Advertisement

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

12:40 AM May 23, 2019 | mahesh |
ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆ ವೇಳೆ ನಡೆದ ಹಿಂಸಾಚಾರವನ್ನು ಗಣನೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌, ಬಿಜೆಪಿ ಅಭ್ಯರ್ಥಿಯೊಬ್ಬರಿಗೆ ಮೇ 28ರವರೆಗೆ ಬಂಧನದಿಂದ ರಕ್ಷಣೆ ನೀಡಿದೆ. ತಮ್ಮ ವಿರುದ್ಧ ರಾಜ್ಯ ಪೊಲೀಸರು ಹಲವು ಪ್ರಕರಣಗಳನ್ನು ದಾಖಲಿಸಿದ್ದು, ತಮಗೆ ಬಂಧನದಿಂದ ರಕ್ಷಣೆ ನೀಡಬೇಕು ಎಂದು ಕೋರಿ ಬರಾಕ್‌ಪೋರ್‌ ಬಿಜೆಪಿ ಅಭ್ಯರ್ಥಿ ಅರ್ಜುನ್‌ ಸಿಂಗ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಅದನ್ನು ಕೋರ್ಟ್‌ ಪುರಸ್ಕರಿಸಿದೆ. ಏ.4ರಿಂದ ಮೇ 20ರ ಅವಧಿಯಲ್ಲಿ ತಮ್ಮ ವಿರುದ್ಧ 20 ಕೇಸುಗಳನ್ನು ದಾಖಲಿಸಲಾಗಿದೆ. ನ್ಯಾಯಾಲಯದಿಂದ ರಕ್ಷಣೆ ಸಿಗದಿದ್ದರೆ ನನ್ನನ್ನು ಬಂಧಿಸಲಾಗುತ್ತದೆ. ನಾಳೆ ಮತ ಎಣಿಕೆ ವೇಳೆ ನಾನು ಸ್ಥಳದಲ್ಲಿರಬೇಕಾಗುತ್ತದೆ ಎಂದು ಅವರು ಕೋರಿದ್ದರು.

ಆದೇಶ ಕಾಯ್ದಿರಿಸಿದ ನ್ಯಾಯಾಲಯ
ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಹತ್ಯೆಯ ದಲ್ಲಾಳಿ’ ಎಂದು ಕರೆದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ಗಾಂಧಿ ವಿರುದ್ಧ ಎಫ್ಐಆರ್‌ ದಾಖಲಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ತೀರ್ಪನ್ನು ದೆಹಲಿಯ ಕೋರ್ಟ್‌ ಜೂ.7ಕ್ಕೆ ಕಾಯ್ದಿರಿಸಿದೆ. ವಕೀಲ ಜೋಗಿಂದರ್‌ ಎಂಬವರು ಈ ಕುರಿತು ದೂರು ದಾಖಲಿಸಿದ್ದರು.

ನಾಯಕರು ಸೂಚಿಸಿದರೆ ಹಿಂಸೆಗೆ ಸಿದ್ಧ: ಘೋಷಣೆ!
ತಮ್ಮ ಮತಗಳ ಸಂರಕ್ಷಣೆಗಾಗಿ ರಕ್ತಪಾತ ಮಾಡಲೂ ಸಿದ್ಧ ಎಂಬ ವಿವಾದಾತ್ಮಕ ಹೇಳಿಕೆಯನ್ನು ರಾಷ್ಟ್ರೀಯ ಲೋಕ ಸಮತಾ ಪಾರ್ಟಿಯ (ಆರ್‌ಎಲ್ಎಸ್‌ಪಿ) ಮುಖ್ಯಸ್ಥ ಉಪೇಂದ್ರ ಖುಶ್ವಾಹ ನೀಡಿದ ಬೆನ್ನಲ್ಲೇ, ಬಿಹಾರದ ಬಕ್ಸಾರ್‌ ಜಿಲ್ಲೆಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿ ರಾಮಚಂದ್ರ ಯಾದವ್‌ ಅವರು, ”ಮಹಾಘಟಬಂಧನದ ನಾಯಕರಾದ ಮಾಯಾವತಿ, ಅಖೀಲೇಶ್‌ ಯಾದವ್‌ ಅಥವಾ ಮಮತಾ ಬ್ಯಾನರ್ಜಿಯವರು ನನಗೆ ಒಂದು ಮಾತು ಹೇಳಿದರೂ ಸಾಕು, ನಾನು ಮತ್ತು ನನ್ನ ಬೆಂಬಲಿಗರು ಶಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತೇವೆ” ಎಂದಿದ್ದಾರೆ. ಜತೆಗೆ, ಮಹಾಘಟಬಂಧನದ ಎಲ್ಲಾ ನಾಯಕರೂ ಉಪೇಂದ್ರ ಖುಶ್ವಾಹ ಅವರ ಹೇಳಿಕೆಗೆ ಬದ್ಧರಾಗಿರಬೇಕೆಂದೂ ಆಗ್ರಹಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next