Advertisement

2 ರೂಪಾಯಿ ಇಡ್ಲಿ!

09:11 PM Nov 25, 2019 | Sriram |

ರಾಜಕೀಯವಾಗಿ ಸದಾ ಸುದ್ದಿಯಲ್ಲಿರುವ, ಪ್ರವಾಸಿ ತಾಣವೂ ಆದ ರಾಮನಗರ ಜಿಲ್ಲೆಯ ಕನಕಪುರ ಇಡ್ಲಿಗೂ ಫೇಮಸ್‌. ಕೋಟೆ ಆಗ್ರಹಾರ ಬೀದಿಯಲ್ಲಿರುವ ಕೆ.ಎಸ್‌.
ರಾಮಚಂದ್ರ ಅವರ “ಕೋಟೆ ಇಡ್ಲಿ ಮನೆ’ ಸ್ಥಳೀಯವಾಗಿ ಚಿರಪರಿಚಿತ.

Advertisement

ಮೃದುವಾದ ಪುಟ್ಟ ಇಡ್ಲಿಯನ್ನು ಹುರಿಗಡ್ಲೆ ಜೊತೆ ಒಣಮೆಣಸಿನಕಾಯಿ ಹಾಕಿ ಮಾಡಿದ ಚಟ್ನಿಯಲ್ಲಿ ಅದ್ದಿಕೊಂಡು ತಿಂದರೆ ವಾಹ್‌, ಎಂಥಾ ಟೇಸ್ಟ್‌ ಅನಿಸುವುದುಂಟು. ಇನ್ನು ಇಡ್ಲಿಯ ದರ ಕೇಳುವುದೇ ಬೇಡ, ಕೇಳಿದ್ರೆ ನೀವೇ ಅಶ್ಚರ್ಯ ಪಡ್ತೀರಿ. ಒಂದು ಇಡ್ಲಿಯ ಬೆಲೆ ಕೇವಲ 2 ರೂ. ಮಾತ್ರ. ಈ ಬೆಲೆ ಕಡಿಮೆ ಇದೆಯೆಂದು ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಲ್ಲ. ಸೋಡ ಹಾಕಲ್ಲ.

ಈ ಹೋಟೆಲನ್ನು 1972ರಲ್ಲಿ ರಾಮಚಂದ್ರ ಅವರ ತಂದೆ ಶೇಷಪ್ಪ ಹಾಗೂ ತಾಯಿ ಸುಭದ್ರಮ್ಮ ಪ್ರಾರಂಭಿಸಿದ್ರು. ಚಿಕ್ಕದಾಗಿ ಗುಡಿಸಲು ಹಾಕಿಕೊಂಡು 20 ಇಡ್ಲಿ ಮಾಡುವ
ಪಾತ್ರೆಯೊಂದಿಗೆ ಹೋಟೆಲ್‌ ಆರಂಭಿಸಿದ ಸುಭದ್ರಮ್ಮ, 1 ರೂ.ಗೆ 10 ಇಡ್ಲಿ ಕೊಡ್ತಾ ಇದ್ರಂತೆ. ಆಗತಾನೆ ಬಿ.ಎ.ಮುಗಿಸಿದ್ದ ರಾಮಚಂದ್ರ, 1982ರಿಂದ ಹೋಟೆಲ್‌
ಉಸ್ತುವಾರಿ ವಹಿಸಿಕೊಂಡು ಪತ್ನಿ ನಿರ್ಮಲಾ ಸಹಕಾರದಿಂದ ಮುನ್ನಡೆಸುತ್ತಿದ್ದಾರೆ. ಇವರಿಗೆ ಪುತ್ರ ಅನಂತ್‌, ಲಕ್ಷ್ಮೀ ಸಾಥ್‌ ನೀಡುತ್ತಾರೆ.

ಈಗಲೂ ಸೌದೆ ಬಳಕೆ ರಾಮಚಂದ್ರ ಈಗಲೂ ಕಟ್ಟಿಗೆ ಒಲೆಯಲ್ಲೇ ಇಡ್ಲಿ
ಬೇಯಿಸೋದು. ಎರಡು ದೊಡ್ಡ ಅಂಡೆ ಒಲೆ ಮಾಡಿಸಿರುವ ಇವರು, ಒಮ್ಮೆಗೆ 500 ಇಡ್ಲಿ ಬೇಯಿಸುತ್ತಾರೆ. ದಿನಕ್ಕೆ 7 ರಿಂದ 8 ಉಬ್ಬೆ ಬೇಯಿಸುತ್ತಾರೆ. ಇಲ್ಲಿ ಪ್ಲಾಸ್ಟಿಕ್‌ ನಿಷೇಧ.
ಇಡ್ಲಿ ಬೇಯಿಸಲೆಂದೇ ಪ್ರತ್ಯೇಕವಾಗಿ ಬಟ್ಟೆಯನ್ನು ತೆಗೆದಿಟ್ಟಿದ್ದಾರೆ.

10 ಜನ ಕೂತು ತಿನ್ನುವಷ್ಟು ವಿಸ್ತಾರ ಹೊಂದಿರುವ ಹೆಂಚಿನ ಮನೆಯಲ್ಲೇ ಹೋಟೆಲ್‌ ನಡೆಸಲಾಗುತ್ತಿದೆ. ಬಹುತೇಕ ಮಂದಿ ನಿಂತುಕೊಂಡೇ ತಿಂದು ಹೋಗ್ತಾರೆ.
ಇನ್ನು ಹೋಟೆಲ್‌ ಕೆಲಸಕ್ಕೆ ಹೊರಗಿನ ಜನರನ್ನು ಇಟ್ಟುಕೊಂಡಿಲ್ಲ. ಅನಂತ್‌ ತಿಂಡಿ ಸಪ್ಲೆ„ ಜೊತೆ ಕ್ಯಾಷಿಯರ್‌ ಕೆಲಸವನ್ನೂ ನೋಡಿಕೊಳ್ಳುತ್ತಾರೆ. ಇಡ್ಲಿ ಬೇಯಿಸುವ ಕೆಲಸ
ಮಾತ್ರ ರಾಮಚಂದ್ರ ಅವರದ್ದೇ.

Advertisement

ಹೋಟೆಲ್‌ ಸಮಯ: ಬೆಳಗ್ಗೆ 6.30 ರಿಂದ ಮಧ್ಯಾಹ್ನ 2 ಗಂಟೆ, ವಾರದ ರಜೆ ಇಲ್ಲ.

ಹೋಟೆಲ್‌ ವಿಳಾಸ: ಕೋಟೆ ಅಗ್ರಹಾರ ಬೀದಿ, ಹಂಸವೇಣಿ ಸ್ಕೂಲ್‌ ಎದುರು, ಕನಕಪುರ ಪಟ್ಟಣ.

-ಭೋಗೇಶ್‌ ಆರ್‌.ಮೇಲುಕುಂಟ

Advertisement

Udayavani is now on Telegram. Click here to join our channel and stay updated with the latest news.

Next