚಾರದಲ್ಲಿ ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ನಾನು ಪಕ್ಷೇತರನಾಗಿ ಗೆದ್ದಿದ್ದರೂ ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದೇನೆ. ಸರ್ಕಾರದ ಭಾಗ ಆಗಿದ್ದೇನೆ. ನನಗೆ ಯಾವುದೇ ರೀತಿಯ ಅಸಮಾಧಾನ ಅಥವಾ ಬೇಸರ ಇಲ್ಲ. ನಾನು ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿದ್ದೇನೆ ಎಂಬುದು ಸುಳ್ಳು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.