ಗಾಂಧಿನಗರ: ಗುಜರಾತಿನಲ್ಲಿ ಭಾನುವಾರ ಸುರಿದ ಅಕಾಲಿಕ ಮಳೆಯ ನಂತರ ಸಿಡಿಲು ಬಡಿದು 20 ಜನರು ಮೃತಪಟ್ಟಿದ್ದು ಜೊತೆಗೆ ಹಲವಾರು ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತಿನಲ್ಲಿ ಭಾನುವಾರ ಬೆಳಗ್ಗೆಯಿಂದ ಸುರಿದ ಅಕಾಲಿಕ ಮಳೆ ಹಲವಾರು ಅನಾಹುತಗಳನ್ನು ತಂದಿದ್ದು. ಹಲವು ಪ್ರದೇಶಗಳಲ್ಲಿ ಸಿಡಿಲು ಬಡಿದು ಪ್ರಾಣಹಾನಿಯೂ ಸಂಭವಿಸಿದ ವರದಿಯಾಗಿದೆ. ಸೌರಾಷ್ಟ್ರದ ಬಹುತೇಕ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು ಬೆಳೆಗಳು ಹಾನಿಯಾಗಿವೆ ಎನ್ನಲಾಗಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಗುಜರಾತ್‌ನಲ್ಲಿ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಾಗಿದೆ. ವಿಪತ್ತು ನಿರ್ವಹಣಾ ಇಲಾಖೆಯ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಅಕಾಲಿಕ ಮಳೆಯಿಂದಾಗಿ ಸಿಡಿಲು ಬಡಿದು ಒಟ್ಟು ೨೦ ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಅಷ್ಟುಮಾತ್ರವಲ್ಲದೆ 40 ಪ್ರಾಣಿಗಳೂ ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ವಿಪತ್ತು ನಿರ್ವಹಣೆಯ ಅಧಿಕಾರಿಗಳ ಪ್ರಕಾರ, ರಾತ್ರಿ 8 ಗಂಟೆಯವರೆಗೆ ಸೂರತ್ ಮತ್ತು ಚುರಾ ತಹಸಿಲ್‌ನಲ್ಲಿ ಸುಮಾರು 4 ಇಂಚು ಮಳೆಯಾಗಿದೆ. ಆಲಿಕಲ್ಲು ಮಳೆಗೆ ಹಲವೆಡೆ ಬೆಳೆ ನಾಶವಾಗಿದೆ. ಸಿಡಿಲು ಬಡಿದು ೨೦ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ದಾಹೋಡ್‌ನಲ್ಲಿ 3, ಭರೂಚ್‌ನಲ್ಲಿ 2, ಸೂರತ್‌ನಲ್ಲಿ 1, ದ್ವಾರಕಾದಲ್ಲಿ 1, ಪಂಚಮಹಲ್‌ನಲ್ಲಿ 1, ಸುರೇಂದ್ರನಗರದಲ್ಲಿ 1, ಅಮ್ರೇಲಿಯಲ್ಲಿ 1, ಖೇಡಾದಲ್ಲಿ 1, ಅಹಮದಾಬಾದ್ ಗ್ರಾಮಾಂತರದಲ್ಲಿ 1, ಸಬರಕಾಂತದಲ್ಲಿ 1, ಬೋಟಾಡ್‌ನಲ್ಲಿ 1 ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ರಾಜ್‌ಕೋಟ್‌ನ ಖಂಡೇರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಲವಾದ ಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಮೀಡಿಯಾ ಬಾಕ್ಸ್ ಮುರಿದುಹೋಗಿದೆ. ಕ್ರೀಡಾಂಗಣದಲ್ಲಿ ಅಂದಾಜು 1.5 ರಿಂದ 2 ಕೋಟಿ ರೂ.ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ವೈಬ್ರಂಟ್ ಗುಜರಾತ್‌ಗಾಗಿ ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರಾಜ್ಯದ ಕೃಷಿ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ರೈತರು ಅನುಭವಿಸಿದ ನಷ್ಟದ ಬಗ್ಗೆ ಚರ್ಚಿಸಿದರು.
ಎಸ್‌ಇಒಸಿ ಮಾಹಿತಿಯ ಪ್ರಕಾರ, ಗುಜರಾತ್‌ನ ಸೂರತ್, ಸುರೇಂದ್ರನಗರ, ಖೇಡಾ, ತಾಪಿ, ಭರೂಚ್ ಮತ್ತು ಅಮ್ರೇಲಿ ಜಿಲ್ಲೆಗಳಲ್ಲಿ 16 ಗಂಟೆಗಳಲ್ಲಿ 50-117 ಮಿಮೀ ಮಳೆ ದಾಖಲಾಗಿದೆ. ಸೋಮವಾರದಿಂದ ಮಳೆಯ ಪ್ರಮಾಣ ಕ್ರಮೇಣ ಇಳಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: Miracle: ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ… ವಿಸ್ಮಯ ಕಣ್ತುಂಬಿಕೊಂಡ ಭಕ್ತರು