Advertisement
ಬಂಟ್ವಾಳ ತಾಲೂಕು ಕೆದಿಲ ಗ್ರಾಮ ಪಂಚಾಯತಿನ ಪೇರಮೊಗರು ಗ್ರಾಮದ 34 ವರ್ಷದ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಮಡಿಕೇರಿಯ ಲಾಡ್ಜ್ಗೆ ಕರೆದೊಯ್ದು ಹಾಗೂ ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಪೆರಾಜೆಯ ಇಂದಿರಾ ಆವಾಜ್ ಕಾಲನಿಯ 32 ವರ್ಷದ ಯುವತಿಯನ್ನು ಮೈಸೂರಿನ ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಗರ್ಭ ನಿರೋಧಕ ಗುಳಿಗೆ ಎಂದು ನಂಬಿಸಿ ಸೈನೈಡ್ ಮಾತ್ರೆ ನೀಡಿ ಮೋಹನ್‌ಕುಮಾರ್ ಕೊಲೆ ಮಾಡಿರುವುದು ಸಾಬೀತಾಗಿದೆ ಎಂದು ನ್ಯಾಯಾಧೀಶರಾದ ಡಿ.ಟಿ. ಪುಟ್ಟರಂಗ ಸ್ವಾಮಿ ಅವರು ಈ ಶಿಕ್ಷೆ ವಿಧಿಸಿದ್ದಾರೆ.ಮೋಹನ್ ಕುಮಾರ್ ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ಅಲ್ಲಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಮಂಗಳೂರಿನ ನ್ಯಾಯಾಧೀಶರು ಆತನ ವಿಚಾರಣೆ ನಡೆಸಿದರು.
ಬಂಟ್ವಾಳದ ಪೇರಮೊಗರು ಗ್ರಾಮದ ಯುವತಿಯ ಪರಿಚಯವಾದ ಬಳಿಕ ಮೋಹನ್ ಕುಮಾರ್ ಆಕೆಯನ್ನು ಮದುವೆ ಆಗುವುದಾಗಿ ನಂಬಿಸಿ 2009 ಜ. 23ರಂದು ಬೆಳಗ್ಗೆ ಆಕೆಯನ್ನು ಬಿ.ಸಿ.ರೋಡಿಗೆ ಕರೆಸಿದ್ದ. ಅಲ್ಲಿಂದ ಬಸ್‌ನಲ್ಲಿ ಮಡಿಕೇರಿಗೆ ಕರೆದುಕೊಂಡು ಹೋಗಿ ಲಾಡ್ಜ್ನಲ್ಲಿ ಉಳಿದು ಅತ್ಯಾಚಾರ ಎಸಗಿದ್ದ. ಬಳಿಕ ಅದೇ ದಿನ ಮಧ್ಯಾಹ್ನ ಬಳಿಕ ಪಕ್ಕದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದು ಗರ್ಭ ನಿರೋಧಕ ಮಾತ್ರೆ ಎಂದು ನಂಬಿಸಿ ಸೈನೈಡ್ ಗುಳಿಗೆ ನೀಡಿದ್ದ. ಅದನ್ನು ಟಾಯ್ಲೆಟ್‌ಗೆ ಹೋಗಿ ಸೇವಿಸಿದ ಯುವತಿ ಅಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಈ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಮೋಹನ್ ಅಲ್ಲಿಂದ ಯುವತಿಯ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ.
Related Articles
Advertisement
ಒಟ್ಟು 39 ಸಾಕ್ಷಿಗಳು, 37 ದಾಖಲೆಗಳು ಹಾಗೂ 39 ವಸ್ತುಗಳ ವಿಚಾರಣೆಯನ್ನು ನಡೆಸಲಾಗಿತ್ತು.
ಮಡಿಕೇರಿಯ ಪೆರಾಜೆಯ ಯುವತಿಯನ್ನು ಆನಂದ ಎಂದು ಪರಿಚಯಿಸಿ ತಾನು ಕೂಡ ಆಕೆಯ ಜಾತಿಗೆ ಸೇರಿದವನೆಂದು ನಂಬಿಸಿ ಮದುವೆ ಆಗುವುದಾಗಿ ಪುಸಲಾಯಿಸಿ 2009 ಮಾ. 10 ರಂದು ಸುಳ್ಯ ಬಸ್ ನಿಲ್ದಾಣದಿಂದ ಮೈಸೂರಿಗೆ ಕರೆದೊಯ್ದಿದ್ದ. ಅಲ್ಲಿ ಲಾಡ್ಜ್ನಲ್ಲಿ ರೂಂ ಮಾಡಿ ಅತ್ಯಾಚಾರ ಎಸಗಿದ್ದ. ಬಳಿಕ ಪಕ್ಕದ ಬಸ್ ನಿಲ್ದಾಣಕ್ಕೆ ಕರೆದೊಯ್ದು ಗರ್ಭ ನಿರೋಧಕ ಮಾತ್ರೆ ಎಂದು ಹೇಳಿ ಸೈನೈಡ್ ಗುಳಿಗೆ ನೀಡಿದ್ದ. ಟಾಯ್ಲೆಟ್‌ಗೆ ಹೋಗಿ ಸೇವಿಸಿದ ಯುವತಿ ಅಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಆಗ ಮೋಹನ್ ಅಲ್ಲಿಂದ ವಾಪಸ್ ಲಾಡ್ಜ್ಗೆ ತೆರಳಿ ಯುವತಿಯ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. ಯುವತಿಯ ಸಾವಿನ ಬಗ್ಗೆ ಮೈಸೂರು ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಯುವತಿ ನಾಪತ್ತೆ ಕೇಸು ದಾಖಲಾಗಿತ್ತು.
ನ್ಯಾಯಾಲಯವು 44 ಸಾಕ್ಷಿಗಳು, 70 ದಾಖಲೆಗಳು ಮತ್ತು 37 ವಸ್ತುಗಳನ್ನು ಪರಿಶೀಲಿಸಿತ್ತು. ಸಿಐಡಿ ಡಿವೈಎಸ್‌ಪಿ ಪುರುಷೋತ್ತಮ ಅವರು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಶಿಕ್ಷೆಯ ವಿವರಎರಡೂ ಪ್ರಕರಣಗಳಲ್ಲಿ ಕೊಲೆ (ಐಪಿಸಿ ಸೆಕ್ಷನ್ 302) ಪ್ರಕರಣಕ್ಕೆ ಮರಣ ಪರ್ಯಂತ ಜೀವಾವಧಿ ಸಜೆ ಮತ್ತು ತಲಾ 3 ಸಾ. ರೂ. ದಂಡ,ಅತ್ಯಾಚಾರ (ಐಪಿಸಿ ಸೆ. 376) ಮತ್ತು ವಿಷ ಪದಾರ್ಥ ಸೈನೈಡ್ ನೀಡಿ ಕೊಂದ (ಐಪಿಸಿ ಸೆ. 328) ಆರೋಪಕ್ಕೆ ತಲಾ 7 ವರ್ಷ ಕಠಿನ ಶಿಕ್ಷೆ ಮತ್ತು ತಲಾ 3 ಸಾ.ರೂ.ದಂಡ,ಯುವತಿಯರ ಚಿನ್ನಾಭರಣ ಕಳವು (ಐಪಿಸಿ ಸೆ. 392) ಮತ್ತು ಸಾಕ್ಷಿ ನಾಶ ಮಾಡಿದ (ಐಪಿಸಿ ಸೆ. 201) ಮಾಡಿದ ಆರೋಪಕ್ಕೆ ತಲಾ 5 ವರ್ಷ ಕಠಿನ ಸಜೆ ಮತ್ತು ತಲಾ 3 ಸಾ.ರೂ.ದಂಡ,ಮದುವೆ ಆಗುವುದಾಗಿ ನಂಬಿಸಿ ಅಪಹರಣ ಮಾಡಿದ (ಐಪಿಸಿ ಸೆ. 366) ಆರೋಪಕ್ಕೆ 6 ವರ್ಷ ಕಠಿನ ಶಿಕ್ಷೆ ಮತ್ತು 3 ಸಾ. ರೂ. ದಂಡ ಹಾಗೂ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ ಆರೋಪಕ್ಕೆ ತಲಾ 6 ತಿಂಗಳ ಸಜೆಯನ್ನು ವಿಧಿಸಲಾಗಿದೆ. ಎರಡೂ ಪ್ರಕರಣಗಳಲ್ಲಿ ಎಲ್ಲ ಆಪಾದನೆಗಳಿಗಾಗಿ ಆತನಿಗೆ ವಿಧಿಸಲಾಗಿರುವ ದಂಡದ ಒಟ್ಟು ಮೊತ್ತ ತಲಾ 18 ಸಾ.ರೂ.ಆಗಿದೆ.ಎರಡೂ ಪ್ರಕರಣಗಳಲ್ಲಿ ಮೃತ ಯುವತಿಯರ ಕುಟುಂಬಗಳು ಸಂತ್ರಸ್ತರ ಪರಿಹಾರ ಕಾಯ್ದೆಯನ್ವಯ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸೂಕ್ತ ಪರಿಹಾರ ಪಡಯಲು ಅರ್ಹವಾಗಿವೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಐವರು ಯುವತಿಯರ ಸಂಪರ್ಕಿಸಲು ಬಳಸಿದ್ದ ಫೋನ್
ಮಡಿಕೇರಿಯ ಯುವತಿ ಮೈಸೂರಿಗೆ ತೆರಳುವಾಗ ಮೊಬೈಲ್ ಫೋನನ್ನು ಕೊಂಡು ಹೋಗಿದ್ದು,ಆದನ್ನು ಆಕೆಯನ್ನು ಕೊಲೆಗೈದ ಬಳಿಕ ಮೋಹನ್ ಬಳಸುತ್ತಿದ್ದ. ಆ ಬಳಿಕ ಒಟ್ಟು ಐವರು ಯುವತಿಯರನ್ನು ಸಂಪರ್ಕಿಸಲು ಆತ ಈ ಮೊಬೈಲ್ ಸಿಮ್ ಬಳಸುತ್ತಿದ್ದ. 2009 ಸೆ.21ರಂದು ಬಂಧಿತನಾದ ಬಳಿಕ ಆತನ ಬಳಿ ಇದ್ದ ಮೊಬೈಲ್ ಫೋನ್‌ನ ಕರೆಗಳ ವಿವರಗಳನ್ನು ಸಂಗ್ರಹಿಸಿದಾಗ ಈ ವಿಷಯ ಗೊತ್ತಾಗಿದೆ. ಐವರು ಯುವತಿಯರ ಬಗೆಗಿನ ಮಾಹಿತಿ ಕಲೆ ಹಾಕಲು ಪೊಲೀಸರಿಗೆ ಈ ಮೊಬೈಲ್ ಸಿಮ್ ಸಹಕಾರಿಯಾಗಿತ್ತು. 9 ಪ್ರಕರಣಗಳಲ್ಲಿ ಶಿಕ್ಷೆ
ಈ ಎರಡು ಪ್ರಕರಣಗಳ ವಿಚಾರಣೆಯೊಂದಿಗೆ ಒಟ್ಟು 9 ಪ್ರಕರಣಗಳಲ್ಲಿ ಮೋಹನ್ ಕುಮಾರನಿಗೆ ಶಿಕ್ಷೆ ವಿಧಿಸಿದಂತಾಗಿದೆ.ಇನ್ನೂ ಹಲವು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.