ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಕೋವಿಡ್ 19 ಸೋಂಕಿನ ಆರ್ಭಟ ಮುಂದುವರೆದಿದೆ. ರವಿವಾರ ಮತ್ತೆ 20 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ತೀವ್ರ ಉಸಿರಾಟ ತೊಂದರೆಯ ಹಿನ್ನಲೆಯುಳ್ಳ ಮೂರು ಜನರಿಗೆ ಕೋವಿಡ್ 19 ಸೋಂಕು ತಗುಲಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 370ಕ್ಕೆ ಏರಿಕೆಯಾದಂತಾಗಿದೆ.
ರವಿವಾರ ಜಿಲ್ಲೆಯ ಔರಾದ ತಾಲೂಕಿನ ಏಕಂಬಾದಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಹೊಸದಾಗಿ ಸೋಂಕಿತರಾದ 20 ಜನರಲ್ಲಿ 13 ಜನ ಮಹಾರಾಷ್ಟ್ರದ ಸಂಪರ್ಕ ಹೊಂದಿದ್ದರೆ, ಮೂವರು ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಸೋಂಕಿಗೆ ಒಳಗಾದವರಾಗಿದ್ದಾರೆ. ಇನ್ನುಳಿದವರಲ್ಲಿ ಮೂವರು ಸೋಂಕಿತರ ಸಂಪರ್ಕದಿಂದ ಮತ್ತು ಇನ್ನೊಬ್ಬರು ಕುವೈತ್‌ನಿಂದ ಹಿಂದುರಿಗಿದವರಾಗಿದ್ದು ಅವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತನ್ನ ಹೆಲ್ತ್ ಬುಲೆಟಿನ್ ನಲ್ಲಿ ದೃಢಪಡಿಸಿದೆ.
ಒಟ್ಟು 20 ಸೋಂಕಿತರಲ್ಲಿ ಔರಾದ ತಾಲೂಕಿನ ಏಕಂಬಾ ಗ್ರಾಮದ 8, ಬಸವಕಲ್ಯಾಣ ತಾಲೂಕಿನ ತಡೋಳಾದ 3, ಉಮಾಪೂರ ಮತ್ತು ಸಸ್ತಾಪೂರ ಗ್ರಾಮದ ತಲಾ 1 ಸೇರಿ 5 ಪ್ರಕರಣಗಳು, ಕಮಲನಗರ ತಾಲೂಕಿನ ಬೆಳಕುಣಿ ಗ್ರಾಮದ 2, ಚಿಟಗುಪ್ಪ ಪಟ್ಟಣದ 2, ಭಾಲ್ಕಿ ತಾಲೂಕಿನ ಆಳಂದಿ ಮತ್ತು ನಾಗರಾಳ ಗ್ರಾಮದ ತಲಾ 1 ಹಾಗೂ ಬೀದರ ನಗರದ ಗುಂಪಾ ಪ್ರದೇಶದ 1 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದೆ.
ಇದರೊಂದಿಗೆ ಈವರೆಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 370 ಆದಂತಾಗಿದೆ. ಇವರಲ್ಲಿ 6 ಜನರು ಮೃತಪಟ್ಟಿದ್ದರೆ, 203 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಇನ್ನೂ 161 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.