ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2 ವಾರ್ಡ್‌ಗಳು ಮತ್ತು ಬೆಂಗಳೂರು ನಗರ ಜಿಲ್ಲೆ ಹೆಬ್ಬಗೋಡಿ ನಗರಸಭೆಯ ಒಂದು ವಾರ್ಡ್‌ಗೆ ಮೇ 29ರಂದು ಉಪ ಚುನಾವಣೆ ನಡೆಯಲಿದೆ.
ಉಪ ಚುನಾವಣೆ ನಡೆಯಲಿರುವ ವಾರ್ಡ್‌ಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಅದು ಮೇ 31ರವರೆಗೆ ಜಾರಿಯಲ್ಲಿ ಇರಲಿದೆ. ಈ ಉಪ ಚುನಾವಣೆಗಳಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮೇ 5ರಂದು ಅಧಿಸೂಚನೆ ಹೊರಡಿಸಲಿದ್ದಾರೆ.
ಬಿಬಿಎಂಪಿಯ ಸಗಾಯಿಪುರ ಹಾಗೂ ಕಾವೇರಿಪುರ ವಾರ್ಡ್‌ನ ಸದಸ್ಯರು ನಿಧನ ಹೊಂದಿದ್ದು, ಹೆಬ್ಬಗೋಡಿ ನಗರಸಭೆ ವಾರ್ಡ್ ಸಂಖ್ಯೆ 26ರ ಸದಸ್ಯರು ರಾಜೀನಾಮೆ ನೀಡಿದ್ದರಿಂದ ಆ ಸ್ಥಾನಗಳು ತೆರವಾಗಿದ್ದರಿಂದ ಉಪ ಚುನಾವಣೆಗೆ ಘೋಷಣೆಯಾಗಿದೆ.
ಇಬ್ಬರು ಸದಸ್ಯರ ಅಕಾಲಿಕ ಸಾವು: ಕಾವೇರಿಪುರ ವಾರ್ಡ್ ಪಾಲಿಕೆ ಸದಸ್ಯೆ ಹಾಗೂ ಉಪಮೇಯರ್ ಆಗಿದ್ದ ರಮೀಳಾ ಉಮಾಶಂಕರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಜತೆಗೆ ಸಗಾಯಪುರದ ಪಕ್ಷೇತರ ಸದಸ್ಯರಾಗಿದ್ದ ಏಳುಮಲೈ ಅವರು ಮೂಗಿನಲ್ಲಿರುವ ಗುಳ್ಳೆಗೆ ಚಿಕಿತ್ಸೆ ಪಡೆಯಲು ಹೋಗಿ ಕೋಮಾ ಸ್ಥಿತಿಗೆ ತಲುಪಿ ಮೃತಪಟ್ಟಿದ್ದರು. ಆ ಹಿನ್ನೆಲೆಯಲ್ಲಿ ಎರಡೂ ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದೆ. ಹಿಂದೆ ಲಕ್ಕಸಂದ್ರ ಹಾಗೂ ಬಿನ್ನಿಪೇಟೆಯ ಪಾಲಿಕೆ ಸದಸ್ಯರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು.
Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ವೇಳಾಪಟ್ಟಿ ಪ್ರಕಟಿಸಿದ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ, ಪಾಲಿಕೆಯ ಸಗಾಯಿಪುರ (ವಾರ್ಡ್ ನಂ.60), ಕಾವೇರಿಪುರ (ವಾರ್ಡ್ ನಂ.103) ಹಾಗೂ ಹೆಬ್ಬಗೋಡಿಯ ವಾರ್ಡ್ ನಂ.26ರಲ್ಲಿ ಮೇ 29ರಂದು ಮತದಾನ ನಡೆಯಲಿದೆ.
Related Articles
Advertisement
ಮೈತ್ರಿ ಪಕ್ಷಗಳ ವಾರ್ಡ್‌ಗಳು: ಉಪಚುನಾವಣೆ ಘೋಷಣೆಯಾಗಿರುವ ಎರಡೂ ವಾರ್ಡ್‌ಗಳಲ್ಲಿನ ವಾತಾವರಣ ಮೈತ್ರಿ ಪಕ್ಷಗಳಿಗೆ ಪೂರಕವಾಗಿದೆ. ರಮಿಳಾ ಉಮಾಶಂಕರ್ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು. ಏಳುಮಲೈ ಪಕ್ಷೇತರರಾಗಿ ಗೆದ್ದರೂ ಕಾಂಗ್ರೆಸ್-ಜೆಡಿಎಸ್ ಆಡಳಿತಕ್ಕೆ ಬೆಂಬಲ ನೀಡಿದ್ದರು. ಹೀಗಾಗಿ ಎರಡೂ ವಾರ್ಡ್‌ಗಳಲ್ಲಿ ತಮ್ಮ ಪಕ್ಷದ ಅಥವಾ ಬೆಂಬಲಿತ ಅಭ್ಯರ್ಥಿ ಗೆಲ್ಲಿಸಲು ಮೈತ್ರಿ ಪಕ್ಷಗಳು ಮುಂದಾಗಲಿವೆ ಎನ್ನಲಾಗಿದೆ.
ಉಪಚುನಾವಣೆಯಲ್ಲಿ ಎರಡೂ ವಾರ್ಡ್‌ಗಳನ್ನು ಬಿಜೆಪಿ ತನ್ನ ಹಿಡಿತಕ್ಕೆ ತೆಗೆದುಕೊಂಡರೆ ಕೊನೆಯ ವರ್ಷ ಮೇಯರ್ ಸ್ಥಾನ ಪಡೆಯಲು ತೀವ್ರ ಪೈಪೋಟಿ ನಡೆಯುವ ಸಾಧ್ಯತೆಗಳಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಕೆಲವೇ ಮತಗಳಿಂದ ಮೇಯರ್ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು. ಆ ಹಿನ್ನೆಲೆಯಲ್ಲಿ ಉಪಚುನಾವಣೆ ಎರಡೂ ಪಕ್ಷಗಳಿಗೆ ಮಹತ್ವ ಎನಿಸಿದೆ.
ಮೈತ್ರಿ ಹೋರಾಟ: ರಾಜ್ಯ ಮತ್ತು ಬಿಬಿಎಂಪಿ ಆಡಳಿತದಲ್ಲಿರುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಬಿಎಂಪಿ ಉಪಚುನಾವಣೆಯನ್ನು ಮೈತ್ರಿ ಮೂಲಕವೇ ಎದುರಿಸುವ ಸಾಧ್ಯತೆಗಳಿವೆ. ಅದರಂತೆ ಕಾವೇರಿಪುರ ವಾರ್ಡ್ ಅನ್ನು ಜೆಡಿಎಸ್‌ಗೆ ಮತ್ತು ಸಗಾಯಪುರ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾತ್ರ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಇನ್ನು, ಬಿಜೆಪಿ ಏಕಾಂಗಿ ಹೋರಾಟ ಮಾಡುವುದು ಬಹುತೇಕ ಖಚಿತವಾಗಿದೆ.