ಮಧ್ಯಪ್ರದೇಶ: ಭೂ ವಿವಾದಕ್ಕೆ ಸಂಬಂಧಿಸಿ ಗುಂಪೊಂದು ಬೇರೆಯವರ ಜಮೀನಿನಲ್ಲಿ ರಸ್ತೆ ನಿರ್ಮಿಸಲು ಮುಂದಾಗಿ ಇದಕ್ಕೆ ಒಪ್ಪಿಗೆ ಸಿಗದೇ ಇದ್ದಾಗ ಆ ಜಮೀನಿಗೆ ಸಂಬಂಧಿಸಿದ ಇಬ್ಬರು ಮಹಿಳೆಯರನ್ನು ಜೀವಂತ ಸಮಾಧಿ ಮಾಡಲು ಮುಂದಾಗಿರುವ ಹೇಯ ಕೃತ್ಯವೊಂದು ನಡೆದಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಬೆಚ್ಚಿ ಬೀಳಿಸುವಂತಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ರೇವಾ ಜಿಲ್ಲೆಯ ಹಿನೌಟಾ ಗ್ರಾಮದಲ್ಲಿ, ಮಮತಾ ಪಾಂಡೆ ಮತ್ತು ಆಶಾ ಪಾಂಡೆ ಎಂಬ ಇಬ್ಬರು ಮಹಿಳೆಯರನ್ನು ಜೀವಂತ ಸಮಾಧಿ ಮಾಡಲು ದುಷ್ಕರ್ಮಿಗಳ ಗುಂಪು ಮುಂದಾಗಿದೆ.
ಏನಿದು ವಿವಾದ:
ಹಿನೌಟಾ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಭೂ ವಿವಾದ ಈ ಹಿಂದೆಯೇ ಇತ್ತು ಎನ್ನಲಾಗಿದ್ದು ಇದೀಗ ಒಂದು ಗುಂಪು ತಮ್ಮ ಜಮೀನಿಗೆ ರಸ್ತೆ ನಿರ್ಮಿಸಲು ಮುಂದಾಗಿದ್ದು ಇದಕ್ಕೆ ಇನ್ನೊಂದು ಗುಂಪು ವಿರೋಧ ವ್ಯಕ್ತಪಡಿಸಿದೆ ಕಾರಣ ತಮ್ಮ ಜಮೀನಿನ ಮೇಲೆಯೇ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ನಡುವೆ ರಸ್ತೆ ಕಾಮಗಾರಿಯನ್ನು ನಡೆಸಲು ಇನ್ನೊಂದು ಗುಂಪು ತಯಾರಿ ನಡೆಸಿದ್ದು ಟಿಪ್ಪರ್ ಮೂಲಕ ಕಲ್ಲು ಮಣ್ಣುಗಳನ್ನು ತಂದು ಇನ್ನೊಂದು ಗುಂಪಿನ ಜಮೀನಿನ ಮೇಲೆ ಹಾಕಲು ತಯಾರಿ ನಡೆಸುತ್ತಿರುವ ವೇಳೆ ಮಮತಾ ಪಾಂಡೆ ಮತ್ತು ಆಶಾ ಪಾಂಡೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ವಿಚಾರವನ್ನು ಟಿಪ್ಪರ್ ಚಾಲಕ ಭೂ ಮಾಲಿಕನಿಗೆ ತಿಳಿಸಿದ್ದಾನೆ ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ ತಡೆಯಲು ಬಂದವರ ಮೇಲೆ ಮಣ್ಣು ಸುರಿಯಲು ಹೇಳಿದ್ದಾನೆ ಅದರಂತೆ ಟಿಪ್ಪರ್ ಚಾಲಕ ಪ್ರತಿಭಟನೆ ಮಾಡುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಕಲ್ಲು ಮಣ್ಣುಗಳನ್ನು ತಂದು ಸುರಿದಿದ್ದಾನೆ ಇದರಿಂದ ಇಬ್ಬರ ದೇಹದ ಮುಕ್ಕಾಲು ಭಾಗ ಮಣ್ಣಿನಿಂದ ಸಮಾಧಿಯಾಗಿದ್ದರೆ. ಅಷ್ಟೋತ್ತಿಗಾಗಲೇ ಅಲ್ಲಿದ್ದ ಇತರ ಮಂದಿ ಬಂದು ಮಹಿಳೆಯರ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಓರ್ವ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಾರೆ, ಕೂಡಲೇ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿ ಬಳಿಕ ಮನೆಗೆ ಕರೆ ತಂದಿದ್ದಾರೆ.