ಕೋಲಾರ: ಸಿಬಿಐ ಅಧಿಕಾರಿಗಳೆಂದು ಮನೆಗೆ ನುಗ್ಗಿದ ಐವರು, ಮನೆಯಲ್ಲಿದ್ದವರಿಗೆ ಗನ್ ಪಾಯಿಂಟ್ ತೋರಿಸಿ 20 ಲಕ್ಷ ನಗದು ಮತ್ತು 1 ಕೆಜಿ ಚಿನ್ನ ದರೋಡೆ ಮಾಡಿರುವ ಘಟನೆ ಇಲ್ಲಿನ ಸಿ.ಬೈರೇಗೌಡ ನಗರದ ಮನೆಯಲ್ಲಿ ಸೋಮವಾರ ರಾತ್ರಿ ಜರುಗಿದೆ.
ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್, ಪತ್ನಿ ಪತ್ರನನ್ನು ಹಗ್ಗದಿಂದ ಕಟ್ಟಿ ದೇವರ ಕೋಣೆಯಲ್ಲಿ ಕೂಡಿ ಹಾಕಿ ಈ ದರೋಡೆ ನಡೆಸಿದ್ದಾರೆ.
ರಾತ್ರಿ ಎಂಟು ಗಂಟೆ ಸಮಯದಲ್ಲಿ ಸಿಬಿಐ ಅಧಿಕಾರಿಗಳೆಂದು ಹೇಳಿ ಮನೆಗೆ ನುಗ್ಗಿದ ಐದು ಮಂದಿ ದರೋಡೆಕೋರರು ಸುಮಾರು ಒಂದೂವರೆ ಗಂಟೆಯ ಕಾಲ ಮನೆಯೆಲ್ಲವನ್ನು ಜಾಲಾಡಿ ದರೋಡೆ ನಡೆಸಿದ್ದಾರೆ.
ನಾವು ಸಿಬಿಐ ಅಧಿಕಾರಿಗಳು, ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳು ಎಂದು ಹೇಳಿಕೊಂಡು ಕೈನಲ್ಲಿ ಪೈಲ್ ಹಿಡಿದುಕೊಂಡು ಬಂದು ಮನೆಗೆ ನುಗ್ಗಿ, ಮನೆಯಲ್ಲಿದ್ದವರಿಗೆ ಅನುಮಾನಗೊಂಡು ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಗನ್ ತೋರಿಸಿ ಕೈಕಾಲು ಕಟ್ಟಿಹಾಕಿದ ಆ ಗ್ಯಾಂಗ್ ಮನೆಯಲ್ಲಿದ್ದ ನಗ ನಾಣ್ಯ ಎಲ್ಲವನ್ನೂ ದೋಚಿಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ:“ಪರಮಾಣು ಬಾಂಬ್’ ಭೀತಿ ಹುಟ್ಟಿಸಿರುವ ರಷ್ಯಾದ ತಾಕತ್ತೇನು?
ದರೋಡೆಕೋರರು ತಾವು ಬಂದಿದ್ದ ವಾಹನದಲ್ಲೇ ಪರಾರಿಯಾದ ಮೇಲೆ ಕಿರುಚಿದಾಗ ನೆರೆಹೊರೆಯವರು ಆಗಮಿಸಿದಾಗ ದರೋಡೆ ಕೃತ್ಯ ಬೆಳಕಿಗೆ ಬಂದಿದೆ.
ಮನೆಯ ಎದುರು ಬಡಾವಣೆಯ ಜನರು ಜಮಾಯಿಸಿದ್ದರು. ಮನೆಯ ಒಳಗೆ ಚೆಲ್ಲಾಪಿಲ್ಲಿಯಾಗಿ ವಸ್ತುಗಳು ಬಿದ್ದಿದ್ದು, ಇದರ ನಡುವೆ ಕಣ್ಣೀರು ಹಾಕುತ್ತಾ ಮನೆಯವರು ದರೋಡೆಯಾದ ವಿಚಾರವನ್ನು ಪೊಲೀಸರಿಗೆ ತಿಳಿಸಿದರು.
ಬೈರೇಗೌಡ ಬಡಾವಣೆಯ ವ್ಯಾಪಾರಿ ಹಾಗೂ ಪೈನಾನ್ಸ್ ವ್ಯವಹಾರ ಮಾಡುವ ರಮೇಶ್ ಎಂಬುವರ ಮನೆಗೆ ಐದು ಜನರ ಗುಂಪೊಂದು ನಾವು ಸಿಬಿಐ ಅಧಿಕಾರಿಗಳು, ಇನ್ ಕಮ್ ಟ್ಯಾಕ್ಸ್ ಅಧಿಕಾರಿಗಳು ಎಂದು ಹೇಳಿಕೊಂಡು ಮನೆಗೆ ಬಂದಿದ್ದಾರೆ, ಈ ವೇಳೆ ಆಗಷ್ಟೇ ಮನೆಗೆ ಬಂದಿದ್ದ ರಮೇಶ್ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಅವರ ಮೊಬೈಲ್ಗಳನ್ನು ಕಿತ್ತುಕೊಂಡು ಒಳ ನುಗ್ಗಿದ ಐವರ ತಂಡ ತಾವು ಅಧಿಕಾರಿಗಳೆಂದು ಹೇಳಿ ಹೆದರಿಸಿ ಅವರನ್ನು ಕೂರಿಸಿ ಮನೆಯ ಎಲ್ಲಾ ಲಾಕರ್ಗಳ ಬೀಗದ ಕೀಗಳನ್ನು ಪಡೆದು ಮನೆಯಲ್ಲಿದ್ದ ಹಣ ಒಡವೆಗಳನ್ನು ತೆಗೆದುಕೊಂಡಿದ್ದಾರೆ. ಈ ವೇಳೆ ಅನುಮಾನಗೊಂಡ ಪ್ರಶ್ನೆ ಮಾಡಿದ್ದಕ್ಕೆ ರಿವಾಲ್ವಾರ್ ತೋರಿಸಿ ಕೈಕಾಲು ಕಟ್ಟಿ, ಕುತ್ತಿಗೆ ಬಳಿ ಚಾಕು ಇಟ್ಟು ಹೆದರಿಸಿದ್ದಾರೆ, ನಂತರ ಮನೆಯಲ್ಲಿದ್ದ ಸುಮಾರು 20 ಲಕ್ಷ ರೂಪಾಯಿಯಷ್ಟು ಹಣ ಸೇರಿದಂತೆ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳೆಲ್ಲವನ್ನು ದೋಚಿಕೊಂಡು ಪರಾರಿಯಾಗದ್ದಾರೆ. ಅವರು ಹೊರಡುವ ವೇಳೆಗೆ ರಮೇಶ್ ಹಾಗೂ ಅವರ ಮನೆಯವರು ಕಿರುಚುಕೊಂಡಿದ್ದಾರೆ ಆದರೂ ಅಕ್ಕಪಕ್ಕದ ಮನೆಯವರು ಬರುವಷ್ಟರಲ್ಲಿ ಅವರು ತಾವು ಬಂದಿದ್ದ ಕಾರ್ನಲ್ಲಿ ಪರಾರಿಯಾಗಿದ್ದಾರೆ.
ಘಟನೆಯಿಂದ ಬಡಾವಣೆಯ ಜನರು ಭಯಬೀತರಾಗಿದ್ದು ಆತಂಕಗೊಂಡಿದ್ದಾರೆ.
ನಗರ ಠಾಣಾ ಪೊಲೀಸರಿಗಿಂತ ಮೊದಲೇ ಸ್ಥಳಕ್ಕೆ ಆಗಮಿಸಿದ ಎಸ್ಪಿ ದೇವರಾಜು, ಮನೆಯವರಿಂದ ಮಾಹಿತಿ ಕಲೆ ಹಾಕಿದ್ದರು, ಅಲ್ಲದೆ ಇಡೀ ಬಡಾವಣೆಯನ್ನೆಲ್ಲಾ ಸುತ್ತಾಡಿ ಆರೋಪಿಗಳ ಸುಳಿವಿಗಾಗಿ ಹಡುಕಾಡಿದ್ದಾರೆ. ಆರೋಪಿಗಳು ಕೃತ್ಯ ಎಸಗುವ ಮುನ್ನ ಬಡಾವಣೆಯಲ್ಲಿ ಫೈಲ್ ಹಿಡಿದುಕೊಂಡು ಓಡಾಡಿರುವ ದೃಶ್ಯಗಳು ಬಡಾವಣೆಯ ಬೇರೆ ಬೇರೆ ಮನೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಜೊತೆಗೆ ಅಲ್ಲಿ ಬಂದಿದ್ದ ಅಷ್ಟೂ ಜನ ಹಿಂದಿ ಬಾಷೆಯಲ್ಲಿ ಮಾತನಾಡುತ್ತಿದ್ದರೆಂದು ಹೇಳಲಾಗುತ್ತಿದ್ದು, ಆರೋಪಿಗಳ ಬಗ್ಗೆ ಸಾಕಷ್ಟು ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ.
ಆರೋಪಿಗಳನ್ನು ಬೇಟೆಯಾಡಲು ಎಸ್ಪಿ ದೇವರಾಜ್ ಈಗಾಗಲೇ ನಾಲ್ವರು ಇನ್ಪೆಕ್ಟರ್ ಹಾಗೂ ಒಬ್ಬರು ಡಿವೈಎಸ್ಪಿ ಸಿಬ್ಬಂದಿಗಳ ತಂಡ ರಚನೆ ಮಾಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.
ಶ್ರೀಮಂತರ ಬಡಾವಣೆ, ಸುರಕ್ಷಿತ ಬಡಾವಣೆ, ಸಾಕಷ್ಟು ಸೌಲಭ್ಯಗಳಿವೆ ಎಂದುಕೊಂಡಿದ್ದ ಬೈರೇಗೌಡ ಬಡಾವಣೆಯಲ್ಲಿ ದೊಡ್ಡ ಇಲಾಖೆಗಳ ಹೆಸರೇಳಿಕೊಂಡು ಬಂದಿರುವ ಖದೀಮ ಕಳ್ಳರು ಲಕ್ಷಾಂತರ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಪ್ರತಿಷ್ಠಿತ ಬಡಾವಣೆಯಲ್ಲಿ ಇಂಥಹ ಘಟನೆ ನಡೆದಿರುವುದು ಕೋಲಾರ ನಗರದ ಜನರನ್ನು ಶಿವರಾತ್ರಿ ಮುನ್ನಾದಿನವೇ ನಿದ್ದೆಗೆಡಿಸಿದೆ.