Advertisement

ಆಕ್ಸಿಜನ್‌ ಪ್ಲಾಂಟ್‌ ಸ್ಥಾಪನೆಗೆ 20 ದಿನ ಗಡುವು

04:25 PM Aug 07, 2021 | Team Udayavani |

ಹಾಸನ: ಜಿಲ್ಲೆಯ ಎಲ್ಲ 7 ತಾಲೂಕು ಆಸ್ಪತ್ರೆಗಳಲ್ಲೂ ಇನ್ನು 20 ದಿನಗಳೊಳಗೆ ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣ ಪೂರ್ಣಗೊಳ್ಳಬೇಕು. ಕೋವಿಡ್‌ ಸೋಂಕಿತರಿಗೆ ನೀಡುವ ಔಷಧಿಗಳನ್ನು ದಾಸ್ತಾನೀಕರಿಸಿಕೊಳ್ಳಬೇಕು ಎಂದು ಕೋವಿಡ್‌ ನಿಯಂತ್ರಣ ಮತ್ತು
ಅತಿವೃಷ್ಟಿ ಹಾನಿ ಪರಿಹಾರದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್‌ ನಿಯಂತ್ರಣ ಮತ್ತು ಅತಿವೃಷ್ಟಿ ಹಾನಿ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ
ಅವರು, ಜಿಲ್ಲೆಯಲ್ಲಿ ಪ್ರತಿ ದಿನವೂ 100 ಕ್ಕಿಂತಲೂ ಹೆಚ್ಚು ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹಾಗಾಗಿ ಕೋವಿಡ್‌
3ನೇ ಅಲೆ ನಿಯಂತ್ರಣಕ್ಕೆ ಈಗಿನಿಂದಲೇ ಕಠಿಣ ಕ್ರಮಗಳು ಹಾಗೂ ಚಿಕಿತ್ಸಾ ವ್ಯವಸ್ಥೆಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕಾಮಗಾರಿ ಶೀಘ್ರವೇ ಆರಂಭ: ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪದನಾ ಘಟಕಗಳ ನಿರ್ಮಾಣದ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್‌ ಅವರು,ಹೊಳೆನರಸೀಪುರ,ಚನ್ನರಾಯಪಟ್ಟಣ,ಅರಸೀಕೆರೆ, ಸಕಲೇಶಪುರ ಆಸ್ಪತ್ರೆಗಳಲ್ಲಿ ಈಗಾಗಲೇ ಆಕ್ಸಿಜನ್‌ ಪ್ಲಾಂಟ್‌ಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಅರಕಲಗೂಡು, ಬೇಲೂರು ತಾಲೂಕು ಆಸ್ಪತ್ರೆಗಳಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿದೆ. ಆಲೂರಿನಲ್ಲಿ ಎದುರಾಗಿದ್ದ ಜಾಗದ ಸಮಸ್ಯೆ ಪರಿಹಾರವಾಗಿದ್ದು, ಅಲ್ಲಿಯೂ ಆಕ್ಸಿಜನ್‌ ಪ್ಲಾಂಟ್‌ ಸ್ಥಾಪನೆಯ ಕಾಮಗಾರಿ ಶೀಘ್ರವೇ ಆರಂಭಿಸಲಾಗುವುದು ಎಂದರು.

ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್: ಕಂಚು ಗೆದ್ದ ಕುಸ್ತಿಪಟು ಭಜರಂಗ್ ಪೂನಿಯಾ

ಹಿಮ್ಸ್‌ನಲ್ಲಿ 20 ವೆಂಟಿಲೇಟರ್ ವ್ಯವಸ್ಥೆ: ಎಲ್ಲ ತಾಲೂಕು ಆಸ್ಪತ್ರೆಗಳ ಆಕ್ಸಿಜನ್‌ ಪ್ಲಾಂಟ್‌ಗಳಿಗೂ 125 ಕೆ.ವಿ.ಜನರೇಟರ್‌ಗಳನ್ನೂ
ಅಳವಡಿಸಲಾಗುತ್ತಿದೆ. ಗುಣಮಟ್ಟದ ಕಿರ್ಲೋಸ್ಕರ್‌ ಕಂಪನಿಯ ಜನರೇಟರ್‌ಗಳನ್ನು ಖರೀದಿಸಲಾಗುತ್ತಿದೆ ಎಂದ ಡಾ.ಸತೀಶ್‌ ಕುಮಾರ್‌
ಅವರು, ಸಮುದಾಯ ಆಸ್ಪತ್ರೆಗಳಲ್ಲೂ ಆಕ್ಸಿಜನ್‌ ಅಳವಡಿಕೆಯ ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ ತಲಾ 5
ಮಕ್ಕಳ ವೆಂಟಿಲೇಟರ್, ಹಿಮ್ಸ್‌ನಲ್ಲಿ 20 ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಮಕ್ಕಳಿಗಾಗಿಯೇ 200 ಹಾಸಿಗೆಗಳ ವಾರ್ಡ್‌: ಹಿಮ್ಸ್‌ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್‌ ಮತ್ತು ಜಿಲ್ಲಾ ಸರ್ಜನ್‌ ಡಾ.ಕೃಷ್ಣಮೂರ್ತಿ ಮಾಹಿತಿ ನೀಡಿ, ಹಿಮ್ಸ್‌ನಲ್ಲಿ ಹೆಚ್ಚುವರಿ ಆಕ್ಸಿಜನ್‌ ಪ್ಲಾಂಟ್‌ ಸಿದ್ಧವಾಗಿದೆ. ಎರಡು ಆಕ್ಸಿಜನ್‌ ಪ್ಲಾಂಟ್‌ಗಳಿಂದ 600 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್‌ ಪ್ಲಾಂಟ್‌ಗಳಲ್ಲಿ ದೋಷ ಕಾಣಿಸಿಕೊಂಡ ಸಂದರ್ಭದಲ್ಲಿ ಕನಿಷ್ಠ4 ರಿಂದ5 ಗಂಟೆಗಳ ವರೆಗೆ ತುರ್ತು ಬಳಕೆಗಾಗಿ 400 ಜಂಬೋ ಸಿಲಿಂಡರ್‌ಗಳ ದಾಸ್ತಾನು ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಮಕ್ಕಳಿಗಾಗಿಯೇ200 ಹಾಸಿಗೆಗಳ ವಾರ್ಡ್‌ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಅರಸೀಕೆರೆ ಗಡಿಯಲ್ಲಿ ಚೆಕ್‌ಪೋಸ್ಟ್‌: ಅರಸೀಕೆರೆ ಮತ್ತು ಚನ್ನರಾಯಪಟ್ಟಣಕ್ಕೆ ಮುಂಬೈನಿಂದ ಹೆಚ್ಚು ಜನರು ಬರುತ್ತಾರೆ. ಅವರ ಪರೀಕ್ಷೆಗಾಗಿ ಗಡಿಯಲ್ಲಿ ಚೆಕ್‌ಪೋಸ್ಟ್‌ ಆರಂಭಿಸಬೇಕು ಎಂದು ಶಾಸಕ ಕೆ. ಎಂ.ಶಿವಲಿಂಗೇಗೌಡ, ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರು ಮನವಿ ಮಾಡಿದರು.

ಶಾಸಕರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈಗ ರೈಲುಗಳಲ್ಲಿ ಮತ್ತು ಬಸ್‌ಗಳಲ್ಲಿ ಬರುವವರ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಖಾಸಗಿ ವಾಹನಗಳಲ್ಲಿ ಬರುವವರ ಪರೀಕ್ಷೆಗಾಗಿ ಅರಸೀಕೆರೆ ತಾಲೂಕಿನ ಗಡಿಯಲ್ಲಿ ಚೆಕ್‌ ಪೋಸ್ಟ್‌ ನಿರ್ಮಿಸಲಾಗುವುದು ಎಂದು ಹೇಳಿದರು. ಶಾಸಕ ಎಚ್‌.ಡಿ.ರೇವಣ್ಣ ಅವರು ವೀಡಿಯೋ ಸಂವಾದ ನಡೆಸಿ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸಾ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿ ಹಾನಿಯ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಅತಿವೃಷ್ಟಿ ಹಾನಿಯ ವರದಿಯನ್ನು ತುರ್ತಾಗಿ ಕೊಡಿ
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಹಾನಿಯ ವರದಿಯನ್ನು ತುರ್ತಾಗಿ ಸಲ್ಲಿಸಬೇಕು ಎಂದು ಸಚಿವ ಗೋಪಾಲಯ್ಯ ಅವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. ಕಳೆದ 3 ವರ್ಷಗಳಿಂದ ಅತಿವೃಷ್ಟಿಯಿಂದ ಕೆರೆಗಳಿಗೆ ಹಾನಿ ಸಂಭವಿಸಿದ್ದರೂ ದುರಸ್ತಿಯಾಗಿಲ್ಲ ಎಂದು ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಗೋಪಾಲಯ್ಯ, ಕೆರೆಗಳದುರಸ್ತಿ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರ ಗಮನಕ್ಕೆ ತಂದು ಅನುದಾನ ಪಡೆಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಕಾರ್ಯಗಳಿಗೆ ಅನುದಾನ ಬಿಡುಗಡೆಯಾದಾಗ ಆದ್ಯತೆ ಮೇರೆಗೆ ಕೆರೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 620 ಶಾಲಾ ಕಟ್ಟಡಗಳ ದುರಸ್ತಿಯಾಗಬೇಕಾಗಿದ್ದು, 35 ಕೋಟಿ ರೂ. ಅಗತ್ಯವಿದೆ. ಈ ಸಂಬಂಧ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಶಾಲಾ ಕಟ್ಟಡಗಳ ದುರಸ್ತಿ ಜೊತೆಗೆ ರಸ್ತೆಗಳು, ಕೆರೆಗಳು, ಆಸ್ಪತ್ರೆ, ಅಂಗನವಾಡಿ ಕಟ್ಟಡಗಳ ದುರಸ್ತಿ ವರದಿಯನ್ನೂ ಕೊಡಿ ಎಂದು ಸಚಿವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು. ಸಭೆಯ ನಂತರ ಸುದ್ದಿಗಾರರೊಂದಿಗೆಮಾತನಾಡಿ,ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 184 ಮನೆಗಳು ಭಾಗಶಃ ಕುಸಿದಿದ್ದು, 22 ಮನೆಗಳು ಸಂಪೂರ್ಣ ಹಾನಿ ಸಂಭವಿಸಿದೆ. ಈಗಾಗಲೇ ಮೊದಲ ಕಂತಿನ ಪರಿಹಾರ ನೀಡಲಾಗಿದೆ.ಆತಿವೃಷ್ಟಿಯ ಹಾನಿ ಅಂದಾಜು ನಡೆಯುತ್ತಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಜಿಲ್ಲೆಯ ಹಾನಿಯ ಅಂದಾಜು ಪೂರ್ಣಗೊಳ್ಳಲಿದೆ ಎಂದರು.

ಹೆಚ್ಚು ಲಸಿಕೆಗೆ ಮನವಿ
ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾತನಾಡಿ, ಜಿಲ್ಲೆಯಲ್ಲಿಕಳೆದ ಒಂದು ವಾರದಿಂದ ಕೋವಿಡ್‌ ಪಾಸಿಟಿವಿಟಿ ದರ ಶೇ.2.4ಕ್ಕೇರಿದೆ. ಪ್ರತಿದಿನ 100
ರಿಂದ 130 ಪಾಸಿಟಿವ್‌ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿದಿನ 5000 ದಿಂದ 5500 ಮಂದಿ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ
ಪ್ರತಿದಿನ 35 ಸಾವಿರ ಜನರಿಗೆ ಲಸಿಕೆ ಹಾಕುವ ವ್ಯವಸ್ಥೆಯಿದೆ. ಆದರೆ ಲಸಿಕೆ ಪೂರೈಕೆಯಾಗುತ್ತಿಲ್ಲ. ಜಿಲ್ಲೆಗೆ ಹೆಚ್ಚು ಕೋವಿಡ್‌ ಲಸಿಕೆ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.

ಸಿಟಿ ಸ್ಕ್ಯಾನ್‌ ಗೆ ಬೇಡಿಕೆ
ಅರಸೀಕೆರೆಯ ತಾಲೂಕು ಆಸ್ಪತ್ರೆಗೆ ಸಿಟಿ ಸ್ಕ್ಯಾನ್‌ ಮಂಜೂರು ಮಾಡಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಮನವಿ ಮಾಡಿದರು. ಸಕಲೇಶಪುರ ಆಸ್ಪತ್ರೆಗೂ ಸಿಟಿಸ್ಕ್ಯಾನ್‌ ತುರ್ತು ಅಗತ್ಯವಿದೆ ಎಂದು ಶಾಸಕ ಎಚ್‌.ಕೆ.ಕುಮಾರಸ್ವಾಮಿ ಒತ್ತಾಯಿಸಿದರು. ಸರ್ಕಾರಕ್ಕೆ ಸಲ್ಲಿಕೆಯಾಗಿರುವ 20 ಕೋಟಿ ರೂ. ಪ್ರಸ್ತಾವನೆ ಮಂಜೂರಾದರೆ ಆದ್ಯತೆ ಮೇರೆಗೆ ಸಿಟಿ ಸ್ಕ್ಯಾನ್‌ ಯಂತ್ರಗಳ ಪೂರೈಕೆ
ಮಾಡಲಾಗುವುದು ಎಂದು ಸಚಿವ ಗೋಪಾಲಯ್ಯ ಅವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next