ಲೇಹ್ : ಪೂರ್ವ ಲಡ್ಡಾಕ್ ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಲೇಹ್‌ನಲ್ಲಿ ನೆಲೆ ಹೊಂದಿರುವ ಭಾರತೀಯ ಸೇನೆಯ 14ನೇ ಘಟಕದ ಮುಖ್ಯಸ್ಥರಾಗಿರುವ ಇಬ್ಬರು ಲೆಫ್ಟಿನೆಂಟ್ ಜನರಲ್‌ಗಳು ಅದೃಷ್ಟವಶಾತ್ ಬದುಕುಳಿದಿದ್ದಾರೆ.
ಪೂರ್ವ ಲಡ್ಡಾಕ್‌ನ ಸೊಗೋಸ್ತಲು ಹೆಲಿಪಾಡ್‌ನಲ್ಲಿ ನಿಯಂತ್ರಣ ಸಂಬಂಧಿ ತಾಂತ್ರಿಕ ಸಮಸ್ಯೆಗಳಿಗೆ ಗುರಿಯಾಗಿದ್ದ ಸೇನೆಯ ಧ್ರುವ ಲಘು ಹೆಲಿಕಾಪ್ಟರ್‌ನಲ್ಲಿ ಲೆ| ಜನರಲ್ ಎಸ್ ಕೆ ಉಪಾಧ್ಯಾಯ ಮತ್ತು ಅವರೊಂದಿಗೆ ಮೇಜರ್ ಜನರಲ್ ಸವನೀತ್ ಸಿಂಗ್ ಇದ್ದರು. ಸವನೀತ್ ಸಿಂಗ್ ಅವರು ಲೇಹ್‌ನಿಂದ ಸುಮಾರು 40 ಕಿ.ಮೀ.ದ ಸೇನೆಯ 3ನೇ ಇನ್‌ಫ್ಯಾಂಟ್ರಿ ವಿಭಾಗದ ಕಮಾಂಡೆಂಟ್ ಆಗಿರುವರು.
ಲೆ| ಜನರಲ್ ಉಪಾಧ್ಯಾಯ ಮತ್ತು ಮೇಜರ್ ಜನರಲ್ ಸವನೀತ್ ಸಿಂಗ್ ಅವರು ಯಾವುದೇ ಗಾಯಗಳಿಲ್ಲದೆ ಪಾರಾದರು. ಆದರೆ ಅವರೊಂದಿಗೆ ಇದ್ದ ಇತರ ಕೆಲವು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ವರದಿಯಾಗಿದೆ.
ಈ ಸೇನಾ ಹೆಲಿಕಾಪ್ಟರ್ ಪತನಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚುವ ಸಲುವಾಗಿ ತನಿಖೆಗೆ ಆದೇಶಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
2002ರಲ್ಲಿ ಧ್ರುವ ಲಘು ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆಗೊಂಡಂದಿನಿಂದ ಈ ತನಕ ಸುಮಾರು 19 ಅವಘಡಗಳಲ್ಲಿ ಸಂಭವಿಸಿರುವುದು ಗಮನಾರ್ಹವಾಗಿದೆ.