ದೇವನಹಳ್ಳಿ: ಸಿನಿಮಾ ಮಾದರಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಕೊಕೇನ್ ತುಂಬಿದ ಕ್ಯಾಪ್ಸೂಲ್‌ಗಳನ್ನು ಹೊಟ್ಟೆ ಯಲ್ಲಿ ತುಂಬಿಕೊಂಡು ಬೆಂಗಳೂರಿಗೆ ಬಂದಿದ್ದ ವಿದೇಶಿ ಪ್ರಜೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಆತನಿಂದ ಕೋಟ್ಯಂತರ ರೂ. ಮೌಲ್ಯದ 2 ಕೆ.ಜಿ. ಕೊಕೇನ್ ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಅದಿಸ್ ಅಬಾಬದಿಂದ ಇಥಿಯೋಪಿಯಾ ಏರ್‌ಲೈನ್ಸ್ ನಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿದ್ದ ಆರೋಪಿಯ ಹೊಟ್ಟೆ ಊದಿಕೊಂಡಿದ್ದು, ವಿಭಿನ್ನವಾಗಿ ನಡೆಯುತ್ತಿದ್ದ. ಅದನ್ನು ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು, ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಆಗ ಹೊಟ್ಟೆಯಲ್ಲಿ ಡ್ರಗ್ಸ್ ಕ್ಯಾಪ್ಸೂಲ್‌ಗಳನ್ನು ನುಂಗಿರುವುದಾಗಿ ಹೇಳಿಕೆ ನೀಡಿದ್ದಾನೆ. ಬಳಿಕ ಆತನನ್ನು ವೈದ್ಯರ ಬಳಿ ಕರೆದೊಯ್ದು ಸ್ಕ್ಯಾನ್ ಮಾಡಿದಾಗ ಹತ್ತಾರು ಕ್ಯಾಪ್ಸೂಲ್‌ಗಳು ಹೊಟ್ಟೆಯಲ್ಲಿ ಕಂಡು ಬಂದಿವೆ. ಬಳಿಕ ಶಸ್ತ್ರ ಚಿಕಿತ್ಸೆ ಮೂಲಕ 48ಕ್ಕೂ ಹೆಚ್ಚು ಕ್ಯಾಪ್ಸೂಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಆತನಿಗೆ ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
2 ಕೆ.ಜಿ. ಕೊಕೇನ್: ಆರೋಪಿಯ ಹೊಟ್ಟೆಯಲ್ಲಿ ಪತ್ತೆಯಾದ 48 ಕ್ಯಾಪ್ಸೂéಲ್‌ಗಳಲ್ಲಿ ಬರೋಬರಿ 2 ಕೆ.ಜಿ. ಕೊಕೇನ್ ಪತ್ತೆಯಾಗಿದ್ದು, 20 ಕೋಟಿ ರೂ. ಮೌಲ್ಯ ಎಂದು ಹೇಳಲಾಗಿದೆ. ಆರೋಪಿಯನ್ನು ಸದ್ಯ ವಶಕ್ಕೆ ಪಡೆಯಲಾಗಿದ್ದು, ಯಾರ ಮೂಲಕ ಇಷ್ಟೊಂದು ಪ್ರಮಾಣದಲ್ಲಿ ಡ್ರಗ್ಸ್ ತರಲಾಗಿದೆ ಎಂಬ ತನಿಖೆ ನಡೆಯುತ್ತಿದೆ. ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಪೂರೈಕೆ ಮಾಡಲು ಡ್ರಗ್ಸ್ ತಂದಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಚಿನ್ನ ಆಯ್ತು ಈಗ ಡ್ರಗ್ಸ್ ವಶ:
ಈವರೆಗೆ ಗುದದ್ವಾರ, ತಲೆ ಕೂದಲಲ್ಲಿ, ಷರ್ಟ್ ಕಾಲರ್, ಪರ್ಸ್, ಒಳ ಉಡುಪುಗಳಲ್ಲಿ ಇಟ್ಟುಕೊಂಡು ಬರುತ್ತಿದ್ದ ಚಿನ್ನ ಹಾಗೂ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದಿದ್ದ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಇದೀಗ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಕಳ್ಳ ಸಾಗಣೆ ಪ್ರಕರಣವನ್ನು ಭೇದಿಸಿದ್ದಾರೆ.