ನವದೆಹಲಿ: ಭಾರತೀಯ ನೌಕಾಪಡೆಯಲ್ಲಿ ಲಿಂಗ ಸಮಾನತೆಯ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದ್ದು, ಈ ನಿಟ್ಟಿನಲ್ಲಿ ನೌಕಾಸೇನೆಯ ಯುದ್ಧದ ಹಡಗಿನಲ್ಲಿ ಕರ್ತವ್ಯ ನಿರ್ವಹಿಸಲು ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳಾದ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿದೆ.
ಭಾರತೀಯ ನೌಕಾಪಡೆಯಲ್ಲಿ ಹಲವಾರು ಮಹಿಳಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಈವರೆಗೆ ದೀರ್ಘಾವಧಿಯ ಯುದ್ಧದ ಹಡಗಿನಲ್ಲಿ ಕರ್ತವ್ಯ ನಿರ್ವಹಿಸಲು ನೇಮಕ ಮಾಡುತ್ತಿರಲಿಲ್ಲವಾಗಿತ್ತು. ಮಹಿಳಾ ಸಿಬ್ಬಂದಿಯ ಖಾಸಗಿತನ ಕೊರತೆ ಮತ್ತು ಮಹಿಳೆಯರ ಬಾತ್ ರೂಂ ಸಮಸ್ಯೆ ಪ್ರಮುಖ ಕಾರಣವಾಗಿತ್ತು ಎಂದು ವರದಿ ವಿವರಿಸಿದೆ.
ಇಬ್ಬರೂ ನೌಕಾಪಡೆಯ ಮಲ್ಟಿ ರೋಲ್ ಹೆಲಿಕಾಪ್ಟರ್ ಗಳಲ್ಲಿ ಸೋನಾರ್ ಕನ್ಸೋಲ್ ಗಳು ಮತ್ತು ಇಂಟೆಲಿಜೆನ್ಸ್ ಕಣ್ಗಾವಲು ಮತ್ತು ಮರುಪರಿಶೀಲನೆ ತರಬೇತಿ ಪಡೆದಿದ್ದಾರೆ. ಭಾರತೀಯ ನೌಕಾಪಡೆಯ 17 ಅಧಿಕಾರಿಗಳ ತಂಡದಲ್ಲಿ ಸಬ್ ಲೆಫ್ಟಿನೆಂಟ್ ಕುಮುದಿನಿ, ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಸೇರಿದಂತೆ ನಾಲ್ವರು ಮಹಿಳೆಯರು, ಭಾರತೀಯ ಕರಾವಳಿ ಪಡೆಯ ಮೂರು ಅಧಿಕಾರಿಗಳು ಭಾರತೀಯ ನೌಕಾಪಡೆಯ “ಅಬ್ಸರ್ಸ್ ವರ್ ಕೋರ್ಸ್” ನಲ್ಲಿ ತೇರ್ಗಡೆ ಹೊಂದಿದ್ದು, ಸೋಮವಾರ ಕೊಚ್ಚಿ ಐಎನ್ ಎಸ್ ಗರುಡದಲ್ಲಿ ಪ್ರಮಾಣಪತ್ರ ನೀಡಿ ಗೌರವಿಸಲಾಗಿತ್ತು.
ಸಬ್ ಲೆಫ್ಟಿನೆಂಟ್ ಕುಮುದಿನಿ ಹಾಗೂ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ನೌಕಾಪಡೆಯ ಅತ್ಯಾಧುನಿಕ ಎಂಎಚ್-60 ಆರ್ ಹೆಲಿಕಾಪ್ಟರ್ ಹಾರಾಟದ ತರಬೇತಿ ಪಡೆದಿದ್ದಾರೆ. ಈ ಕುರಿತು ಸಮಾರಂಭದಲ್ಲಿ ಮಾತನಾಡಿದ ಅಡ್ಮಿರಲ್ ಆ್ಯಂಟನಿ ಜಾರ್ಜ್, ನೂತನ ಪದವಿ ಪಡೆದ ಅಧಿಕಾರಿಗಳನ್ನು ಅಭಿನಂದಿಸಿದರು. ಅಲ್ಲದೆ ಇದೊಂದು ಲ್ಯಾಂಡ್ ಮಾರ್ಕ್ ಸಮಾರಂಭವಾಗಿದೆ. ಯಾಕೆಂದರೆ ಮೊದಲ ಬಾರಿಗೆ ಮಹಿಳೆಯರು ಯುದ್ಧ ಹೆಲಿಕಾಪ್ಟರ್ ಚಾಲನೆಯ ತರಬೇತಿ ಪಡೆದಿದ್ದಾರೆ. ಈ ಮೂಲಕ ಭಾರತೀಯ ನೌಕಪಡೆಯ ಯುದ್ಧ ವಿಮಾನದಲ್ಲಿ ಕರ್ತವ್ಯ ನಿರ್ವಹಿಸಲು ಹಾದಿ ಸುಗಮವಾದಂತಾಗಿದೆ ಎಂದು ತಿಳಿಸಿದ್ದರು.