ಅದೊಂದು ಸಾಕು ಪ್ರಾಣಿ ಮತ್ತು ಬಾಲಕನೊಬ್ಬನ ಚಿತ್ರ. ಅಲ್ಲಿ ಕೆಲಸ ಮಾಡಿರುವ ಬಹುತೇಕರಿಗೂ ಅದು ಮೊದಲ ಚಿತ್ರ. ಏಕಕಾಲಕ್ಕೆ ಆರು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಅಷ್ಟೇ ಅಲ್ಲ, ಒಂದಲ್ಲ, ಎರಡಲ್ಲ, ಬರೋಬ್ಬರಿ ಇಪ್ಪತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದೆ!
ಇಷ್ಟು ಹೇಳಿದ ಮೇಲೆ ಆ ಚಿತ್ರದ ಬಗ್ಗೆ ಕುತೂಹಲ ಇಲ್ಲದಿದ್ದರೆ ಹೇಗೆ? ನಿಜ, ಇದು ಒಂದು ನಾಯಿ ಮತ್ತು ಬಾಲಕನೊಬ್ಬನ ಕಥಾಹಂದರ ಹೊಂದಿರುವ ಚಿತ್ರ. ಅದಕ್ಕೆ ಇಟ್ಟಿರುವ ಹೆಸರು “ಬೌ ಬೌ’. ರಿಲೀಸ್‌ಗೆ ಸಿದ್ಧಗೊಂಡಿರುವ ಈ ಚಿತ್ರವನ್ನು ಎಸ್.ಪ್ರದೀಪ್ ಕಿಲಿಕರ್ ನಿರ್ದೇಶಿಸಿದ್ದಾರೆ. ಲಂಡನ್ ಟಾಕೀಸ್ ಮೂಲಕ ಕೆ.ನಟರಾಜನ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡು ಹಾಗು ಟ್ರೇಲರ್ ತೋರಿಸಿದ ಚಿತ್ರತಂಡ, ಪತ್ರಕರ್ತರ ಜೊತೆ ಸಿನಿಮಾ ಬಗ್ಗೆ ಹೇಳಿಕೊಂಡಿತು.
ಅಂದು ಮೊದಲು ಮಾತು ಶುರುಮಾಡಿದ್ದು ನಿರ್ದೇಶಕ ಎಸ್.ಪ್ರದೀಪ್ ಕಿಲಿಕರ್. “ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಇಲ್ಲಿ ಬಾಲಕ ಮತ್ತು ನಾಯಿ ನಡುವಿನ ಕಥೆ ಹೈಲೈಟ್. ಹಾಗೆ ನೋಡಿದರೆ, ನಾಯಿ ಕೂಡ ಚಿತ್ರದ ಹೀರೋ ಅಂದರೆ ತಪ್ಪಿಲ್ಲ. ಅದಕ್ಕೂ ಒಂದು ಹಾಡು ಇಡಲಾಗಿದೆ. ಅದರ ಭಾವನೆ, ಯಾತನೆ, ನೋವು-ನಲಿವುಗಳು ಹೇಗೆಲ್ಲಾ ಇರುತ್ತವೆ ಎಂಬುದನ್ನು ತೋರಿಸಲಾಗಿದೆ. ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಸೆಕೆಂಡ್ ಹಾಫ್ನಲ್ಲಿ ಸುಮಾರು 30 ನಿಮಿಷ ಸಿನಿಮಾ ಸೈಲೆನ್ಸ್ ಆಗಿರುತ್ತೆ. ಇದು ಕಮರ್ಷಿಯಲ್ ಸಿನಿಮಾನಾ ಎನ್ನುವ ಪ್ರಶ್ನೆಗೆ, ಆ ಗೊಂದಲ ಇಲ್ಲದಂತೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಚಿತ್ರ ಮಾಡಿದ್ದೆವೆ. ಈಗಾಗಲೇ ಚಿತ್ರ ಹಲವು ದೇಶಗಳಲ್ಲಿ ಪ್ರದರ್ಶನ ಕಂಡಿದೆ. ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು, ಹಲವು ದೇಶಗಳಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಇದೊಂದು ಭಾವುಕ ಪಯಣದ ಕಥೆ. ಕಳೆದ ಎರಡುವರ್ಷಗಳ ಶ್ರಮ ಇಲ್ಲಿದೆ. ಇಲ್ಲಿ ಎಲ್ಲವೂ ಫ್ರೆಶ್ ಎನಿಸುವ ದೃಶ್ಯಗಳಿವೆ. ಚಿತ್ರದಲ್ಲಿ ನುರಿತು ಕಲಾವಿದರು ಇರದಿದ್ದರೂ, ಕಥೆಯೇ ಇಲ್ಲಿ ಪ್ರಧಾನ ಪಾತ್ರವಹಿಸಿದೆ. ಮನರಂಜನೆ ಜೊತೆ ಮಾನವೀಯ ಮೌಲ್ಯ ಸಾರುವ ಅಂಶಗಳು ಇಲ್ಲಿದ್ದು, ಸಿನಿಮಾ ನೋಡಿ ಹೊರಬಂದವರಿಗೆ ಹೊಸ ಫೀಲ್ ಸಿಗಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಬೆಂಗಾಲಿ ಭಾಷೆಯಲ್ಲೂ ಚಿತ್ರ ತೆರೆಗೆ ಬರಲಿದೆ’ ಎಂದು ವಿವರ ಕೊಟ್ಟರು ನಿರ್ದೇಶಕ ಪ್ರದೀಪ್ ಕಿಲಿಕರ್.
ಚಿತ್ರದ ಪ್ರಮುಖ ಆಕರ್ಷಣೆಯಾಗಿರುವ ಮಾಸ್ಟರ್ ಅಹಾನ್‌ಗೆ ಇದು ಮೊದಲ ಅನುಭವ. ಈ ಚಿತ್ರ ಮಾಡುವಾಗ, ಅಹಾನ್, ಕೇವಲ ಎಲ್‌ಕೆಜಿ ಓದುತ್ತಿದ್ದನಂತೆ. ಈಗ 3ನೇ ತರಗತಿ ಓದುತ್ತಿದ್ದಾನೆ. ತನ್ನ ಚಿತ್ರದ ಬಗ್ಗೆ ಅಹಾನ್ ಹೇಳಿದ್ದಿಷ್ಟು. “ನನಗೆ ಮೂಡ್ ಇದ್ದಾಗ ಸಿನಿಮಾ ಮಾಡುತ್ತಿದ್ದರು. ನನ್ನ ಜೊತೆ ಇದ್ದ ನಾಯಿ ಕೂಡ ಒಂದೊಂದು ಸಲ ಮಾತು ಕೇಳುತ್ತಿರಲಿಲ್ಲ. ಅದರ ಮೂಡ್ ಸರಿಹೋಗುವ ತನಕ ಕಾದು, ಆಮೇಲೆ ಸೀನ್ ಶೂಟ್ ಮಾಡುತ್ತಿದ್ದರು. ಇಲ್ಲಿ ಬೇಬಿ ಡಾಗ್ ಜೊತೆ ಕಾಲ ಕಳೆದದ್ದು ಮರೆಯುವಂತಿಲ್ಲ. ಡೈರೆಕ್ಟರ್ ಅಂಕಲ್ ಹೇಳಿದ್ದನ್ನಷ್ಟೇ ಮಾಡುತ್ತಿದ್ದೆ. ಇಲ್ಲಿ ನನಗೂ ಒಂದು ಹಾಡಿದೆ, ನನ್ನ ಜೊತೆಗಿರುವ ನಾಯಿಗೂ ಒಂದು ಹಾಡಿದೆ’ ಎಂದು ಹೇಳಿ ಮೈಕ್ ನಿರ್ಮಾಪಕರ ಕೈಗಿಟ್ಟು ಸುಮ್ಮನಾದರು ಅಹಾನ್.
ನಿರ್ಮಾಪಕ ನಟರಾಜನ್ ಅವರಿಗೆ ಇದು ಕನ್ನಡದಲ್ಲಿ ಮೊದಲ ನಿರ್ಮಾಣದ ಚಿತ್ರ. ಹಾಗಂತ ಅವರಿಗೆ ನಿರ್ಮಾಣ ಹೊಸದಲ್ಲ. ಅವರ ತಂದೆಯ ಕಾಲದಿಂದಲೂ ನಿರ್ಮಾಣ ಮಾಡಿಕೊಂಡು ಬಂದಿದ್ದಾರೆ. ಡಾ.ರಾಜಕುಮಾರ್ ಅವರ ಅನೇಕ ಸಿನಿಮಾಗಳನ್ನು ತಮಿಳಿನಲ್ಲಿ ರಿಮೇಕ್ ಮಾಡಿದ ಹೆಮ್ಮೆ ಇವರದು. “ಆರು ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ’ ಎಂದರು ಅವರು.
ಅಂದು ಮಂಡಳಿ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷರಾದ ಉಮೇಶ್ ಬಣಕಾರ್, ಎನ್.ಎಂ.ಸುರೇಶ್ ಇತರರು ಇದ್ದರು.